ಹವಾಲ ದಂಧೆ ಪ್ರಕರಣ: ಹರ್ಯಾಣ ಮಾಜಿ ಸಿಎಂ, ಕಾಂಗ್ರೆಸ್ಸಿನ ಹೂಡಾ 30 ಕೋಟಿ ರೂ. ಆಸ್ತಿ ಜಪ್ತಿ ![]()
ದಿನೇದಿನೆ ಕಾಂಗ್ರೆಸ್ಸಿನ ಹಗರಣಗಳು ಸುದ್ದಿಯಾಗುತ್ತಿದ್ದು, ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಪಿ.ಚಿದಂಬರಂ, ಕಾರ್ತಿ ಚಿದಂಬರಂ ಹಾಗೂ ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಹಲವು ನಾಯಕರ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಿವೆ. ಇದರ ಬೆನ್ನಲ್ಲೇ, ಹವಾಲ ದಂಧೆಯಲ್ಲಿ ತೊಡಗಿದ ಆರೋಪದಲ್ಲಿ ಹರ್ಯಾಣದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ಸಿನ ಹಿರಿಯ ನಾಯಕ ಭೂಪಿಂದರ್ ಸಿಂಗ್ ಹೂಡಾ ಅವರಿಗೆ ಸಂಬಂಧಿಸಿದ 30 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಭೂಪಿಂದರ್ ಸಿಂಗ್ ಹೂಡಾ ಅವರು ಹರ್ಯಾಣದ ಮುಖ್ಯಮಂತ್ರಿ ಆಗಿದ್ದಾಗ ಪಂಚಕುಲಾದಲ್ಲಿರುವ 14 ನಿವೇಶನಗಳನ್ನು ಕಾನೂನು ಬಾಹಿರವಾಗಿ ವಶಪಡಿಸಿಕೊಂಡಿದ್ದಲ್ಲದೆ, 30 ಕೋಟಿ ರೂಪಾಯಿಗಿಂತ ಹೆಚ್ಚು ಹಣವನ್ನು ಅಕ್ರಮವಾಗಿ ವರ್ಗಾವಣೆ ಆರೋಪದಲ್ಲಿ ಹೂಡಾ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅನ್ವಯ ಜಾರಿ ನಿರ್ದೇಶನಾಲಯವು ಪ್ರಕರಣ ದಾಖಲಿಸಿದ್ದು, ಈಗ ಎಲ್ಲ ನಿವೇಶನಗಳನ್ನು ಜಪ್ತಿ ಮಾಡಿದೆ ಎಂದು ತಿಳಿದುಬಂದಿದೆ. ಇನ್ನು ಭೂಪಿಂದರ್ ಸಿಂಗ್ ಹೂಡಾ ಅವರು ಮುಖ್ಯಮಂತ್ರಿಯಾಗಿದ್ದಾಗ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಷೇರುಗಳೇ ಜಾಸ್ತಿ ಇರುವ ನ್ಯಾಷನಲ್ ಹೆರಾಲ್ಡ್ ಕಂಪನಿಗೂ ಕಾನುನುಬಾಹಿರವಾಗಿ ಜಾಗ ನೀಡಿದ ಆರೋಪ ಹೊತ್ತಿದ್ದಾರೆ.
|