Log in
  • ಮುಖಪುಟ
  • ಸ್ಪೀಕರ್ ಎಂದರೆ ಬರೀ ಮಾತುಗಾರನಲ್ಲ

ಸ್ಪೀಕರ್ ಎಂದರೆ ಬರೀ ಮಾತುಗಾರನಲ್ಲ

ಶ್ರೀಧರಪ್ರಭು, ವಕೀಲರು 

ಅತ್ಯಂತ ದುರ್ಭರ ಪರಿಸ್ಥಿತಿಯಲ್ಲಿ ಭಾರತದ ಐಕ್ಯತೆ ಮತ್ತು ಸಮಗ್ರತೆಯನ್ನು ಸಾಧಿಸಿದ ಮತ್ತು ಜಾಗರೂಕತೆಯಿಂದ ಕಾಪಾಡಿದ ಲೋಹಪುರುಷ ಸದಾರ್ ವಲ್ಲಭಭಾಯಿ ಪಟೇಲರ ಜೀವನ ಮತ್ತು ಸಾಧನೆಗಳನ್ನು ಮರೆಮಾಚಲು ನೆಹರು ಕುಟುಂಬ ಮತ್ತವರ ಸರಕಾರಗಳು ಸಾಕಷ್ಟು ವರ್ಷಗಳು ಸಂಘಟಿತ ಪ್ರಯತ್ನ ಮಾಡಿವೆ. ಸೂರ್ಯನ ಬೆಳಕನ್ನು ಅಂಗೈಯಿಂದ ತಡೆಯಬಹುದೇ?

ಪಟೇಲರ ಖ್ಯಾತಿ ಇಂದು ದೇಶದಲ್ಲಿ ಮಾತ್ರವಲ್ಲ ಪ್ರಪಂಚಕ್ಕೆಲ್ಲ ಪಸರಿಸಿದೆ. ಆಗಸದೆತ್ತರದ ಐಕ್ಯತಾ ಪ್ರತಿಮೆ ಪಟೇಲರ ಜೀವನ ಮತ್ತು ಸಂದೇಶಗಳನ್ನು ಮುನ್ನೆಲೆಗೆ ತರಲು ಸಾಕಷ್ಟು ಸಹಾಯಕಾರಿಯಾಗಿದೆ. ಈ ಐತಿಹಾಸಿಕ ಪುನರುತ್ಥಾನ ನಮ್ಮ ತಲೆಮಾರಿನ ಸೌಭಾಗ್ಯ.

ಆದರೆ, ವಲ್ಲಭಭಾಯಿ ಪಟೇಲರಷ್ಟೇ ಉಜ್ವಲ ದೇಶಭಕ್ತಿ ಮತ್ತು ತ್ಯಾಗವನ್ನು ಮೆರೆದ ಅವರ ಹಿರಿಯ ಸೋದರ ವಿಠ್ಠಲಭಾಯಿ ಪಟೇಲರನ್ನು ದೇಶ ಮರೆತೇಹೋಗಿದೆ. ಇದು ನಮ್ಮ ದುರ್ಭಾಗ್ಯ.

ಶಾಸಕಾಂಗ, ಸಂಸದೀಯ ಕಾರ್ಯಪ್ರಣಾಳಿ, ಪದ್ಧತಿಗಳು ಮತ್ತು ಸ್ವತಂತ್ರ ಶಾಸಕಾಂಗಕ್ಕೆ ಸ್ವತಂತ್ರ ಸಿಬ್ಬಂದಿ ಮತ್ತು ಸಚಿವಾಲಯ ಮುಂತಾದವನ್ನು ರಚಿಸಿಕೊಟ್ಟವರು ವಿಠ್ಠಲಭಾಯಿ ಪಟೇಲ್. ಸಭಾಪತಿ ಹುದ್ದೆಯ ಅಧಿಕಾರವ್ಯಾಪ್ತಿ, ದಾಯಿತ್ವ ಮತ್ತು ಕರ್ತವ್ಯಗಳ ಜೊತೆಗೆ ಘನತೆ ಮತ್ತು ಗೌರವಗಳೇನೆಂದು ತೋರಿಸಿಕೊಟ್ಟವರು ಪಟೇಲರು. ಸ್ವಾತಂತ್ರ್ಯ ಹೋರಾಟ ಚರಮಸೀಮೆಯಲ್ಲಿದ್ದಾಗಲೂ ತಮ್ಮ ಹುದ್ದೆಯ ಸ್ವಾತಂತ್ರ್ಯವನ್ನೆಂದೂ ಬಲಿಕೊಡದೇ ಇದ್ದವರು. ವಿಠ್ಠಲಭಾಯಿ ಸ್ವರಾಜ್ ಪಾರ್ಟಿಯ ಸ್ಥಾಪಕರಾದರೂ, ಸಭಾಧ್ಯಕ್ಷರಾದ ಮೇಲೆ ಯಾವ ಪಕ್ಷರಾಜಕಾರಣದ ಹಂಗಿಗೂ ಒಳಗಾಗದೇ ಉಳಿದವರು.

1923 ರಲ್ಲಿ ಕೇಂದ್ರ ಶಾಸನಸಭೆಗೆ (ಇಂದಿನ ಲೋಕಸಭೆ) ಆಯ್ಕೆಯಾದ ಪಟೇಲರು 1925 ರಲ್ಲಿ ಶಾಸನಸಭೆಯ ಅಧ್ಯಕ್ಷರಾಗಿ (ಇಂದಿನ ಸ್ಪೀಕರ್ ಹುದ್ದೆಗೆ ಸಮನಾದದ್ದು) ಚುನಾಯಿತರಾದರು. ದೇಶವೇ ಪರಾಧೀನವಾಗಿದ್ದಾಗ ಜನಪ್ರತಿನಿಧಿತ್ವ ಅಥವಾ ಶಾಸಕಾಂಗದ ಮಹತಿ ಬಿಡಿ, ಪರಿಕಲ್ಪನೆಯಾದರೂ ಏನಿದ್ದೀತು? ಯಾವುದೇ ಐತಿಹಾಸಿಕ ಅಥವಾ ರೂಢಿಗತ (precedent)

ಪದ್ಧತಿಗಳಿಲ್ಲದಿದ್ದ ಕಾಲದಲ್ಲಿ ವಿಠ್ಠಲಭಾಯಿ ಪಟೇಲರು ಶಾಸಕಾಂಗ ಮತ್ತದರ ಸಂಸ್ಥೆಗಳು ಹೇಗೆ ಕಾರ್ಯನಿರ್ವಹಿಸಬೇಕು ಮತ್ತು ಶಾಸಕಾಂಗದ ಮುಖ್ಯಸ್ಥರಾಗಿ ಸಭಾಧ್ಯಕ್ಷರು ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ಮಾದರಿ ರೂಪಿಸಿಕೊಟ್ಟವರು.

ನಂತರದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ದೇಶವೇ ಓರ್ವ ವ್ಯಕ್ತಿಯಂತೆ ದುಮುಕಿದಾಗ, ತಾವು ತಟಸ್ಥರಾಗಿರುವುದು ಸರಿಯಲ್ಲ ಎಂಬ ಕಾರಣಕ್ಕೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸ್ವಾತಂತ್ರ್ಯ ಚಳುವಳಿಗೆ ಧುಮುಕಿದರು. ತಾವು ಸಭಾಧ್ಯಕ್ಷರಾಗಿದ್ದಷ್ಟೂ ಕಾಲ, ಶಾಸಕಾಂಗದ ಸ್ವಾಯತ್ತತೆ ಮತ್ತು ಸಭಾಧ್ಯಕ್ಷ ಸ್ಥಾನದ ಪಕ್ಷಾತೀತತೆಯನ್ನು ಕಾಪಾಡಿಕೊಂಡು ಹೋದರು. ಇಂದು ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ನಡೆಯುವ ಹೆಚ್ಚಿನ ಕಲಾಪಗಳನ್ನು ಜಾರಿಗೆ ತಂದದ್ದು ಪಟೇಲರೇ. ನೂರಾರು ವರ್ಷಗಳ ಸಂಸದೀಯ ಇತಿಹಾಸವಿರುವ ಬ್ರಿಟಿಷರೇ ಇವರನ್ನು ಗೌರವಿಸುತ್ತಿದ್ದರು; ಅಷ್ಟೇ ಅಲ್ಲ, ತಮಗೇ ಗೊತ್ತಿಲ್ಲದ ಅನೇಕ ವಿಚಾರಗಳನ್ನು ಬ್ರಿಟಿಷ್ ಅಧಿಕಾರಿಗಳು ಮತ್ತು ನ್ಯಾಯಾಧೀಶರು ವಿಠ್ಠಲಭಾಯಿಯವರನ್ನು ಸಂಪರ್ಕಿಸಿ ತಿಳಿದುಕೊಳ್ಳುತ್ತಿದ್ದರು. ದೇಶದ ಸ್ವಾತಂತ್ರ್ಯ ಒಂದೇ ಕುಟುಂಬದ ಗೈಮೆಯೆಂಬಂತೆ ಬಿಂಬಿಸುವ ಹುನ್ನಾರದಲ್ಲಿ ಇಂತಹ ಮಹಾನ್ ಪ್ರಭೃತಿಗಳನ್ನು ಮರೆಸುವ ಹುನ್ನಾರಗಳು ಸಾಕಷ್ಟಾಗಿವೆ. ಆದರೂ, ಒಂದು ಶತಮಾನದ ಹಿಂದೆ, 1925 ರಿಂದ 1930 ರವರೆಗೆ ಕೇವಲ 5 ವರ್ಷಗಳ ಕಾಲ ಸಭಾಧ್ಯಕ್ಷ ಸ್ಥಾನವನ್ನಲಂಕರಿಸಿದರೂ, ವಿಠ್ಠಲಭಾಯಿ ಪಟೇಲ್ ಮರೆಯದ ಛಾಪನ್ನು ಮೂಡಿಸಿ ಮರೆಯಾದದ್ದನ್ನು ಮರೆಯಲಾಗದು.

ತಮ್ಮ ಹುದ್ದೆಯನ್ನು ತೊರೆಯುವಾಗ ಪಟೇಲರು ಹೇಳಿದ್ದು ಅತ್ಯಂತ ಮಾರ್ಮಿಕವಾಗಿದೆ ‘ನನ್ನಿಂದ ಸಾಧ್ಯವಾದಷ್ಟೂ ನಿಷ್ಪಕ್ಷಪಾತ ಮತ್ತು ನ್ಯಾಯಾಪರತೆಯಿಂದ ಕಾರ್ಯಕಲಾಪಗಳನ್ನು ನಡೆಸಿದ್ದೇನೆ. ಶಾಸಕಾಂಗದ ಸ್ವಾಯತ್ತತೆ ಕಾಪಾಡಲು ಸಭಾಧ್ಯಕ್ಷರಿಗೆ ಕಾರ್ಯಂಗ ಮತ್ತು ಸರಕಾರದ ಹಂಗಿನಲ್ಲಿರದೇ, ತಮ್ಮದೇಸ್ವತಂತ್ರ ಕಾರ್ಯಾಲಯ ಮತ್ತು ಸಿಬ್ಬಂದಿ ಹೊಂದಿರಬೇಕು, ಎಂಬುದನ್ನು ಬರಿ ಪ್ರತಿಪಾದಿಸಿದ್ದಲ್ಲದೇ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದ್ದೇನೆ. ಆದರೆ, ನನ್ನ ಹುದ್ದೆಯ ಸ್ವಾತಂತ್ರ್ಯಕ್ಕಿಂತಲೂ ಹೆಚ್ಚು ಮುಖ್ಯವಾದದ್ದು ನನ್ನ ದೇಶದ ಸ್ವಾತಂತ್ರ್ಯ.

ನನ್ನ ತಾಯಿಯೇ ಬಂಧನದಲ್ಲಿರುವಾಗ ನಾನು ನನ್ನ ಹುದ್ದೆಯನ್ನು ಅಲಂಕರಿಸಿ ಏನು ಮಾಡಲಿ? ಈ ಪಂಜರದಲ್ಲಿನ ಸ್ವಾತಂತ್ರ್ಯವನ್ನು ತೊರೆದು, ಸಂಪೂರ್ಣ ದೇಶದ ಸ್ವಾತಂತ್ರ್ಯವನ್ನು ಸಾಧಿಸಲು ಸಾಧ್ಯವಾಗಿಸುವ ಹೊಸ ಕ್ಷಿತಿಜಕ್ಕೆ ದುಮುಕುತ್ತಿದ್ದೇನೆ

***

ಹೀಗೆ ಘೋಷಿಸಿ, ವಿಠ್ಠಲಭಾಯಿ ಪಟೇಲರು ದೇಶದ ಸ್ವತಂತ್ರ ಸಂಗ್ರಾಮಕ್ಕೆ ಮತ್ತೊಮ್ಮೆ ದುಮುಕಿದರು.

ತಮ್ಮ ಕೊನೆಗಾಲದಲ್ಲಿ ಜಿವೀವಾದಲ್ಲಿ ಕೊನೆಯುಸಿರೆಳೆದ ಪಟೇಲರು ತಮ್ಮ ಸಂಪೂರ್ಣ ಆಸ್ತಿಯ ಅರ್ಧಭಾಗವನ್ನು ನೇತಾಜಿ

ಸುಭಾಷರ ಸ್ವಾತಂತ್ರ ಹೋರಾಟಕ್ಕೆ ಧಾರೆಯೆರೆದಿದ್ದರು. ಪಟೇಲರ ನಂತರ ಸ್ಪೀಕರ್ ಹುದ್ದೆಗೆ ಗೌರವ ತಂದುಕೊಟ್ಟವರು ದಾದಾಸಾಹೇಬ್ ಗಣೇಶ್ ವಾಸುದೇವ

ವಲಂಕರ್. ಮೊದಲು ಮುಂಬೈ ವಿಧಾನಸಭೆಯ ಅಧ್ಯಕ್ಷರಾಗಿ, ನಂತರದಲ್ಲಿ ಭಾರತದ ಕೇಂದ್ರ ಶಾಸಕಾಂಗದ ಅಧ್ಯಕ್ಷರಾಗಿ, ಕಾನೂನು ರಚನೆಗೆ ಸಮರ್ಪಿತವಾದ ಶಾಸಕಾಂಗವನ್ನು ಸಂವಿಧಾನ ರಚನಾಸಭೆಯನ್ನಾಗಿ ಪರಿವರ್ತಿಸಿದಾಗ ಈ ಪರ್ವ ಪರಿವರ್ತನೆಯನ್ನು ಸಮರ್ಥವಾಗಿ ನಿಭಾಯಿಸಿದವರು ವಲವಂಕರರು. ಅಗತ್ಯ ಬಿದ್ದಾಗ ನೆಹರು ಸರಕಾರದ ಕಿವಿಹಿಂಡಿ, ಹಾಗೆಯೆ ವಿರೋಧ ಪಕ್ಷದವರನ್ನು ಹದ್ದುಬಸ್ತಿನಲ್ಲಿಟ್ಟು ಸಂಸದೀಯ ಕಲಾಪಗಳನ್ನು ಯಾವುದೇ ಅಡೆತಡೆಗಳಿಲ್ಲದೇ ನಡೆಸಿಕೊಂಡು ಹೋಗುವ ಛಾತಿ ಮತ್ತು ಚಾಣಕ್ಯತೆ ಎರಡೂ ಇವರಲ್ಲಿತ್ತು. 1954 ರಲ್ಲಿ ಇವರ ವಿರುದ್ಧ ವಿರೋಧ ಪಕ್ಷದವರು ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗ. ನೆಹರು ಸಂಸತ್ತಿನಲ್ಲಿ ಭಾಷಣ ಮಾಡುತ್ತ, ಯಾವುದೇ ದೊಡ್ಡ ವ್ಯಕ್ತಿಯನ್ನು ಪ್ರಶ್ನಿಸುವಾಗ, ನಮ್ಮ ಯೋಗ್ಯತೆಯೂ ಬಯಲಾಗುತ್ತಿರುತ್ತದೆ ಎಂಬ ಜಾಗೃತಿ ನಮ್ಮಲ್ಲಿರಲಿ ಎಂಬುದಾಗಿ ಹೇಳಿದ್ದರು. ಕೊನೆಗೆ ಈ ಪ್ರಸ್ತಾವನೆ ಬಿದ್ದುಹೋಯಿತು.

ಸಂಸತ್ತಿನ ಬಹುತೇಕ ಕಲಾಪಗಳನ್ನು ಜನಪರಗೊಳಿಸಿದ್ದು, ಸರಕಾರವನ್ನು ಉತ್ತರದಾಯಿಯನ್ನಾಗಿ ಮಾಡಿದ್ದೂ ಅಲ್ಲದೇ.ಮಾವಲಂಕರ್ ವಿನಾಕಾರಣ ಸಭಾತ್ಯಾಗ ಮಾಡಿದರೆ, ಕಲಾಪಗಳಿಗೆ ಅಡ್ಡಿಪಡಿಸಿದರೆ ವಿರೋಧ ಪಕ್ಷಗಳನ್ನೂ ತರಾಟೆಗೆ ತೆಗೆದುಕೊಳ್ಳುತ್ತಿದ್ದರು.

ಸಭಾಧ್ಯಕ್ಷರು ತಮ್ಮ ಸ್ಥಾನವನ್ನಲಂಕರಿಸಿದಾಗ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಬೇಕೆ ಬೇಡವೇ ಎಂಬುದು ಚರ್ಚಾರ್ಹ ವಿಷಯ. ಸ್ಪೀಕರ್ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡದಿದ್ದರೆ, ಪಕ್ಷವಿರೋಧಿ ಚಟುವಟಿಕೆಯಡಿ ಅವರನ್ನು ಸದಸ್ಯತ್ವದಿಂದ ಉಚ್ಚಾಟಿಸಬಹುದೇ? ಇದು ಸಾಧ್ಯವಿಲ್ಲದಿರಬಹುದು; ಆದರೂ, ಪಕ್ಷದ ಸದಸ್ಯರಾಗಿದ್ದುಕೊಂಡೇ ಸ್ಪೀಕರ್ ಆಗಿದ್ದರೆ ಏನಾಗಬಹುದು. ನೋಡಿ. ಕಾಂಗ್ರೆಸ್ ನೇತೃತ್ವದ ಎರಡನೇ ಯುಪಿಎ ಅವಧಿಯಲ್ಲಿ ಸಭಾಧ್ಯಕ್ಷರಾಗಿದ್ದ ಸೋಮನಾಥ ಚಟರ್ಜಿ ಪ್ರಬುದ್ಧ ವ್ಯಕ್ತಿತ್ವದವರು.

ಸಿಪಿಎಂನವರು ಕೇಂದ್ರ ಸರಕಾರದಿಂದ ಬೆಂಬಲ ವಾಪಸು ಪಡೆದಾಗ ಸೋಮನಾಥ್ ಚಟರ್ಜಿ ಸಿಪಿಎಂ ಪರವಾಗಿ ಮತ ಚಲಾಯಿಸಲಿಲ್ಲ. ಸಂವಿಧಾನದಡಿ ಸಭಾಧ್ಯಕ್ಷರು ತಟಸ್ಥರಾಗಿರಬೇಕಿರುವ ಅಗತ್ಯತೆಯನ್ನು ಹೇಳಿದ ಸೋಮನಾಥರಿಗೆ ಸಿಪಿಎಂ ನವರು ಹೇಳಿದ್ದೇನು

ಗೊತ್ತೇ? ‘ನೀವು ಭಾರತದ ಸಂವಿಧಾನವನ್ನು ಪಾಲಿಸಿರಬಹುದು. ಆದರೆ, ಇದಕ್ಕಿಂತಲೂ ಹೆಚ್ಚು ಗೌರವಿಸಬೇಕಾದ ಪಕ್ಷದ ಸಂವಿಧಾನವನ್ನು ಉಲ್ಲಂಘಿಸಿದ್ದೀರಿ! ಆದ್ದರಿಂದ ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಮಾಡಿದ್ದೇವೆ’ ಸೋಮನಾಥ ಚಟರ್ಜಿ ಪಕ್ಷಕ್ಕೆ ರಾಜೀನಾಮೆ ನೀಡಿ ಸ್ಪೀಕರ್ ಆಗಿದ್ದರೆ ಈ ಅಪಮಾನವನ್ನು ಸಹಿಸಬೇಕಿತ್ತೇ? ಅದೇನೇ ಇರಲಿ, ದೇಶದ ಸಂವಿಧಾನಕ್ಕಿಂತಲೂ ಕಮ್ಯುನಿಸ್ಟರಿಗೆ ತಮ್ಮ ಪಕ್ಷದ ಸಂವಿಧಾನವೇ ಹೆಚ್ಚು! ಇದು ಕಮ್ಯುನಿಸ್ಟರಿಗಿರುವ ಸಂವಿಧಾನ ನಿಷ್ಠೆ! ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದ ಕೆ. ಎಸ್. ಹೆಗ್ಡೆ ತುರ್ತು ಪರಿಸ್ಥಿತಿ ಕಳೆದು ಜನತಾ ಪಾರ್ಟಿ ಸರಕಾರ ಬಂದ ಅವಧಿಯಲ್ಲಿ ಸ್ಪೀಕರ್ ಆಗಿದ್ದವರು. ಹೆಗ್ಡೆ ಮತ್ತು ಈ ಅವಧಿಯಲ್ಲಿ ಕಾನೂನು ಮಂತ್ರಿಯಾಗಿದ್ದ ಶಾಂತಿಭೂಷಣರ ಪ್ರಯತ್ನದಿಂದಾಗಿ ಇಂದಿರಾ ಅವಧಿಯಲ್ಲಿ ತಿರುಚಿಹಾಕಿದ ಸಂವಿಧಾನವನ್ನು ಸಾಕಷ್ಟು ಮಟ್ಟಿಗೆ ಸರಿಮಾಡಲಾಯಿತು. ಇನ್ನೆಂದೂ ತುರ್ತುಪರಿಸ್ಥಿತಿ ಹೇರಲು ಸಾಧ್ಯವಾಗದಂತೆ ಸಂವಿಧಾನವನ್ನು ರೂಪಿಸಲಾಯಿತು.

ಈ ಹೊತ್ತಿನಲ್ಲಿ ವಿಠ್ಠಲಭಾಯಿ ಪಟೇಲ್, ಮಾಲವಂಕರ್, ಕೆ. ಎಸ್. ಹೆಗ್ಡೆ, ಸೋಮನಾಥ್ ಚಟರ್ಜಿಯವರಂಥ ಅಪ್ರತಿಮರು ನೆನಪಾಗಲು ಸಕಾರಣವಿದೆ. ಶಾಸಕರ ರಾಜೀನಾಮೆ ಪ್ರಹಸನ, ರಾಜೀನಾಮೆಗಳನ್ನು ಅಂಗೀಕರಿಸಲು ವಿಳಂಬ ನೀತಿ ಅನುಸರಿಸುವ ಸಭಾಧ್ಯಕ್ಷರ ಧೋರಣೆ ಮತ್ತು ಆಡಳಿತ ಯಂತ್ರವೇ ಹದಗೆಟ್ಟುಹೋಗಿದ್ದಕ್ಕೆ ಸಾಕ್ಷಿಯಾಗಿರುವ ವರ್ತಮಾನದ ವಿದ್ಯಮಾನಗಳು ನಮ್ಮ ಇಡೀ ಶಾಸಕಾಂಗದ ಕಾರ್ಯ ವೈಖರಿಯ ಬಗ್ಗೆ ಗಂಭೀರವಾಗಿ ಯೋಚಿಸುವಂತೆ ಮಾಡಿವೆ.

ನಮ್ಮ ಇತಿಹಾಸವನ್ನು ಗಮನಿಸಿದರೆ ನಮ್ಮ ದೇಶದಲ್ಲಿ ಗಣರಾಜ್ಯಗಳ ಕಾಲದಿಂದಲೂ ರಾಜ್ಯದ ಕಲಾಪಗಳನ್ನು ನಡೆಸಲು ಅಧ್ಯಕ್ಷರ ಕಲ್ಪನೆ ಇದ್ದೇ ಇತ್ತು. ಆದರೆ, ಎಲ್ಲಾ ಸಂದರ್ಭಗಳಲ್ಲೂ ರಾಜನೇ ಸಭಾಧ್ಯಕ್ಷನಾಗಿರುತ್ತಿದ್ದ. ಕಾರ್ಯಾಂಗದ ದೃಷ್ಟಿಯಿಂದ ಸೇನಾಪತಿ, ಅಧಿಕಾರಿಗಳಾಗಿದ್ದವರು ರಾಜರ ಅಧೀನದಲ್ಲಿದ್ದರೂ ಗಣರಾಜ್ಯಗಳ ಸದಸ್ಯರುಗಳಾಗಿ,ಮಹತ್ವದ ನೀತಿನಿರ್ಧಾರದ ಸಂದರ್ಭಗಳಲ್ಲಿ ರಾಜನಷ್ಟೇ ಅಧಿಕಾರ ಮತ್ತು ರಾಜನಿಗೆ ಸಮಾನರೇ ಆಗಿರುತ್ತಿದ್ದರು. ಈ ಕಲಾಪಗಳನ್ನು, ಸಭಾಪತಿಯಾಗಿ ರಾಜನೇ ನಡೆಸುತ್ತಿದ್ದುದು ನಿಜವಾದರೂ, ಗಣರಾಜ್ಯದಲ್ಲಿ ರಾಜ ಸಾರ್ವಭೌಮನಾಗಿರಲಿಲ್ಲ. ಸಭಾಪತಿ ಮತ್ತು ರಾಜ ಒಬ್ಬನೇ ವ್ಯಕ್ತಿ ಆಗಿರಬಾರದು ಎಂಬ ಕಲ್ಪನೆ ಪ್ರಜಾಪ್ರಭುತ್ವದ ಮೂಲಕಲ್ಪನೆಯಲ್ಲೇ ಅಡಕವಾಗಿದೆ.

ಹದಿನಾಲ್ಕನೇ ಶತಮಾನದಿಂದಲೇ ಬ್ರಿಟಿಷ್ ಸಂಸತ್ತಿನಲ್ಲಿ ಸ್ಪೀಕರ್ ಪರಿಕಲ್ಪನೆಯಿದೆ. ಭಾರತದಲ್ಲಿ 1854 ರಲ್ಲೇ ಈ ಸ್ಪೀಕರ್ ಹುದ್ದೆಯನ್ನು ನಿರ್ಮಿಸುವ ಬಗ್ಗೆ ಚಿಂತನೆ ನಡೆದಿತ್ತಾದರೂ, 1919 ರಲ್ಲಿ ಮೊಂಟೆಗೋ ಚೆಮ್ಸ್ ಫರ್ಡ್ ಶಾಸಕಾಂಗ ಸುಧಾರಣೆಗಳ ಭಾಗವಾಗಿ ಬಂದ ಭಾರತ ಸರಕಾರ ಕಾಯಿದೆ ಅನುಷ್ಠಾನಕ್ಕೆ ಬರುವವರೆಗೂ ಅಧಿಕೃತವಾಗಿ ಸಭಾಧ್ಯಕ್ಷ ಹುದ್ದೆಯ ನೇಮಕಾತಿಯಾಗಿರಲಿಲ್ಲ. ಸಂಸತ್ತಿನಲ್ಲಾಗಲಿ ಅಥವಾ ರಾಜ್ಯ ವಿಧಾನಮಂಡಲಗಳಲ್ಲಾಗಲಿ ಸಭಾಧ್ಯಕ್ಷರ ಮತ್ತು ಶಾಸಕಾಂಗದ ಗೌರವವನ್ನು ಕಾಪಾಡಲು ನಮ್ಮಲಿರುವ ಸಾಂವಿಧಾನಿಕ ಪರಿಕರಗಳು ಸಮರ್ಪಕವೇ? ನಮ್ಮ ಶಾಸಕರ ರಾಜಕೀಯ ಶೀಲ (political morality) ಮತ್ತು ಸಾಂವಿಧಾನಿಕ ಶೀಲ (constitutional morality) ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಚಲಿಸಿ ಸಂಘರ್ಷಕ್ಕೆ ಕಾರಣವಾಗುತ್ತಿವೆಯೇ? ಸ್ಪೀಕರ್ ಹುದ್ದೆಯ ಘನತೆ ಮತ್ತು ಗೌರವವನ್ನು ಕಾಪಾಡಲು ಸಮರ್ಪಕ ಪ್ರಯತ್ನಗಳಾಗುತ್ತಿವೆಯೇ ಎಂಬುದನ್ನು ಒಂದು ದೇಶವಾಗಿ, ನಾಗರೀಕ ಸಮಾಜವಾಗಿ, ಪಕ್ವ ಪ್ರಜಾಪ್ರಭುತ್ವವಾಗಿ, ನಾವೆಲ್ಲರೂ ಒಟ್ಟಾಗಿ ಗಂಭೀರವಾಗಿ ಯೋಚಿಸಿಬೇಕಿದೆ.

ಮೊದಲಿಗೆ ಒಂದು ಸಣ್ಣ ಆದರೆ ಅತ್ಯಂತ ಸೂಕ್ಷ್ಮ ಸೂಕ್ಷ್ಮವನ್ನು ತೆಗೆದುಕೊಳ್ಳಿ. ಶಾಸಕರು ರಾಜೀನಾಮೆ ಕೊಟ್ಟಾಗ ಸಭಾಧ್ಯಕ್ಷರ ಹಕ್ಕು, ಕರ್ತವ್ಯ ಮತ್ತು ಕಾರ್ಯಗಳೇನು ಎಂಬುದು ವರ್ತಮಾನದ ಪ್ರಹಸನದಲ್ಲಿ ಮುನ್ನೆಲೆಗೆ ಬಂದಿದೆ.

ಸಂವಿಧಾನದ ಪರಿಚ್ಛೇದ 190 (ಬಿ) ಪ್ರಕಾರ ರಾಜ್ಯ ವಿಧಾನಮಂಡಲದ ಉಭಯ ಸದನಗಳ ಯಾವುದೇ ಸದಸ್ಯ ತನ್ನ ಹಸ್ತಾಕ್ಷರವಿರುವ ರಾಜೀನಾಮೆ ಪತ್ರವನ್ನು ಸಭಾಧ್ಯಕ್ಷರಿಗೆ ಸಲ್ಲಿಸಿದರೆ ಮತ್ತು ಅದು ಅಂಗೀಕೃತವಾದರೆ, ಸದಸ್ಯರ ಸ್ಥಾನ ಖಾಲಿಯಾಗುವುದು. 190 (ಬಿ) ಪರಿಚ್ಛೇದದ ಕೆಳಗೆ ಪರಂತುವೆಂದು ಶುರುವಾಗುವ ಶರತ್ತಿದೆ. ಸಭಾಧ್ಯಕ್ಷರು ಒಂದು ವೇಳೆ ವಿಚಾರಣೆ ನಡೆಸಿ ಅಥವಾ ಅವರಿಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಈ ರಾಜೀನಾಮೆ ಪತ್ರ ನೈಜವಾದದ್ದಲ್ಲ ಅಥವಾ ರಾಜಿನಾಮೆಯನ್ನು ಸ್ವಇಚ್ಛೆಯಿಂದ ಕೊಟ್ಟಿದ್ದಲ್ಲ ಎಂದೆನಿಸಿದರೆ ತಿರಸ್ಕರಿಸಬಹುದು. ಇನ್ನೊಂದು ವಿಶೇಷವೆಂದರೆ, ಸಂವಿಧಾನದ ಈ ಪರಿಚ್ಛೇದದಲ್ಲಿ ಅಥವಾ ಬೇರಾವುದೇ ಪರಿಚ್ಛೇದಗಳಲ್ಲಿ ರಾಜಿನಾಮೆಯನ್ನು ಎಷ್ಟು ದಿನಗಳೊಳಗೆ ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು; ಹಾಗೆಯೇ, ಪತ್ರದ ನೈಜತೆಯ ವಿಚಾರಣೆಯನ್ನು ಹೇಗೆ ನಡೆಸಬೇಕೆಂದು ಉಲ್ಲೇಖವಿಲ್ಲ. ಎಷ್ಟು ದಿನಗಳಲ್ಲಿ ವಿಲೇವಾರಿ ಮಾಡಬೇಕೆಂಬ ಬಗ್ಗೆ ನಿರ್ದೇಶನ ಅಥವಾ ಕಟ್ಟಳೆಗಳಿಲ್ಲದಾಗ ಈ ಪ್ರಸ್ತಾವನೆ, ಪ್ರಕರಣ ಅಥವಾ ಪತ್ರವನ್ನು ಏನೂ ಮಾಡದೇ ಸುಮ್ಮನೆ ವಿಳಂಬಮಾಡಿಕೊಂಡು ಹೋಗಬಹುದೇ? ಸದನದ ಕಲಾಪಗಳ ಬಗೆಗಿನ ಸಭಾಧ್ಯಕ್ಷರ ತೀರ್ಮಾನಗಳನ್ನು ನ್ಯಾಯಾಂಗದಲ್ಲಿ ಪ್ರಶ್ನಿಸಬಹುದೇ ಎಂಬುದಕ್ಕೆ ಈಗಾಗಲೇ ಉತ್ತರ ದೊರೆತಾಗಿದೆ. ಹಿಂದೆ ಯಡ್ಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಬಾಲಚಂದ್ರ ಜಾರಕಿಹೊಳಿ ಮತ್ತಿತರ ಭಾಜಪ ಸದಸ್ಯರು ಸರಕಾರಕ್ಕೆ ತಾವು ಬೆಂಬಲ ಹಿಂಪಡೆದದ್ದ ಹಿನ್ನೆಲೆಯಲ್ಲಿ ಈ ಶಾಸಕರನ್ನು ಅನರ್ಹಗೊಳಿಸಿದ್ದ ಸ್ಪೀಕರ್ ತೀರ್ಮಾನವನ್ನು ಮೊದಲು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ನಂತರದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ ನಿದರ್ಶನವಿದೆ. ಇದೇ ಹಿನ್ನೆಲೆಯಲ್ಲಿ ಸ್ಪೀಕರ್ ತೀರ್ಮಾನವನ್ನು ಹತ್ತು ಜನ ಶಾಸಕರು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಿದ್ದಾರೆ.

ರಾಜೀನಾಮೆಯ ರಾಜಕೀಯ ಆಯಾಮಗಳನ್ನು ಒಂದೆಡೆಯಿಟ್ಟು, ಕೇವಲ ಕಾನೂನಿನ ದೃಷ್ಟಿಯಿಂದ ನೋಡಿದರೆ, ವಿಧಾನಮಂಡಲದ ಯಾವುದೇ ಸದನದ ಸದಸ್ಯರೊಬ್ಬರು ರಾಜೀನಾಮೆಯಿತ್ತ ಸಂದರ್ಭದಲ್ಲಿ ಸ್ಪೀಕರ್ ಮುಂದಿರುವ ಪರ್ಯಾಯಗಳು ಅತ್ಯಂತ ನಿಯಮಿತವಾದವು. ರಾಜೀನಾಮೆ ಪತ್ರದ ಮೇಲಿನ ಸಹಿ ಸದಸ್ಯರದ್ದೇ? ಹಾಗಿದ್ದರೆ, ಈ ಸಹಿ ಮಾಡಿದ ಪತ್ರವನ್ನು ಸ್ವಇಚ್ಛೆಯಿಂದ ಕೊಟ್ಟಿದ್ದೇ, ಇಷ್ಟನ್ನೇ ನೋಡಬೇಕಿರುವುದು. ಇಷ್ಟನ್ನು ವಿಚಾರಿಸಲು ಎಷ್ಟು ಸಮಯ ಬೇಕಿದ್ದೀತು? ಸಭಾಧ್ಯಕ್ಷರ ಈ ವಿಳಂಬ ನೀತಿಯಿಂದಾಗಿ ವಿವಾದ ಸುಪ್ರೀಂ ಮೆಟ್ಟಿಲೇರಿತು. ಹತ್ತು ಜನ ಸದಸ್ಯರು ತಾವು ರಾಜೀನಾಮೆ ಕೊಟ್ಟಿರುವುದು ಸ್ವಇಚ್ಚೆಯಿಂದಲೇ ಎಂದು ಸ್ಪಷ್ಟವಾಗಿ ಸುಪ್ರೀಂ ಕೋರ್ಟಿನಲ್ಲಿ ಪ್ರಮಾಣ (ಅಫಿಡವಿಟ್) ದಾಖಲಿಸಿದ್ದಾರೆ.

ಹಾಗಿದ್ದ ಮೇಲೆ, ಈ ಸದಸ್ಯರು ಸ್ವಇಚ್ಛೆಯಿಂದ ರಾಜೀನಾಮೆ ಕೊಟ್ಟಿಲ್ಲವೆಂದು ಹೇಳಲಾದೀತೇ? ಈ ಎಲ್ಲಾ ವಿಚಾರಗಳನ್ನು ಗಮನಿಸಿ ಸುಪ್ರೀಂ ಕೋರ್ಟ್ ಶಾಸಕರ ರಾಜೀನಾಮೆ ಪತ್ರಗಳನ್ನು ಶೀಘ್ರ ವಿಲೇವಾರಿ ಮಾಡುವಂತೆ ನಿರ್ದೇಶನ ನೀಡಿದೆ. ಶಾಸಕಾಂಗದ ಮಟ್ಟಿಗೆ ಸಭಾಪತಿಯೇ ಸರ್ವೋಚ್ಚ ಹುದ್ದೆ. ನ್ಯಾಯಾಂಗಕ್ಕೆ ಎಷ್ಟು ಘನತೆ ಮತ್ತು ಸ್ವಾಯತ್ತತೆಯಿದೆಯೋ ಅಷ್ಟೇ ಶಾಸಕಾಂಗಕ್ಕೂ ಇದೆ. ಕಾರ್ಯಂಗ ಮತ್ತು ನ್ಯಾಯಾಂಗಗಳಿಗಿಂತಲೂ ಭಿನ್ನವಾಗಿ ನಿಲ್ಲುವ ಶಾಸಕಾಂಗ ಜನರಿಂದ ಆಯ್ಕೆಯಾದವರ ಧ್ವನಿ. ಪ್ರಜಾಪ್ರಭುತ್ವದ ಅತ್ಯಂತ ಮಹತ್ತರ ಅಂಗ. ಇಷ್ಟೊಂದು ಮಹತ್ತರವಾದ ಶಾಸಕಾಂಗದ ಸದಸ್ಯರು ವಿಧಾನಸೌಧವನ್ನು ಕುಸ್ತಿಯ ಕಣವನ್ನಾಗಿ ಮಾಡಬೇಕಿತ್ತೇ? ರಾಜೀನಾಮೆಗಳನ್ನು ಶೀಘ್ರ ವಿಲೇವಾರಿ ಮಾಡಿದ್ದರೆ, ಈ ಪ್ರಹಸನ ನಡೆಯುತ್ತಿತ್ತೇ? ಶಾಸಕಾಂಗದ ಅಧ್ಯಕ್ಷರಾಗಿರುವವರು ತಮ್ಮ ಕರ್ತವ್ಯ ನಿರ್ವಹಣೆಯ ವಿಚಾರದಲ್ಲಿ ನ್ಯಾಯಾಂಗದಿಂದ ತಿಳಿ ಹೇಳಿಸಿಕೊಳ್ಳಬೇಕಿತ್ತೇ ಎಂಬುದನ್ನು ಸಮೃದ್ಧ ಸಂಸದೀಯ ಇತಿಹಾಸವನ್ನು ಹೊಂದಿದ ಈ ದೇಶದ ನಾವು ಗಂಭೀರವಾಗಿ ಯೋಚಿಸಬೇಕಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management