ಸಮೃದ್ಧ ಭಾರತದ ನಿರ್ಮಾಣದತ್ತ ಬಜೆಟ್ 2019-20 ಎಸ್. ವಿಶ್ವನಾಥ ಭಟ್, ಸಂಚಾಲಕರು, ಪ್ರಕೋಷ್ಟ ಬಿಜೆಪಿ, ಕರ್ನಾಟಕ
ಮಂದಗತಿಯಲ್ಲಿರುವ ಅಭಿವೃದ್ಧಿ, ಖಾಸಗೀ ಕ್ಷೇತ್ರದಲ್ಲಿ ಹೂಡಿಕೆಯಲ್ಲಿ ಗಣನೀಯ ಇಳಿಕೆ, ಇದರೊಂದಿಗೆ ಚೀನ-ಅಮೆರಿಕ ನಡುವಿನ ವಾಣಿಜ್ಯ ಸಮರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ೞಅಮೆರಿಕದ ವಸ್ತುಗಳನ್ನೇ ಖರೀದಿಸಿ, ಅಮೆರಿಕದವರಿಗೇ ಉದ್ಯೋಗೞ ಎನ್ನುವ ರಕ್ಷಣಾತ್ಮಕ ನೀತಿ, ಅಮರಿಕ - ಇರಾನ್ ನಡುವಿನ ಸಂಘರ್ಷದಿಂದ ತೈಲದ ಬೆಲೆಯಲ್ಲಿನ ಅನಿಶ್ಚಿತತೆ, ಇಂಗ್ಲೆಂಡ್ ದೇಶವು, ಯುರೋಪಿಯನ್ ಒಕ್ಕೂಟದಿಂದ ಹೊರಬರುತ್ತಿರುವುದರಿಂದ ಜಾಗತಿಕ ಪರಿಣಾಮ (ಬ್ರೆಕ್ಸಿಟ್) ಇಡೀ ಜಗತ್ತಿನಲ್ಲೇ ಅಭಿವೃದ್ಧಿಯ ಕುಸಿತ - ಮುಂತಾದ ಅಂತಾರಾಷ್ಟ್ರೀಯ ಬಿಕ್ಕಟ್ಟುಗಳು ಭಾರತದ ರಫ್ತು ಮತ್ತು ಅಭಿವೃದ್ಧಿಯ ಮೇಲೆ ಅಗಾಧ ಪರಿಣಾಮ ಬೀರುತ್ತವೆ. ಈ ರೀತಿ ಅನಿಶ್ಚಿತತೆ ಮತ್ತು ಸವಾಲುಗಳ ನಡುವೆ ಜುಲೈ 5 ರಂದು ದೇಶದ ಪ್ರಥಮ ಪೂರ್ಣಕಾಲದ ಮಹಿಳಾ ಹಣಕಾಸು ಮಂತ್ರಿಯಾಗಿ ಮೋದಿ ಸರ್ಕಾರದ ಎರಡನೇ ಅವಧಿಯ ಚೊಚ್ಚಲ ಬಜೆಟ್ ಮಂಡಿಸಿದ ಶ್ರೀಮತಿ ನಿರ್ಮಲಾ ಸೀತಾರಾಮನ್, ದೇಶವು ವರ್ತಮಾನದಲ್ಲಿ ಎದುರಿಸುತ್ತಿರುವ ಸವಾಲುಗಳು, ಪ್ರಗತಿಗೆ ತೊಡಕಾಗಿರುವ ಅಡಚಣೆಗಳ ನಿವಾರಣೆಯೊಂದಿಗೆ ಅಭಿವೃದ್ಧಿಯತ್ತ ದಾಪುಗಾಲು ಹಾಕುವ ನವಭಾರತದ ಬಜೆಟ್ನ್ನು ಮೆಚ್ಚುವ ರೀತಿಯಲ್ಲಿ ಮಂಡಿಸಿದ್ದಾರೆ. ಒಂದು ರೀತಿಯಲ್ಲಿ ಇದು ಅಸಂಪ್ರದಾಯಕ ಬಜೆಟ್ ಎಂದೇ ಹೇಳಬಹುದು. ವಾರ್ಷಿಕ ಆಯವ್ಯಯದ ಸೂಕ್ಷ್ಮ ಲೆಕ್ಕಾಚಾರಗಳಿಗೆ ತಲೆಬಿಸಿ ಮಾಡಿಕೊಳ್ಳದೆ ೞಆರ್ಥಿಕ ಬೆಳವಣಿಗೆಯೇ ಸರ್ಕಾರದ ಪ್ರಮುಖ ಕಾರ್ಯಸೂಚಿೞ ಎನ್ನುವ ಧ್ಯೇಯದ ಅಡಿಯಲ್ಲಿ ಮುಂದಿನ 5 ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್(350 ಲಕ್ಷ ಕೋಟಿ ರೂ. ಗಾತ್ರದ ಆರ್ಥಿಕತೆ) ಆರ್ಥಿಕತೆಯಾಗಿ ಹೊರಹೊಮ್ಮುವ ಹೊಂಗನಸಿಗೆ ಭದ್ರ ಅಡಿಪಾಯ ಹಾಕಿರುವ ಬಜೆಟ್ ಇದಾಗಿದೆ. ಬಜೆಟ್ನ ವಿಶಾಲ ಸಾರಾಂಶ ಎಲ್ಲರನ್ನೂ ಒಳಗೊಂಡಿರುವ ಸಮೃದ್ಧ ಭಾರತದ ನಿರ್ಮಾಣ. ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿದ 2019-20 ಸಾಲಿನ ಬಜೆಟ್ನ ಕೆಲವು ಪ್ರಮುಖ ಅಂಶಗಳು ಕೆಳಗಿನಂತಿವೆ :-
ಕಳೆದ 5 ವರ್ಷಗಳಿಂದ 130 ಕೋಟಿ ಜನಸಂಖ್ಯೆಯ ಭಾರತ ಶ್ರೀಮಂತ ರಾಷ್ಟ್ರಗಳ ಕೇಂದ್ರಬಿಂದುವಾಗಿದೆ. ತಮ್ಮ ಹೂಡಿಕೆಗೆ ಪೂರ್ಣರಕ್ಷಣೆ, ಜೊತೆಗೆ ತೃಪ್ತಿಕರವಾದ ಆದಾಯದ ಭರವಸೆ ಮೋದಿ ಸರ್ಕಾರದ ನೀತಿಗಳಲ್ಲಿ ದೊರೆಯುವ ಸಾಧ್ಯತೆ ಇರುವುದರಿಂದ ವಿದೇಶಿ ಹೂಡಿಕೆಯ ಬಗ್ಗೆ ನಿರಾಶೆ ಬೇಡ. ಜೊತೆಗೆ ಈ ಬಾರಿಯ ಬಜೆಟ್ನಲ್ಲಿ ವಿಮಾನಯಾನ, ಮಾಧ್ಯಮಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯ ಪ್ರಮಾಣವನ್ನು ಏರಿಸುವುದರ ಜೊತೆಗೆ ವಿಮಾ ವಲಯದಲ್ಲಿ ಶೇ. 100 ರಷ್ಟು ವಿದೇಶಿ ಹೂಡಿಕೆಗೆ ಅನುಮತಿಯನ್ನು ಘೋಷಿಸಲಾಗಿರುವುದು ವಿದೇಶಿ ಒಳಹರಿವಿಗೆ ಒತ್ತು ನೀಡುತ್ತದೆ. ಜಗತ್ತಿನ ಆರ್ಥಿಕ ಅಭಿವೃದ್ಧಿಯ ಇತಿಹಾಸವನ್ನು ಅವಲೋಕಿಸಿದರೆ, ಅಭಿವೃದ್ಧಿಶೀಲ ರಾಷ್ಟ್ರದಿಂದ ಅಭಿವೃದ್ಧಿಗೊಂಡ ರಾಷ್ಟ್ರವಾಗಿ ಮೇಲ್ಪಂಕ್ತಿಗೆ ಬಂದ ಎಲ್ಲಾ ದೇಶಗಳು ಅಪಾರವಾಗಿ ರಫ್ತು ಉದ್ಯಮದ ಮಾರ್ಗವನ್ನೇ ಅವಲಂಬಿಸಿದ್ದವು. ಜಾಗತಿಕ ಕಾರಣಗಳಿಂದಾಗಿ ಭಾರತದ ವರ್ತಮಾನದ ರಫ್ತಿನ ಪ್ರಮಾಣ 5 ವರ್ಷಗಳ ಹಿಂದೆ ಇದ್ದಷ್ಟೇ ಇದ್ದು, ಪ್ರಸ್ತುತ ಚೀನ ಮತ್ತು ಅಮೆರಿಕ ನಡುವಿನ ವಾಣಿಜ್ಯ ಸಮರದಿಂದಾಗಿ ಅಪೂರ್ವವಾದ ಅವಕಾಶವನ್ನು ಎದಿರು ನೋಡುತ್ತಿದೆ. ಜಾಗತಿಕ ವಹಿವಾಟುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಮಧ್ಯಂತರ ಸರಕುಗಳ ಪೂರೈಕೆಗಳ ಸರಪಳಿ (Trans national supply chain) ಪ್ರಮುಖಪಾತ್ರವನ್ನು ಹೊಂದಿವೆ. ಕಳೆದ ಎರಡು ವರ್ಷಗಳಲ್ಲಿ ಚೀನದಲ್ಲಿ ಕಾರ್ಮಿಕರ ವೇತನದಲ್ಲಿ ಮೂರುಪಟ್ಟು ಏರಿಕೆ, ಚೀನ-ಅಮೆರಿಕ ನಡುವಿನ ವಾಣಿಜ್ಯ ಸಮರ, ಚೀನದ ತಂತ್ರಜ್ಞಾನ ನೀತಿ, ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಚೀನದ ಆಕ್ರಮಣಕಾರಿ ವಿದೇಶಾಂಗ ನೀತಿಗಳಿಂದಾಗಿ, ಭಾರತ ಇನ್ನುಮುಂದೆ ಮಧ್ಯಂತರ ಸರಕುಗಳ ಅಂತಾರಾಷ್ಟ್ರೀಯ ನೆಟ್ವರ್ಕ್ನ ಹೊಸ ಪಾಲುದಾರಿಕೆ ವಹಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ. ಜೂನ್ 28, 29 ರಂದು ಜಪಾನ್ನಲ್ಲಿ ನಡೆದ ವಾರ್ಷಿಕ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಭಾರತದ ಪ್ರಧಾನಿ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಟ್ರಂಪ್ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದಲ್ಲಿ ಉತ್ಪಾದನಾ ಕ್ಷೇತ್ರ ಮತ್ತು 5ಜಿ ಕ್ಷೇತ್ರಗಳಲ್ಲಿ ಅಪಾರವಾದ ಹೂಡಿಕೆಮಾಡುವ ಭರವಸೆಯನ್ನು ಸ್ಪಷ್ಟವಾಗಿ ನೀಡಿದ್ದಾರೆ. ಒಂದು ಪೀಳಿಗೆಯ ಅವಧಿಯಲ್ಲಿ ಒಮ್ಮೆ ಮಾತ್ರ ಈ ಹಿನ್ನಲೆಯಲ್ಲಿ ದೊರೆಯುವಂತಹ ಅವಕಾಶವಿದು. ಈ ಹಿನ್ನಲೆಯಲ್ಲಿ ಪ್ರಸಿದ್ದ ತಂತ್ರಜ್ಞಾನ ಸಂಸ್ಥೆಗಳಿಗೆ ಹೆಚ್ಚಿನ ಬೇಡಿಕೆಯಿರುವ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚು ಮುಂದುವರೆದ ಕ್ಷೇತ್ರಗಳಾದ ಸೆಮಿಕಂಡಕ್ಟರ್ ಫ್ಯಾಬ್ರಿಕೇಷನ್, ಸೋಲಾರ್ ಫೋಟೋ ವಾಲ್ಟಿಕ್ ಸೆಲ್ಸ್ , ಲಿತಿಯಂ ಸೆಲ್ಸ್ ಬ್ಯಾಟರಿಗಳು ಮುಂತಾದುವುಗಳಲ್ಲಿ ಭಾರತದಲ್ಲಿ ಅತಿದೊಡ್ಡ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ವಿಶೇಷ ತೆರಿಗೆ ರಿಯಾಯಿತಿ ಘೋಷಿಸಿಸುವುದರ ಜೊತೆಗೆ ಪಾರದರ್ಶಕ, ಸ್ಪರ್ಧಾತ್ಮಕ ಹರಾಜಿನ ಮೂಲಕ ಜಗತ್ತಿನ ಬಹುರಾಷ್ಟ್ರೀಯ ಸಂಸ್ಥೆಗಳಿನ್ನು ಹೂಡಿಕೆ ಮಾಡಲು (ಅಮೆರಿಕ, ಯುರೋಪ್ ಮೂಲದ) ಆಹ್ವಾನಿಸಲಾಗುವುದು. ಈಗಾಗಲೇ ಈ ವಿಚಾರದಲ್ಲಿ 200 ಕ್ಕೂ ಹೆಚ್ಚು ಅಮೆರಿಕ ಮೂಲದ ಸಂಸ್ಥೆಗಳೊಂದಿಗೆ ಭಾರತ ಸಂಪರ್ಕದಲ್ಲಿದೆ. ಅತಿಹೆಚ್ಚಿನ ಪ್ರಮಾಣದಲ್ಲಿ ಸಿಲಿಕಾನ್ ಚಿಪ್ಸ್ಗಳು, ಸೋಲಾರ್ ಬಿಡಿಭಾಗಗಳು ಮತ್ತು ಕಂಪ್ಯೂಟರ್ ಸರ್ವರ್ಗಳ ಉತ್ಪಾದನೆಗೆ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದ್ದು 50 ವರ್ಷಗಳ ಹಿಂದೆ ದಕ್ಷಿಣ ಸ್ಯಾನ್ಫ್ರಾನ್ಸಿಸ್ಕೋನಲ್ಲಾದ ಹೂಡಿಕೆಯಂತೆ, ಭಾರತದಲ್ಲೂ ದೇಶೀಯ ಮತ್ತು ವಿದೇಶಿ ತಂತ್ರಜ್ಞಾನ ಸಂಸ್ಥೆಗಳು ಹೇರಳವಾಗಿ ಹೂಡಿಕೆ ಮಾಡಲಿದ್ದು ಮುಂದಿನ ದಶಕದಲ್ಲಿ ಭಾರತ ತಂತ್ರಜ್ಞಾನ ಸೂಪರ್ಪವರ್ ಆಗಿ ಹೊರಹೊಮ್ಮಲಿದೆ. ವಿದ್ಯುತ್ ವಾಹನಗಳನ್ನು ಸಾಲದ ಮೂಲಕ ಖರೀದಿಸುವವರಿಗೆ ಸಾಲದ ಮೇಲಿನ ಬಡ್ಡಿಯಲ್ಲಿ 1.5 ಲಕ್ಷ ರೂ. ತನಕ ತೆರಿಗೆ ವಿನಾಯಿತಿ, ಬಿಡಿಭಾಗಗಳ ಆಮದು ಸುಂಕದಲ್ಲಿ ಇಳಿಕೆ ಹಾಗೂ ವಿದ್ಯುತ್ ವಾಹನಗಳ ಮೇಲಿನ ಜಿಎಸ್ಟಿ ದರವನ್ನು ಶೇ. 12 ರಿಂದ ಶೇ. 5 ಕ್ಕೆ ಇಳಿಸುವ ಮೂಲಕ ಮೋದಿ ಸರ್ಕಾರ ವಿದ್ಯುತ್ ವಾಹನಗಳ ಉತ್ಪಾದನೆಯ ಬಗ್ಗೆ ತನ್ನ ಸ್ಪಷ್ಟವಾದ ತೀರ್ಮಾನವನ್ನು ಘೋಷಿಸುವುದರೊಂದಿಗೆ ಹಸಿರು ಭಾರತದ ಕಲ್ಪನೆಗೆ ತನ್ನ ನಿಸ್ಸಂದೇಹ ಬೆಂಬಲವನ್ನು ತಿಳಿಸಿದೆ. ಜಗತ್ತಿನಲ್ಲಿ ರಾಜಕೀಯ ಮತ್ತು ಆರ್ಥಿಕ ಸ್ಥಿರತೆ ಇರುವ ಬೆರಳೆಣಿಕೆಯಷ್ಟು ದೇಶಗಳಲ್ಲಿ ಭಾರತವೂ ಒಂದಾಗಿದ್ದು ಬಂಡವಾಳ ಹೂಡಿಕೆಗೆ ವಿದೇಶೀ ಹಣದ ಹರಿವು ಮುಂದಿನ ತಿಂಗಳುಗಳಲ್ಲಿ ಪ್ರವಾಹೋಪಾದಿಯಲ್ಲಿ ಬರುವುದರಲ್ಲಿ ಅನುಮಾನವಿಲ್ಲ. ವಿದ್ಯಾವಂತ ತರುಣರಲ್ಲಿ ಉದ್ಯಮಶೀಲತೆಗೆ ಉತ್ತೇಜನ ನೀಡಲು ಇಲ್ಲಿಯವರೆಗೆ ಇವರನ್ನು ಕಾಡುತ್ತಿದ್ದ ಏಂಜೆಲ್ ತೆರಿಗೆ ನಿಯಮಾವಳಿಗಳನ್ನು ಬದಲಾಯಿಸಲಾಗಿದ್ದು, ಇನ್ನು ಮುಂದೆ ಪರಿಶೀಲನೆ ಮತ್ತು ಮೌಲ್ಯಮಾಪನದ ಭಯವಿಲ್ಲದೆ ಸ್ಟಾರ್ಟ್ಅಪ್ಗಳಲ್ಲಿ ಹೂಡಿಕೆ ಮಾಡಬಹುದು - ಪ್ರೋತ್ಸಾಹದ ಹೊಳೆಯನ್ನೇ ಹರಿಸಲಾಗಿದೆ. ಅಲ್ಲವೆ? ಈ ರೀತಿಯ ಹೂಡಿಕೆಗಳಿಗೆ ಭಾರತವು ಅನುಕೂಲಕರವಾದ ಆಕರ್ಷಣೀಯ ಗಮ್ಯಸ್ಥಾನವಾಗಲು ದೇಶದಲ್ಲಿ ಮೂಲಸೌಕರ್ಯ ಕ್ಷೇತ್ರ, ಆರ್ಥಿಕ ಕ್ಷೇತ್ರ, ಡಿಜಿಟಲ್ ಇಂಡಿಯಾ, ನವೋದಯ ಉದ್ಯಮಗಳಲ್ಲಿ ಅಪಾರವಾದ ಹೂಡಿಕೆಯನ್ನು ಮಾಡಲಿರುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ. ಈ ಮಾದರಿಯ ಬೃಹತ್ಪ್ರಮಾಣದ ಹೂಡಿಕೆಗಳು ಸಾಲವಲ್ಲವಾದುದರಿಂದ ಬಡ್ಡಿಯ ಚಿಂತೆಯಿಲ್ಲ. ಸರ್ಕಾರದ, ದೇಶೀಯ ಹೂಡಿಕೆ ಮತ್ತು ಅಪಾರವಾದ ವಿದೇಶಿ ಹೂಡಿಕೆಗಳಿಂದಾಗಿ ಊಹೆಗೂ ಮೀರಿದ ಪ್ರಗತಿಯೊಂದಿಗೆ ಕೋಟ್ಯಂತರ ಉದ್ಯೋಗ ಸೃಷ್ಟಿಯಾಗಲಿವೆ. ಪ್ಯಾನ್ ಕಾರ್ಡ್ ಮತ್ತು ಆಧಾರ್ಕಾರ್ಡ್ : ಪ್ಯಾನ್ಕಾರ್ಡ್ ಮತ್ತು ಆಧಾರ್ಕಾರ್ಡ್ನನ್ನು ಪರ್ಯಾಯವಾಗಿ ಬಳಸಲು ಬಜೆಟ್ನಲ್ಲಿ ಅನುಮತಿ ನೀಡಲಾಗಿದ್ದು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರಿಗೆ ಪ್ಯಾನ್ ಸಂಖ್ಯೆ ಇಲ್ಲದಿದ್ದರೆ, ಆಧಾರ್ ಕಾರ್ಡನ್ನು ಬಳಸಬಹುದು. ಇತ್ತೀಚಿನ ಅಂತಾರಾಷ್ಟ್ರೀಯ ಮಟ್ಟದ ವರದಿಯ ಪ್ರಕಾರ ನೀರಿನ ಅಭಾವದ ಅತಿಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿರುವ ಜಗತ್ತಿನ 20 ಮೆಗಾ ನಗರಗಳಲ್ಲಿ ಮೊದಲನೆಯ ಸ್ಥಾನ ಚೆನ್ನೈ, ಎರಡನೆಯ ಸ್ಥಾನ ಕಲ್ಕತ್ತ, ಹನ್ನೊಂದನೇ ಸ್ಥಾನ ಮುಂಬೈ, ಹದಿನೈದನೇ ಸ್ಥಾನ ಡೆಲ್ಲಿ - ನಂಬಲು ಅಸಾಧ್ಯ ಅಲ್ಲವೆ? ನಾವೇನೂ ಹಿಂದಿಲ್ಲ, 2020 ರ ಹೊತ್ತಿಗೆ ಬೆಂಗಳೂರಿನಲ್ಲಿ ಅಂತರ್ಜಲ ಬತ್ತಿಹೋಗಲಿದೆ. 2030 ರ ಹೊತ್ತಿಗೆ ದೇಶದ ಸುಮಾರು ಶೇ. 60 ರಷ್ಟು ಜನರು ನೀರಿನ ಅಭಾವದಿಂದಾಗುವ ಒತ್ತಡದಿಂದ ಬಳಲಲಿದ್ದಾರೆ. ಗೋದಾವರಿ ನದಿಯಿಂದ ಪ್ರತಿವರ್ಷ ಸುಮಾರು 6000-7000 ಟಿಎಮ್ಸಿ ಯಷ್ಟು ನೀರು ಬಂಗಾಲಕೊಲ್ಲಿಯನ್ನು ಸೇರುತ್ತದೆ. ಇದರಲ್ಲಿ 800 ಟಿಎಮ್ಸಿ ನೀರನ್ನು ತೆಲಂಗಾಣ ಮುಂದಿನ ವರ್ಷಗಳಲ್ಲಿ ಉಪಯೋಗಿಸಿದರೂ ಉಳಿದ 5000 ಟಿಎಮ್ಸಿ ಗಿಂತಲೂ ಹೆಚ್ಚಿನ ನೀರು ಬಳಸದೇ ಸಮುದ್ರ ಸೇರುವುದಲ್ಲವೆ? ಈ ರೀತಿಯ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಪರಿಣಾಮಗಳಿಗೆ ಸಾಕಷ್ಟು ಉದಾಹರಣೆಗಳು ಭಾರತದಲ್ಲಿವೆ. ನಮ್ಮಲ್ಲಿ ಸುಮಾರು ಶೇ. 75 ರಷ್ಟು ಕುಟುಂಬಗಳಿಗೆ ಕೊಳವೆ ನೀರಿನ ಪೂರೈಕೆ ಇಲ್ಲ. ಸ್ವಚ್ಛ ಭಾರತದಂತಹ ಕ್ರಾಂತಿಕಾರಕ ಯೋಜನೆಯ ಅನುಷ್ಠಾನದಂತೆ 2024 ರ ಹೊತ್ತಿಗೆ ದೇಶದ ಎಲ್ಲಾ ಮನೆಗಳಿಗೂ ಕೊಳವೆ ನೀರನ್ನು ಪೂರೈಸುವ ೞಹರ್ ಘರ್ ಝಲ್ 2024ೞ ಎಂಬ ಘೋಷವಾಕ್ಯದ ಯೋಜನೆಯನ್ನು ಪ್ರಕಟಿಸಲಾಗಿದೆ. ನಗದು ರಹಿತ ವಹಿವಾಟಿಗೆ ಒತ್ತು : ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ಹಾಗೂ ನಗದು ವ್ಯವಹಾರವನ್ನು ಕಡಿಮೆಮಾಡುವ ಉದ್ದೇಶದಿಂದ ಬ್ಯಾಂಕ್ಖಾತೆಗಳಲ್ಲಿ ಪ್ರತಿವರುಷ 1 ಕೋಟಿ ರೂ. ಗಿಂತಲು ಹೆಚ್ಚಿನ ನಗದು ಹಿಂಪಡೆಯುವವರಿಗೆ ಶೇ. 2 ರಷ್ಟು ಟಿಡಿಎಸ್ ವಿಧಿಸುವುದು ಹಾಗೂ 50 ಕೋಟಿಗಿಂತಲೂ ಕಡಿಮೆ ವಹಿವಾಟಿನವರಿಗೆ ಡಿಜಿಟಲ್ ವ್ಯವಹಾರಗಳ ಮೇಲಿರುವ ಎಂಡಿಆರ್ನ್ನು ಹಿಂಪಡೆಯುವ ಮೂಲಕ ಡಿಜಿಟಲ್ ಭಾರತದ ಕಲ್ಪನೆಗೆ ಒತ್ತು ನೀಡಲಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಮೂಲಸೌಕರ್ಯ ಹೆಚ್ಚುವರಿ ಶುಲ್ಕದಿಂದ ಒಟ್ಟಿಗೆ 2 ರೂ. ತೆರಿಗೆ ವಿಧಿಸಿದ್ದರೂ ಗ್ರಾಹಕರಿಗೆ ಪ್ರತಿ ಲೀಟರ್ಗೆ 2.5 ರೂ. ಮತ್ತು 2.3 ರೂ. ನಷ್ಟು ತೆರಿಗೆ ಪರಿಣಾಮವಾಗಲಿದೆ. ತೈಲದ ಮೇಲೆ ತೆರಿಗೆ ಹಾಗೂ ವಿದ್ಯುತ್ವಾಹನಗಳ ಮೇಲೆ ತೆರಿಗೆ ವಿನಾಯಿತಿ ಘೋಷಿಸಿರುವ ಕಾರಣವಿಷ್ಟೆ, ವಾತಾವರಣವನ್ನು ಮಾಲಿನ್ಯಗೊಳಿಸುವ ತೈಲಾಧಾರಿತ ವಾಹನಗಳನ್ನು ಉಪಯೋಗಿಸುವ ಬದಲು ವಿದ್ಯುತ್ ವಾಹನಗಳನ್ನು ಇಲ್ಲವೇ ಸಾರ್ವಜನಿಕ ಸಾರಿಗೆಯನ್ನು ಉಪಯೋಗಿಸಲಿ, ಪರಿಸರ ಸಮಸ್ಯೆಯ ವಿಚಾರದಲ್ಲಿ ಸಾರ್ವಜನಿಕರ ನಡವಳಿಕೆಯಲ್ಲಿ ಬದಲಾವಣೆ ತಂದು ಸಮಸ್ಯೆಯನ್ನು ಬಗೆಹರಿಸೋಣ ಎನ್ನುವುದಷ್ಟೇ ಹೊರತು, ಮಧ್ಯಮವರ್ಗದವರಿಗೆ ತೆರಿಗೆಯ ಹೊರೆ ಹೊರಿಸುವ ಉದ್ದೇಶವಲ್ಲ. ಚಿನ್ನದ ವಿಚಾರದಲ್ಲೂ ಅಷ್ಟೆ, ಉಳ್ಳ ಗ್ರಾಹಕರು ಬೇರೆ ರೀತಿಯ ಉಳಿತಾಯ ಮತ್ತು ಸಂಪತ್ತಿನಲ್ಲಿ ಹೂಡಿಕೆಮಾಡಲಿ, ಇಲ್ಲವೇ ಸರ್ಕಾರ ಘೋಷಿಸುವ ಗೋಲ್ಡ್ಬಾಂಡ್ಗಳಲ್ಲಿ ಹೂಡಿಕೆಮಾಡಲಿ, ಶೇ. 100 ರಷ್ಟು ಆಮದುಮಾಡಿಕೊಳ್ಳುವ ಬಂಗಾರವನ್ನು ಅಗತ್ಯಕ್ಕಿಂತ ಹೆಚ್ಚು ಖರೀದಿ ಮಾಡುವುದು ಬೇಡ ಎಂಬ ಉದ್ದೇಶವಷ್ಟೆ. ಜನಸಾಮಾನ್ಯರ ಅರಿವಿಗೆ ತೋಚದಿದ್ದರೂ,ದೇಶದ ಪ್ರಗತಿಯನ್ನು ಕುಂಠಿತಗೊಳಿಸಿದ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಣಕಾಸು ಬಿಕ್ಕಟ್ಟು ತಂದ ಒಂದು ಸಂಗತಿಯೆಂದರೆ ಐಎಲ್ ಆ್ಯಂಡ್ ಎಫ್ಸಿ ಎಂಬ ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲಿನ ಹಣದ ಹಗರಣ. ಈ ಹಗರಣದಿಂದಾಗಿ ಎಲ್ಲಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಮಾತ್ರವಲ್ಲ, ಜೊತೆಗೆ ಹಣಕಾಸು ವ್ಯವಸ್ಥೆಯಲ್ಲೂ ತೀವ್ರ ಬಿಕ್ಕಟ್ಟು ತಲೆದೋರಿದೆ. ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಒಂದು ಲಕ್ಷ ಕೋಟಿಯ ಹಣದ ಹರಿವನ್ನು ಪೂರೈಸುವ ಮೂಲಕ ಈ ವ್ಯವಸ್ಥೆಯನ್ನು ಪುನಶ್ಚೇತನಗೊಳಿಸಲಾಗಿದೆ. 70,000 ಕೋಟಿ ರೂ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮರುಬಂಡವಾಳ ಹೂಡಿಕೆ ಮಾಡುವ ಮೂಲಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ದೊರೆಯುವ ಅವಕಾಶವನ್ನು ಹೆಚ್ಚಿಸಲಾಗಿದೆ. ಮಹಿಳೆಯರ ಸಬಲೀಕರಣ : ಈ ಬಾರಿಯ ಬಜೆಟ್ನಲ್ಲಿ ದೇಶದ ಎಲ್ಲಾ ಜಿಲ್ಲೆಗಳಲ್ಲಿನ ಮಹಿಳೆಯರ ಸ್ವಸಹಾಯ ಗುಂಪುಗಳಿಗೆ ಬಡ್ಡಿದರದ ಕಡಿತವನ್ನು ವಿಸ್ತರಿಸಲಾಗಿದ್ದು ಈ ಗುಂಪುಗಳಲ್ಲಿ ಜನಧನ್ ಖಾತೆಯಿರುವ ಎಲ್ಲಾ ಮಹಿಳಾ ಸದಸ್ಯರಿಗೆ 5000 ರೂ. ತನಕ ಓವರ್ಡ್ರಾಫ್ಟ್ ಸೌಲಭ್ಯ ಹಾಗೂ ಪ್ರತಿಗುಂಪಿನ ಒಬ್ಬ ಸದಸ್ಯರಿಗೆ ಒಂದು ಲಕ್ಷ ರೂ. ತನಕ ಮುದ್ರಾ ಸಾಲ ನೀಡುವ ಮೂಲಕ ಮಹಿಳಾ ಸಬಲೀಕರಣದ ಜೊತೆಗೆ ಮಹಿಳೆಯರನ್ನೂ ಸ್ವಾವಲಂಬಿಗಳನ್ನಾಗಿ ಪರಿವರ್ತಿಸಲು ಉತ್ತೇಜನ ನೀಡಲಾಗಿದೆ. 2 ಕೋಟಿಯಿಂದ 5 ಕೋಟಿ ವಾರ್ಷಿಕ ಆದಾಯವಿರುವವರಿಗೆ ಶೇ. 3 ಹಾಗೂ 5 ಕೋಟಿ ರೂ. ಗಿಂತಲೂ ಹೆಚ್ಚಿನ ಆದಾಯ ಇರುವ ಆಗರ್ಭ ಶ್ರೀಮಂತರಿಗೆ ಶೇ. 7 ರಷ್ಟು ಹೆಚ್ಚುವರಿಶುಲ್ಕ ವಿಧಿಸಿದರೂ ನಿವ್ವಳ ಮಟ್ಟದಲ್ಲಿ ಈ ಎರಡು ವರ್ಗಕ್ಕೆ ತೆರಿಗೆದರ ಅನುಕ್ರಮವಾಗಿ ಶೇ. 39 ರಷ್ಟು ಹಾಗೂ ಶೇ. 42.74 ತಲುಪಲಿದೆ. ದೇಶದ ವ್ಯವಸ್ಥೆಯಲ್ಲಿ ಈ ಮಟ್ಟದ ಲಾಭ ಪಡೆದವರು ರಾಷ್ಟ್ರಕ್ಕೆ ಸ್ವಲ್ಪ ಭಾಗವನ್ನು ಪಾವತಿಸುವ ಸಮಯವಿದು. ವಾರ್ಷಿಕ ವಹಿವಾಟು 250 ಕೋಟಿ ರೂ. ಇರುವವರಿಗೆ ನೀಡುತ್ತಿದ್ದ ಶೇ. 5 ರಷ್ಟು ಕಾರ್ಪೊರೇಟ್ ತೆರಿಗೆ ವಿನಾಯಿತಿ ದರವನ್ನು ಈಗ 400 ಕೋಟಿ ರೂ. ಇರುವ ಸಂಸ್ಥೆಗಳಿಗೂ ವಿಸ್ತರಿಸಲಾಗಿದ್ದು, ಇದರಿಂದಾಗಿ ದೇಶದ ಶೇ. 99.31 ಸಂಸ್ಥೆಗಳು ಶೇ. 25 ರ ತೆರಿಗೆ ಹಣಕ್ಕೆ ಒಳಪಟ್ಟಿದೆ. ಸರ್ಕಾರವು ನಿಧಾನವಾಗಿ ತೆರಿಗೆ ದರವನ್ನು ಇಳಿಸುತ್ತಿದೆ. ಇನ್ನು ಕೇವಲ ಶೇ. 0.7, ಸಂಸ್ಥೆಗಳು ಮಾತ್ರ ಶೇ. 30 ತೆರಿಗೆ ದರದಲ್ಲಿವೆ. ಮೂಲವಸ್ತುಗಳ ಮೇಲಿನ ಆಮದು ಸುಂಕದಲ್ಲಿ ಕಡಿತ, ಸಿದ್ಧಪಡಿಸಿದ ಸರಕುಗಳ ಆಮದು ಸುಂಕದಲ್ಲಿ ಏರಿಕೆ ಮೂಲಕ, ಹಣಕಾಸು ಮಂತ್ರಿಯವರು ಮೇಕ್ ಇನ್ ಇಂಡಿಯಾ ಯೋಜನೆಗೆ ಒತ್ತು ನೀಡಿದಂತಾಯಿತು ಅಲ್ಲವೇ? ಪ್ರಧಾನಮಂತ್ರಿ ಆವಾಸ ಯೋಜನೆಯಡಿ 45 ಲಕ್ಷ ರೂ. ವರೆಗಿನ ಗೃಹಸಾಲಕ್ಕೆ ನೀಡುವ ಬಡ್ಡಿಯ ಮೇಲಿನ ತೆರಿಗೆ ರಿಯಾಯಿತಿಯನ್ನು 2 ಲಕ್ಷದಿಂದ 3.5 ಲಕ್ಷ ಏರಿಸಲಾಗಿದ್ದು, ಗೃಹನಿರ್ಮಾಣ ಕ್ಷೇತ್ರಕ್ಕೆ ದೊಡ್ಡ ಉತ್ತೇಜನವಾಗಿದೆ. ಗಾಂವ್, ಗರೀಬ್ ಮತ್ತು ಕಿಸಾನ್ ಮೋದಿ ಸರ್ಕಾರದಲ್ಲಿ ಕೃಷಿಕ್ಷೇತ್ರದ ಅಭಿವೃದ್ಧಿಯ ಅಂತಃಸತ್ವ. ಕುಸಿಯುತ್ತಿರುವ ಆಹಾರ ಪದಾರ್ಥಗಳ ಬೆಲೆಯು, ರೈತರ ಸಮಸ್ಯೆಗಳಿಗೆ ಅಲ್ಪಾವಧಿಯ ಕಾರಣವಾಗಿದ್ದು, ವಾಸ್ತವದಲ್ಲಿ ಶೇ. 44.1ರಷ್ಟು ಕಾರ್ಮಿಕರು ಕೃಷಿಕ್ಷೇತ್ರವನ್ನು ಅವಲಂಬಿಸಿದ್ದು, ರಾಷ್ಟ್ರೀಯ ಒಟ್ಟು ಉತ್ಪನ್ನಕ್ಕೆ ಕೃಷಿಕ್ಷೇತ್ರದ ಕಾಣಿಕೆ ಕೇವಲ ಶೇ. 15 ರಷ್ಟು ಮಾತ್ರ! ಅಂದರೆ ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳಿಂದಾಗುವ ಸಮಗ್ರ ರಾಷ್ಟ್ರೀಯ ಉತ್ಪನ್ನದ ನಾಲ್ಕನೆಯ ಒಂದು ಭಾಗವೂ ಇಲ್ಲ! ರೈತಸಮುದಾಯವನ್ನು ನಿರಂತರವಾಗಿ ತಿಂದುಹಾಕುತ್ತಿರುವ ಬಡತನಕ್ಕೆ ಮೂಲಕಾರಣವಿದು. ನಗರೀಕರಣದ ಮೂಲಕ ಕೃಷಿಕ್ಷೇತ್ರದ ಕಾರ್ಮಿಕರನ್ನು ಕೈಗಾರಿಕೆ ಸೇವಾಕ್ಷೇತ್ರಕ್ಕೆ ವಲಸೆ ಕಳುಹಿಸುವುದರಿಂದ ಈ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುತ್ತದೆ. ಮುಂದಿನ 5 ವರ್ಷಗಳಲ್ಲಿ ಮೋದಿ ಸರ್ಕಾರವು, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳ ಮೂಲಕ ಕೃಷಿಕ್ಷೇತ್ರದಲ್ಲಿ 25 ಲಕ್ಷ ಕೋಟಿ ರೂ. ಹೂಡಿಕೆಯ ಮೂಲಕ ಶಾಶ್ವತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಯಸೂಚಿಯನ್ನು ನಿರ್ಮಿಸುತ್ತದೆ. 1 ಕೋಟಿ ಹೆಕ್ಟೇರ್ಕೃಷಿಭೂಮಿಯನ್ನು ಸೂಕ್ಷ್ಮ ನೀರಾವರಿಗೆ ಒಳಪಡಿಸುವುದು, ಬಂಡವಾಳವಿಲ್ಲದ ಶೂನ್ಯ ಕೃಷಿಗೆ ಪ್ರೋತ್ಸಾಹ ಧನ, ಸಮುದಾಯ ಕೃಷಿಗೆ ಒತ್ತು, ಕೃಷಿ ಉತ್ಪನ್ನಗಳನ್ನು ಸಂಸ್ಕೃರಿಸುವ 10,000 ರೈತ ಸಮುದಾಯದ ಒಕ್ಕೂಟ, ಮತ್ಸ್ಯ ಸಂಪದ ಯೋಜನೆಯ ಮೂಲಕ ಮೀನುಗಾರಿಕೆಗೆ ಸುಸ್ಥಿರ ಚೌಕಟ್ಟು ಕಲ್ಪಿಸುವುದು ಮುಂತಾದ ಹಲವು ಚಿಂತನೆಗಳನ್ನು ಈ ಬಾರಿ ಘೋಷಿಸಲಾಗಿದ್ದು, 2022 ರ ವೇಳೆಗೆ ರೈತರ ಆದಾಯವನ್ನು ದುಪ್ಪಟಗೊಳಿಸುವ ಮೋದಿ ಸರ್ಕಾರದ ಆಶಯಕ್ಕೆ ಶೇ. 78 ರಷ್ಟು ಹೆಚ್ಚಿನ ಅನುದಾನ ನೀಡುವ ಮೂಲಕ (1.39ಲಕ್ಷ ಕೋಟಿ) ಇಂಬು ನೀಡಲಾಗಿದೆ. ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಭಾರತೀಯ ರೈಲ್ವೆ ಪಾತ್ರ ಹಿರಿದು. ಮುಂದಿನ 5 ವರುಷಗಳಲ್ಲಿ 12 ಲಕ್ಷ ಕೋಟಿ ಬಂಡವಾಳ ಹೂಡಿಕೆ ಮಾಡಲಾಗುತ್ತದೆ. ಕರ್ನಾಟಕದ ನೈರುತ್ಯ ವಲಯಕ್ಕೆ 2536 ಕೋಟಿ ರೂ. ನಿಗದಿಪಡಿಸಲಾಗಿದ್ದು (ಮಧ್ಯಂತರ ಬಜೆಟ್ಗಿಂತ 708 ಕೋಟಿ ರೂ. ಹೆಚ್ಚಳ) ಪುಣೆ-ಬೆಳಗಾವಿ-ಹುಬ್ಬಳ್ಳಿ-ಚಿತ್ರದುರ್ಗ-ತುಮಕೂರು ರೈಲುಮಾರ್ಗವನ್ನು ದ್ವಿಪಥಗೊಳಿಸುವ ಯೋಜನೆಗೆ 3200 ಕೋಟಿ ರೂ. ಹೂಡಿಕೆಯಾಗಲಿದ್ದು ಕರ್ನಾಟಕಕ್ಕೆ ಬಂಪರ್ ಕೊಡುಗೆ ಎಂದರೆ ಉತ್ಪ್ರೇಕ್ಷೆಯಲ್ಲ. 2030 ರ ಹೊತ್ತಿಗೆ ಅಂದರೆ ಮುಂದಿನ 12 ವರುಷಗಳಲ್ಲಿ ಖಾಸಗೀ ಸಹಭಾಗಿತ್ವವನ್ನು ಒಳಗೊಂಡಂತೆ ರೈಲ್ವೇ ಕ್ಷೇತ್ರದಲ್ಲಿ 50 ಲಕ್ಷ ಕೋಟಿ ರೂ. ಹೂಡಿಕೆಯಾಗಲಿದ್ದು ಭಾರತದ ಚಿತ್ರಣವೇ ಬದಲಾಗಲಿದೆ. ಆವಾಸ್ ಯೋಜನೆಯಡಿ ಗ್ರಾಮೀಣ ಭಾರತವೂ ಒಳಗೊಂಡಂತೆ 1.95 ಕೋಟಿ ಮನೆಗಳ ನಿರ್ಮಾಣ, ವಾರ್ಷಿಕ ವಹಿವಾಟು 1.5 ಕೋಟಿಗಿಂತಲೂ ಕಡಿಮೆ ಇರುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಗೆ ಒಳಪಟ್ಟಿರುವ ಎಲ್ಲಾ ಚಿಲ್ಲರೆ ವ್ಯಾಪಾರಿಗಳಿಗೆ ಪಂಚಣಿಯೋಜನೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲು ರಾಷ್ಟ್ರೀಯ ಕ್ರೀಡಾ ಶಿಕ್ಷಣ ಬೋರ್ಡ್ನ ಸ್ಥಾಪನೆ ಅತಿ ಪುರಾತನ ಬಾಡಿಕೆ ಕಾನೂನನ್ನು ಪರಾಮರ್ಶಿಸಿ ಆಧುನಿಕ ಟೆನೆನ್ಸಿ ಕಾಯಿದೆ ಸಿದ್ಧಪಡಿಸುವುದು ಮುಂತಾದ ಹತ್ತಾರು ಜನಪ್ರಿಯವಲ್ಲದ ಆದರೆ ಜನಪರ ಯೋಜನೆಗಳು ಈ ಬಜೆಟ್ನಲ್ಲಿ ಒಳಗೊಂಡಿದೆ. ಹೊಸ ಶಿಕ್ಷಣ ನೀತಿಯು ಸದ್ಯದಲ್ಲೇ ಜಾರಿಗೆ ಬರಲಿದ್ದು ಉನ್ನತ ಶಿಕ್ಷಣ ಹಾಗೂ ಶಾಲಾಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಬರಲಿವೆ. ವಿಶ್ವದರ್ಜೆ ಶಿಕ್ಷಣಸಂಸ್ಥೆಗಳ ಸ್ಥಾಪನೆಯ ಮೂಲಕ ಭಾರತವನ್ನು ಶೈಕ್ಷಣಿಕ ತಾಣವನ್ನಾಗಿ ಮಾಡುವುದು ಉನ್ನತ ವ್ಯಾಸಂಗಕ್ಕೆ ಭಾರತೀಯರು ವಿದೇಶಕ್ಕೆ ಹೋಗುವ ಬದಲು ವಿದೇಶಿ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುವ ನೀತಿಗಳೂ ಸಹ ಬಜೆಟ್ನಲ್ಲಿ ಘೋಷಿಸಲಾಗಿದೆ. ಈಗಾಗಲೇ ಭಾರತದ ಆರ್ಥಿಕ ಪ್ರಗತಿಯಲ್ಲಿ ಸುಧಾರಣೆ ಕಾಣಬಹುದಾಗಿದೆ. ಅಕ್ಟೋಬರ್ 2018 ರಲ್ಲಿ ಡಾಲರ್ ಎದಿರು 74/45 ಕ್ಕೆ ಕುಸಿದ ರೂಪಾಯಿ ಇಂದು 68.37 ಕ್ಕೆ ಬಲಗೊಂಡಿದೆ. ದೇಶದ ವಿದೇಶಿ ವಿನಿಮಯ ಸಂಗ್ರಹ 426.42 ಬಿಲಿಯನ್ ಡಾಲರ್ ಐತಿಹಾಸಿಕ ದಾಖಲೆ ಮಟ್ಟ ತಲುಪಿದೆ. ಏಪ್ರಿಲ್ 2019 ರಲ್ಲಿ ಬ್ಯಾಂಕ್ಗಳಲ್ಲಿ ಸಾಲದ ವಿತರಣೆಯಲ್ಲಿ ಶೇ. 11.7 ರಷ್ಟರ ಪ್ರಗತಿಯನ್ನು ಸಾಧಿಸಲಾಗಿದೆ. ಆರ್ಬಿಐ ಸತತವಾಗಿ 3 ನೇ ಬಾರಿ ಸಾಲದ ಮೇಲಿನ ಬಡ್ಡಿಯ ದರವನ್ನು ಇಳಿಸಿದೆ. ದೇಶದ ಬ್ಯಾಂಕಿಂಗ್ ವ್ಯವಸ್ಥೆಯು ಈಗ ಸದೃಢವಾಗಿದೆ ಎಂದು ಆರ್ಬಿಐ ತನ್ನ ಅರ್ಧವಾರ್ಷಿಕ ವರದಿಯಲ್ಲಿ ಉಲ್ಲೇಖಿಸಿದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ವರ್ಷದ ಮೊದಲೆರಡು ತ್ರೈಮಾಸಿಕಗಳಲ್ಲಿ ಅಭಿವೃದ್ಧಿಯಲ್ಲಿ ಇಳಿಕೆ ಕಂಡರೂ ಉತ್ತರಾರ್ಧದಲ್ಲಿ ಪ್ರಗತಿಯು ವೇಗವನ್ನು ಪಡೆದು 2019 ರಲ್ಲಿ ಭಾರತೀಯ ಶೇ. 7 ರಷ್ಟು ಜಿಡಿಪಿ ಅಭಿವೃದ್ಧಿಯನ್ನು ಸಾಧಿಸಲಿದೆ. ಜೊತೆಗೆ ಮಾನ್ಯ ಹಣಕಾಸು ಮಂತ್ರಿಯವರು ಹೇಳಿದಂತೆ ಪ್ರಸ್ತುತ ವರ್ಷ ವಿತ್ತೀಯ ಕೊರತೆ ಶೇ. 3.3 ರಷ್ಟಿದ್ದು ದೇಶದ ಆರ್ಥಿಕತೆಯು 3 ಟ್ರಿಲಿಯನ್ ಡಾಲರ್ ಮೈಲಿಗಲ್ಲನ್ನೂ ತಲುಪಲಿದೆ. ಭಾರತವು ಬೃಹತ್ಪ್ರಗತಿಯ ಹೊಸಿಲಿನಲ್ಲಿದೆ. ಶ್ರೀಮತಿ ನಿರ್ಮಲಾ ಸೀತಾರಾಮನ್ ಮಂಡಿಸಿರುವ ದೂರಗಾಮಿ ಆಯವ್ಯಯ ಪತ್ರ 5 ವರ್ಷಗಳಲ್ಲಿ ಭಾರತವನ್ನು 3 ನೇ ಅತಿದೊಡ್ಡ ಆರ್ಥಿಕತೆಯಾಗಿ ರೂಪಿಸುವ ಜೊತೆಗೆ ನಿರುದ್ಯೋಗ ಸಮಸ್ಯೆ, ಬಡತನ, ಮೂಲ ಸೌಕರ್ಯಗಳ ಕೊರತೆ ಮುಂತಾದ ಮೂಲಭೂತ ಸಮಸ್ಯೆಗಳನ್ನು ಪೂರ್ಣವಾಗಿ ಬಗೆಹರಿಸುವ ಭರವಸೆ ನೀಡುತ್ತದೆ. |