ಡೋರಿಯನ್ ಚಂಡಮಾರುತಕ್ಕೆ ಬಹಾಮಾಸ್ ಜನರ ಬದುಕೇ ಸರ್ವನಾಶ: ನೆರವಿಗೆ ನಿಂತ ಭಾರತ
ಹಿಂದೆಂದು ಕಂಡು ಕೇಳಯರಿದಂತ ಡೋರಿಯನ್ ಚಂಡಮಾರುತ ಹೊಡೆತಕ್ಕೆ ಸಿಲುಕಿ ದ್ವೀಪರಾಷ್ಟ್ರ ಬಹಾಮಾಸ್ ನಲುಗುತ್ತಿದೆ.ಈ ವರೆಗೆ 50ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದಾರೆ. ಎಲ್ಲವನ್ನೂ ಕಳೆದುಕೊಂಡು ತುತ್ತು ಅನ್ನಕ್ಕೂ ಜನರು ಪರದಾಡುತ್ತಿದ್ದಾರೆ. ಬಹಾಮಾಸ್ ನ ಅಬಾಕೋ ದ್ವೀಪ ಸರ್ವನಾಶವಾಗಿದ್ದು, 500ಕ್ಕೂ ಹೆಚ್ಚು ಬರಿಗೈಯಲ್ಲಿ ಬೀದಿಗೆ ಬಿದ್ದಿದ್ದಾರೆ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿದ ಬಹಾಮಾಸ್ ದೇಶಕ್ಕೆ ಭಾರತ ನೆರವಿಗೆ ಬಂದಿದ್ದು, ಮಾನವೀಯ ನೆರವಾಗಿ ಒಂದು ಮಿಲಿಯನ್ ಯುಎಸ್ ಡಾಲರ್ ಅನುದಾನ ಘೋಷಣೆ ಮಾಡಿದೆ. ವಿದೇಶಾಂಗ ಇಲಾಖೆ ವಕ್ತಾರ ರವೀಶ್ ಕುಮಾರ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಬಹಾಮಾಸ್ ಜನರ ಕಷ್ಟ ಸಮಯದಲ್ಲಿ ಬೆಂಬಲವಾಗಿ ಭಾರತೀಯರು ಎಂದಿಗೂ ನಿಲ್ಲುತ್ತಾರೆ. ಡೋರಿಯನ್ ಚಂಡಮಾರುತದಿಂದಾಗಿ ಬಹಾಮಾಸ್ ನಲ್ಲಿ ಉಂಟಾದ ಸಾವು- ನೋವಿಗೆ ಭಾರತೀಯರು ದು:ಖಿತರಾಗಿದ್ದಾರೆ. ಹೀಗಾಗಿ ಬಹಾಮಾಸ್ ಜನರ ನೆರವಿಗಾಗಿ ಒಂದು ಮಿಲಿಯನ್ ಯುಎಸ್ ಡಾಲರ್ ನೀಡಲಿದ್ದೇವೆ ಎಂದು ತಿಳಿಸಿದ್ದಾರೆ. ಡೋರಿಯನ್ ಚಂಡಮಾರುತದಿಂದಾಗಿ ಇಡೀ ಬಹಾಮಾಸ್ ದ್ವೀಪ ರಾಷ್ಟ್ರವೂ ಅಕ್ಷರಶ: ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ. ನಿತ್ಯವೂ ಸಾವಿನ ಸಂಖ್ಯೆ ಏರುತ್ತಲೇ ಇದೆ. ಸಾವಿರಾರು ಜನರು ಮನೆ, ಮಠ, ಕುಟುಂಬವನ್ನು ಕಳೆದು ಬೀದಿಯಲ್ಲಿ ನಿಂತು ಕಣ್ಣೀರು ಸುರಿಸುತ್ತಿದ್ದಾರೆ. ಭಾರತ ತಕ್ಷಣವೇ ಬಹಾಮಾಸ್ ಜನರ ಕಷ್ಟಕ್ಕೆ ಸ್ಪಂದಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. |