Log in
  • ಮುಖಪುಟ
  • ಅಭಿವೃದ್ಧಿಗೆ ಅಡಿಗಲ್ಲು ಈ ಬಜೆಟ್

ಅಭಿವೃದ್ಧಿಗೆ ಅಡಿಗಲ್ಲು ಈ ಬಜೆಟ್

ಮಹಾದೇವಯ್ಯ ಕರದಳ್ಳಿ

ಮತ್ತೊಮ್ಮೆ ಚುನಾವಣೆ ಗೆದ್ದು ಸರ್ಕಾರ ರಚಿಸುತ್ತೇವೆಂಬ ವಿಶ್ವಾಸದಿಂದ ಚುನಾವಣೆ ಪೂರ್ವದಲ್ಲಿ ಮಂಡನೆಯಾಗಿದ್ದ ಅಂದಿನ ಬಜೆಟ್ ಒಂದು ರೀತಿಯಲ್ಲಿ ಮುಂದಿನ ಬಜೆಟ್ ಮುನ್ನುಡಿಯಂತೆ ಇತ್ತು. ಚುನಾವಣೆಯ ತಕ್ಷಣ ಬಜೆಟ್ ಆದದ್ದರಿಂದ ಯಾವುದೇ ಜನಪ್ರಿಯ ಬಜೆಟ್ ನಿರೀಕ್ಷೆ ಆರ್ಥಿಕವಲಯದಲ್ಲಿ ಇರಲಿಲ್ಲ. ಮತ್ತು ಜನ ಮೋದಿಯವರ ಮೊದಲ ಅವಧಿ ಒಪ್ಪಿ ಸ್ಪಷ್ಟಮತ ನೀಡಿದ್ದರಿಂದ ಬಜೆಟ್ ಕುರಿತು ಜನರಲ್ಲಿ ಜನಪ್ರಿಯ ಘೋಷಣೆಗಳ ನಿರೀಕ್ಷೆಗಳಿರಲಿಲ್ಲ.

ಮೋದಿ ಸರ್ಕಾರದ ಎರಡನೇ

ಅವಧಿಯ ಚೊಚ್ಚಲ ಬಜೆಟ್ ಮುಂದಿನ ದಶಕದ ಭಾರತದ ಅಭಿವೃದ್ಧಿಯ ಅಡಿಗಲ್ಲಿನಂತಿದೆ ಎನ್ನಬಹುದು. ಬುನಾದಿ ಗಟ್ಟಿಯಿದ್ದಲ್ಲಿ ಕಟ್ಟಡ ಸುರಕ್ಷಿತವಾಗಿ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಭವ್ಯ ಭಾರತದ ನಿರ್ಮಾಣದ ಕನಸಿನ ಸರ್ಕಾರ ದೀರ್ಘಕಾಲೀನ ಅಭಿವೃದ್ಧಿಯ ದೃಷ್ಟಿ ಹೊಂದಿದ್ದು ಹೊಸ ಮಾದರಿ ಪ್ರಸ್ತುತಪಡಿಸಿದಂತಾಗಿದೆ. ಹಿಂದಿನ ಸರ್ಕಾರಗಳು ವಾರ್ಷಿಕ ಬಜೆಟ್ ಮಂಡಿಸುತ್ತಿದ್ದರೆ ಈ ಸರ್ಕಾರ ದಶಕಗಳ ಬಜೆಟ್ ಮಂಡಿಸಿದೆ. ಸ್ವಾವಲಂಬಿ, ಸ್ವಾಭಿಮಾನಿ ಭಾರತದ ಶಂಕುಸ್ಥಾಪನೆಗೆ ಅಡ್ಡಿಯಾದ ಗುಲಾಮಿ ಮಾನಸಿಕತೆ ತೊಡೆದುಹಾಕಿದ ಸಂಕೇತವಾಗಿ ಬಜೆಟ್ ದಾಖಲೆಗಳನ್ನು ಸೂಟ್‌ಕೇಸ್‌ನಲ್ಲಿ ತರುವ ಪರಂಪರೆಗೆ ಮಂಗಳ ಹಾಡಿ ಸ್ವತಂತ್ರ ಮಾನಸಿಕತೆಗೆ ನಾಂದಿ ಹಾಡಿದ್ದು ಜೀವಂತ ಸಾಕ್ಷಿಯಾಗಿದೆ.

ಬಸವಣ್ಣನವರ ಯುಗದ ಸತ್ಯಶುದ್ಧ ಕಾಯಕ ಪರಿಕಲ್ಪನೆ ನೆನಪಿಸುವ ಕಾಯಕವೇ ಕೈಲಾಸ ತತ್ವದಂತೆ ಕೌಶಾಲ್ಯಾಭಿವೃದ್ಧಿ ಯೋಜನೆ, ಮತ್ತು ಉಳ್ಳವರು ಇಲ್ಲದವರ ಯೋಗಕ್ಷೇಮಕ್ಕೆ ಸಹಕಾರಿಯಾಗುವ ದಾಸೋಹ ಪರಿಕಲ್ಪನೆ ಮುಂಬರುವ ದಶಕಗಳಲ್ಲಿ ಸನಾತನ ಭಾರತದ ಸರ್ವೇ ಜನಾಃ ಸುಖಿನೋ ಭವಂತು ಅಂದರೆ ಜಾತಿ, ಮತ, ಪ್ರಾಂತ, ಪಂಗಡ, ಮೇಲು, ಕೀಳುಗಳೆಂಬ ಭಾವನೆಗಳಿಗೆ ಅವಕಾಶ ನೀಡದೆ ಎಲ್ಲರೂ ಸುಖಿಗಳಾಗಿ ಇರಬೇಕು ಎನ್ನುವ ಚಿಂತನೆಯ ಪ್ರತಿಷ್ಠಾಪನೆಯಂತಿದೆ. ಉದಾಹರಣೆಗೆ ಮುಂದಿನ 5 ವರ್ಷಗಳಲ್ಲಿ ಭಾರತದ ವೃದ್ಧಿಯನ್ನು 5 ಲಕ್ಷ ಕೋಟಿ ಡಾಲರ್ ( 5 ಟ್ರಿಲಿಯನ್ ಡಾಲರ್ ಆರ್ಥಿಕತೆ) ನಿರ್ಮಾಣದ ಗುರಿ, ಮೂಲಸೌಕರ್ಯ ಅಭಿವೃದ್ಧಿಗೆ 100 ಲಕ್ಷ ಕೋಟಿ, ಪ್ರತಿ ಮನೆಗೂ ವಿದ್ಯುತ್, ಶೌಚಾಲಯ, ಹರ್ ಘರ್ ಜಲ್, ಪ್ರತಿ ಮನೆಗೂ ಶುದ್ಧನೀರು ಸಿಗುವ ಯೋಜನೆ, ನೀರು ಕೊರತೆಗೆ ಪರಿಹಾರ ಹುಡುಕಲು ಜಲ ಮಂತ್ರಾಲಯ ಸ್ಥಾಪನೆ, ಒನ್ ನೇಷನ್ - ಒನ್ ಗ್ರಿಡ್ ಮೂಲಕ ಕಡಿಮೆ ದರದಲ್ಲಿ ವಿದ್ಯುತ್ ಸಂಪರ್ಕ, ಉತ್ಪಾದನೆ, ಉದ್ಯೋಗ ಹೆಚ್ಚಳಕ್ಕಾಗಿ ಎಂಎಸ್‌ಎಂಇಗಳಿಗೆ 300 ಕೋಟಿ ರೂ. ಸಾಲ, 2022 ರ ಒಳಗೆ ದೇಶದ ಎಲ್ಲಾ ಮನೆಗಳಿಗೂ ಎಲ್‌ಪಿಜಿ ಸಂಪರ್ಕ, ಮತ್ತು ಪ್ರಧಾನಮಂತ್ರಿ ಆವಾಸ ಯೋಜನೆಯಡಿ 114 ದಿನಗಳಲ್ಲಿ ಮನೆ ನಿರ್ಮಾಣ ತಂತ್ರಜ್ಞಾನದ ಮೂಲಕ ಗ್ರಾಮೀಣ ಪ್ರದೇಶದಲ್ಲಿ 1.95 ಕೋಟಿ ಮತ್ತು ನಗರ ಪ್ರದೇಶದಲ್ಲಿ 80ಲಕ್ಷ ಮನೆ ನಿರ್ಮಾಣದ ಗುರಿ, ಶೇ. 97ರಷ್ಟು ಗ್ರಾಮಗಳಿಗೆ ಸರ್ವಋತು ಸಾರಿಗೆ ವ್ಯವಸ್ಥೆ, ಶೂನ್ಯ ಬಂಡವಾಳ ಕೃಷಿ, ಸಚ್ಚಾರಿತ್ರ್ಯವಂತ, ದೇಶಭಕ್ತ, ನಾಗರಿಕರ ನಿರ್ಮಾಣಕ್ಕಾಗಿ ಹೊಸ ಶಿಕ್ಷಣ ನೀತಿ, ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಸಹಭಾಗಿತ್ವಕ್ಕೆ ಉತ್ತೇಜನ ನೀಡಲು ನಾರಿಯರಿಂದ ನಾರಾಯಣಿ ಚಿಂತನೆ ಪ್ರಸ್ತಾಪವುಳ್ಳ ಸುಧಾರಣೆ, ದೇಶದಲ್ಲಿ ಸಂಶೋಧನೆಗೆ ಉತ್ತೇಜನ ನೀಡಲು ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ ಸ್ಥಾಪನೆ, ಭಾರತಮಾಲಾ, ಸಾಗರಮಾಲಾ ಹಾಗೂ ಉಡಾನದಂತಹ ಯೋಜನೆಗಳಿಂದ ಮೂಲಸೌಕರ್ಯ ಅಭಿವೃದ್ಧಿಗೆ ವೇಗ ಸಿಗಲಿದೆ. ನಗರ ಗ್ರಾಮೀಣ ಅಂತರ ಕಡಿಮೆ ಆಗಲಿದೆ. ವಿಶ್ವದರ್ಜೆಯ ಶಿಕ್ಷಣಸಂಸ್ಥೆಗಳ ಸ್ಥಾಪನೆಗಾಗಿ 400 ಕೋಟಿ, ವಿದೇಶಿ ವಿದ್ಯಾರ್ಥಿಗಳು ಭಾರತದಲ್ಲಿ ವ್ಯಾಸಾಂಗ ಮಾಡುವಂತಹ ವಾತಾವರಣ ನಿರ್ಮಿಸುವುದು, ಖೇಲೋ ಇಂಡಿಯಾ ಯೋಜನೆ ಅಡಿ ದೇಶೀ ಆಟಗಳಿಗೆ ಪ್ರೋತ್ಸಾಹ ಮಾಡಲು ರಾಷ್ಟ್ರೀಯ ಮಂಡಳಿ ಸ್ಥಾಪನೆ ಪ್ರಸ್ತಾವನೆ, ಜಾಗತಿಕ ಮಾರುಕಟ್ಟೆಯಲ್ಲಿ ಕುಶಲಕರ್ಮಿಗಳಿಗೆ, ಸೃಜನಾತ್ಮಕ ವ್ಯಕ್ತಿಗಳಿಗೆ ನೆರವು ನೀಡಲು ಹೊಸಯೋಜನೆ ಗಮನಿಸಿದಾಗ ಸಾಮರ್ಥ್ಯ ಸಾಬೀತು ಮೂಲಕ ಪರಿವರ್ತನೆ ಸಾಧಿಸುವ ಚಿಂತನೆ ಪ್ರಸ್ತುತ ಕೇಂದ್ರ ಸರ್ಕಾರದ್ದಾಗಿದೆ ಎಂಬ ಮಾತಿನಲ್ಲಿ ಸತ್ವ ಅಡಗಿದೆ. ಚಾಣಕ್ಯ, ಸ್ವಾಮಿ ವಿವೇಕಾನಂದರ ಮಾತುಗಳು, ಉರ್ದು ಶಾಹರಿ, ತುಳುವಿನಲ್ಲಿ ರಾಜನೀತಿ ಉದಾಹರಣೆ ಎಲ್ಲವೂ ಜಗದ ಜನರ ಯೋಗಕ್ಷೇಮದ ಜವಾಬ್ದಾರಿ ನಿರ್ವಹಿಸಲು ಭಾರತವು ಸಿದ್ಧವಾಗುತ್ತಿದೆ ಎಂಬ ಸಂದೇಶ ಭಾರತೀಯರಿಗೆ ಮತ್ತು ವಿಶ್ವಕ್ಕೆ ತಲುಪಿಸುವಂತಿವೆ. ಕೃಷಿ, ಗ್ರಾಮೀಣ, ವ್ಯಾಪಾರ, ಸುರಕ್ಷೆ, ಸಾರ್ವಭೌಮತ್ವ ಕ್ಷೇತ್ರಗಳಲ್ಲಿ ವಿಕಾಸದ ಚಿಂತನೆ ಅನಾವರಣವಾಗಿದೆ. ಸ್ವಲ್ಪ ಆತಂಕದ ವಿಷಯವೆಂದರೆ ಶತ ಪ್ರತಿಶತ ದೇಶಿ ಬಂಡವಾಳ ಹೂಡಿಕೆಗೆ ದೇಶೀಯ ಮಾರುಕಟ್ಟೆ ಮತ್ತು ಇನ್ಸೂರೆನ್ಸ್ ಕ್ಷೇತ್ರದಲ್ಲಿ ಅನುವುಮಾಡಿಕೊಟ್ಟಿರುವುದು. ವಿದೇಶಿ ಹೂಡಿಕೆೆೆಯ ದುಷ್ಟಪರಿಣಾಮಗಳು ಭಾರತದ ಮೇಲೆ ಆಗದಂತೆ ಮತ್ತು ವಿಮೆಯ ಲಾಭ ವಿದೇಶಿ ಕಂಪನಿಗಳ ಪಾಲಾಗದಂತೆ ದೇಶೀಯ ಉತ್ಪಾದನಾ ಕ್ಷೇತ್ರ ಮತ್ತು ವಿಮಾ ಕ್ಷೇತ್ರವನ್ನು ರಕ್ಷಿಸುವ ಅವಶ್ಯಕತೆ ಇದೆ. ಅವಿಭಕ್ತ ಕುಟುಂಬ ಪದ್ಧತಿ ಪೋಷಿಸುವ ಅಥವಾ ಕುಟುಂಬದಲ್ಲಿ ಹಿರಿಯರು, ವೃದ್ಧರು, ಅನಾರೋಗ್ಯ ಪೀಡಿತರು, ನಿರುದ್ಯೋಗಿಗಳು, ವಿಧವೆ, ಕನ್ಯೆ ಇತ್ಯಾದಿ ಸದಸ್ಯರು ಇರುವ ಕುಟುಂಬಗಳಿಗೆ ತೆರಿಗೆ ರಿಯಾಯಿತಿ, ಹೆಚ್ಚಿನ ಬಡ್ಡಿದರ, ಸಹಾಯಧನಯುಕ್ತ ಆಹಾರ ಪದಾರ್ಥಗಳ ಪೂರೈಕೆ, ಮುಂತಾದ ಪ್ರೋತ್ಸಾಹಿಸುವ ಕ್ರಮ ಸರ್ಕಾರದ್ದಾದರೆ ಬಹುಶಃ ಪೆನ್‌ಷನ್ ಅವಶ್ಯಕತೆ ತಾನಾಗಿ ಕಡಿಮೆ ಆಗಬಹುದು. ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ಗುಣಮಟ್ಟದ ಚಿಕಿತ್ಸೆ ಮತ್ತು ಔಷಧಗಳು ಲಭ್ಯವಾದರೆ ಆರೋಗ್ಯ ವಿಮೆ ಅವಶ್ಯಕತೆ ಕಡಿಮೆ ಆಗುತ್ತದೆ. ಸರ್ಕಾರ ವಿಮಾ ಕಂಪನಿಗಳಿಗೆ ನೀಡುವ ಹಣವನ್ನು ಆಸ್ಪತ್ರೆಗಳ ಗುಣಮಟ್ಟ ಹೆಚ್ಚಿಸುವಲ್ಲಿ ಖರ್ಚುಮಾಡುವ ಚಿಂತನೆಮಾಡಬೇಕು. ಆಗ ಆರೋಗ್ಯ ಉಚಿತ ಎಂಬ ಭಾರತೀಯ ಪರಿಕಲ್ಪನೆ ಮರುಕಳಿಸಬಹುದು. ಎಲ್ಲಾ ಬ್ಯಾಂಕುಗಳನ್ನು ಒಂದೇ ರೀತಿಯಲ್ಲಿ ಅರ್ಥಾತ್ ದೊಡ್ಡ ಗಾತ್ರದಲ್ಲಿ ನಿರ್ಮಿಸುವ ಬದಲಾಗಿ ಗ್ರಾಹಕರ ಅವಶ್ಯಕತೆ ಮತ್ತು ಗ್ರಾಮ-ನಗರಗಳ ಅವಶ್ಯಕತೆಗನುಗುಣವಾಗಿ ಬ್ಯಾಂಕಿಂಗ್ ವ್ಯವಸ್ಥೆ ಚಿಂತನೆ ಆಗಬೇಕು. ಆಪತ್ಕಾಲದಲ್ಲಿ ಆಪದ್ಧನ ಇರಬೇಕು ಎಂಬ ಕಾರಣಕ್ಕಾಗಿ ಮತ್ತು ಸುರಕ್ಷೆಗಾಗಿ, ನಿರಂತರ ಆದಾಯಕ್ಕಾಗಿ ಬಹುತೇಕ ಗ್ರಾಹಕರು ಬ್ಯಾಂಕ್‌ಗಳಲ್ಲಿ ಹಣ ಡಿಪಾಜಿಟ್ ಮಾಡುತ್ತಾರೆ. ಸರ್ಕಾರ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಪನಂಬಿಕೆ ಉಂಟಾಗುವಂತಹ ಯಾವುದೇ ಕ್ರಮ ಕೈಗೊಳ್ಳುವುದು ಸರಿಯಲ್ಲ. ಗ್ರಾಹಕ ತನ್ನ ಉಳಿತಾಯಕ್ಕೆ ಬಡ್ಡಿ ಆಪೇಕ್ಷೆಪಡುತ್ತಾನೆ ಅದರ ವಿರುದ್ಧವಾಗಿ ಎಲ್ಲರೂ ತೆರಿಗೆಗಳ್ಳರೆಂಬ ಭಾವನೆಯಿಂದ ಸರ್ಕಾರ ಗ್ರಾಹಕನ ಹಣದ ಆದಾಯಕ್ಕೆ ಧಕ್ಕೆ ಬರುವ ರೀತಿ ಟಿಡಿಎಸ್, ಜಿಎಸ್‌ಟಿ, ತೆರಿಗೆ ಹಾಕುವುದರಿಂದ ಬ್ಯಾಂಕುಗಳು ಗ್ರಾಹಕರ ನಂಬಿಕೆ ಕಳೆದುಕೊಳ್ಳುತ್ತವೆ. ಶತಮಾನಗಳಿಂದ ನಿರ್ಮಾಣವಾದ ಈ ನಂಬಿಕೆಗೆ ಪೆಟ್ಟು ನೀಡುವಂತಹ ಕಾನೂನು ತರಬಾರದು. ಆರ್ಥಿಕ ಅಪರಾಧಿಗಳನ್ನು, ತೆರಿಗೆ ಕದ್ದವರನ್ನು ಹಿಡಿಯಲು ಬೇರೆ ಉಪಾಯ ಯೋಚಿಸಬೇಕು. ಹತ್ತು ಹಲವು ಸುಧಾರಣೆಗಳಿಗೆ ಆಸ್ಪದ ಇದ್ದರೂ ಪ್ರಗತಿಯತ್ತ ದಿಟ್ಟಹೆಜ್ಜೆ ಎನ್ನಬಹುದು. ಭಾರತದ ಜನತೆ ಸರ್ಕಾರದ ದಿಟ್ಟ ನಿಲುವುಗಳಿಂದಾಗಿ ಮಧ್ಯಮವರ್ಗದವರಿಗೆ ಕಡಿಮೆ ಸಿಹಿ ಹೆಚ್ಚು ಕಹಿಗಳ ಮಿಶ್ರಣದ ಬಜೆಟ್ ಇದ್ದರೂ ಒಪ್ಪಿಕೊಂಡು ಭಾರತದ ಅಭಿವೃದ್ಧಿಗೆ ಬೇಕಾದ ಅಡಿಗಲ್ಲು ಹಾಕಬೇಕಾಗಿದೆ.


This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management