ಪಾಕ್ ಮತ್ತೆ ಎಡವಟ್ಟು: ಹೂಡಿಕೆದಾರರ ಸೆಳೆಯಲು ಬೆಲ್ಲಿ ಡ್ಯಾನ್ಸ್ ಪ್ರದರ್ಶನ ಏರ್ಪಾಡು
ಪಾಕಿಸ್ತಾನದಲ್ಲಿ ಹಿಂದೆಂದೂ ಕೇಳರಿಯದ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಜನರು ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿಗೆ ಬಂದು ತಲುಪಿದೆ. ಭಾರತದ ವಿರುದ್ಧ ನಿತ್ಯ ಯುದ್ಧಾಂತಕ ಹೇಳಿಕೆ ಕೊಡುವ ಇಮ್ರಾನ್ ಖಾನ್ ಕಚೇರಿಯಲ್ಲೇ ವಿದ್ಯುತ್ ಸಂಪರ್ಕ ಇಲ್ಲವೆಂದರೆ ಅಲ್ಲಿನ ಪರಿಸ್ಥಿತಿ ನೀವೇ ಅರ್ಥ ಮಾಡಿಕೊಳ್ಳಿ. ಇಂಥ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಾವೇ ಆಯೋಜಿಸಿದ ಹೂಡಿಕೆ ಸಮಾವೇಶದಲ್ಲಿ ಹೂಡಿಕೆದಾರರ ಸೆಳೆಯಲು ಬೆಲ್ಲಿಡ್ಯಾನ್ಸ್ ಏರ್ಪಡಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಮುಖಭಂಗ ಅನುಭವಿಸಿದೆ. ಅಜೆರ್ ಬೈಜಾನ್ ದೇಶದ ಬಾಕು ನಗರಿಯಲ್ಲಿ ಸೆಪ್ಟೆಂಬರ್ 4 ರಿಂದ 8 ರವರೆಗೆ ಪಾಕಿಸ್ತಾನ ಹೂಡಿಕೆದಾರರ ಸಮಾವೇಶ ಆಯೋಜಿಸಿತ್ತು. ನಿತ್ಯ ಉಗ್ರರ ಪೋಷಿಸುವ ಪಾಕ್ನಲ್ಲಿ ಹೂಡಿಕೆ ಮಾಡಲು ಉದ್ಯಮಿಗಳು ಮುಂದಾಗಲಿಲ್ಲ. ಹೀಗಾಗಿ ಕಂಗಾಲಾದ ಪಾಕಿಸ್ತಾನ ಕೊನೆಯ ದಿನ ಹೂಡಿಕೆದಾರರ ಸೆಳೆಯಲು ಬೆಲ್ಲಿ ನೃತ್ಯಗಾರ್ತಿಯರಿಂದ ಪ್ರದರ್ಶನ ಏರ್ಪಡಿಸಿತ್ತು. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಇಡೀ ವಿಶ್ವವೇ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದೆ. ಪಾಕಿಸ್ತಾನ ಮಾಧ್ಯಮಗಳೇ ಇದು ಪಾಕಿಸ್ತಾನದ ಹೊಸ ದಾರಿ ಎಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಕಿಡಿಕಾರಿವೆ. ಸ್ವತ: ಪಾಕಿಸ್ತಾನಿಗಳೇ ಭಾರತ ಚಂದ್ರಯಾನ- 2 ನಡೆಸಿ ಯಶಸ್ವಿಯಾಗುತ್ತಿದ್ದರೆ, ಪಾಕಿಸ್ತಾನ ಇನ್ನೂ ಬೆಲ್ಲಿಡ್ಯಾನ್ಸ್ನಲ್ಲೇ ಮುಳುಗಿದೆ ಎಂದು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ. |