Log in
  • ಮುಖಪುಟ
  • ಪರಿಶ್ರಮದಿಂದ ಪವಾಡ IDC ಎಂಬ ಆಹಾರ ಗೃಹ

ಪರಿಶ್ರಮದಿಂದ ಪವಾಡ IDC ಎಂಬ ಆಹಾರ ಗೃಹ

ಕೆ.ಬಿ. ಮನೋಜ್ ಕುಮಾರ್

ಇಂದೂ ಕೂಡಾ ಗ್ರಾಹಕರು ಹೆಚ್ಚಾಗಿ ಬಂದ ಸಮಯದಲ್ಲಿ ತಟ್ಟೆ-ಲೋಟಗಳನ್ನು ಎತ್ತುತ್ತೇನೆ, ತೊಳೆಯುತ್ತೇನೆ. ನನ್ನ ಬಳಿ ಕೆಲಸಮಾಡುವವರನ್ನು ಸಹದ್ಯೋಗಿಗಳಂತೆ ನೋಡಿಕೊಳ್ಳುತ್ತಿದ್ದೇನೆ, ಹಾಗಾಗಿ ಅವರು ಕೂಡಾ ಗ್ರಾಹಕರೊಂದಿಗೆ ಪ್ರೀತಿ, ಸ್ನೇಹದಿಂದ ವ್ಯವಹರಿಸುತ್ತಾರೆ. ಇದರ ಫಲವಾಗಿ ನಮ್ಮ ಹೋಟೆಲ್ ಇಷ್ಟೊಂದು ಎತ್ತರಕ್ಕೆ ಬೆಳೆದು ಗ್ರಾಹಕರ ಪ್ರೀತಿಯನ್ನು ಪಡೆದಿದೆ.

ಚಲನಚಿತ್ರದಲ್ಲಿ ಅಭಿನಯಿಸಬೇಕು, ಒಬ್ಬ ದೊಡ್ಡ ಕಲಾವಿದನಾಗಬೇಕು ಎಂಬ ಮಹದಾಸೆಯಿಂದ ತನ್ನ ಇಂಜಿನಿಯರಿಂಗ್ ಪದವಿಯನ್ನು ಅರ್ಧದಲ್ಲಿ ಮೊಟಕುಗೊಳಿಸಿ 2002 ರಿಂದ 2009 ರವರೆಗೆ ಗಾಂಧಿನಗರ, ಮುಂಬೈ, ಚೆನ್ನೈ, ದಿಲ್ಲಿಗಳಲ್ಲಿ ಸುತ್ತಿ ಕೈಯಲ್ಲಿ ಹಣವಿಲ್ಲದೆ, ಜೀವನಮಾಡಲು ಹೋಟೆಲ್‌ಗಳಲ್ಲಿ ಎಲ್ಲಾ ತರಹದ ಕೆಲಸಮಾಡಿದ ಹುಡುಗ-ಎಲ್ಲಾ ಕಷ್ಟಗಳನ್ನು ಮೆಟ್ಟಿ ತನ್ನದೇ ಆದ ಹೋಟೆಲ್ ಮಾಡಿ 200 ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.

ಈಗ ಹೇಳಹೊರಟಿರುವುದು 'ಐಡಿಸಿ ಕಿಚನ್' ಎಂಬ ಹೋಟೆಲಿನ ಕಥೆ. ಇದರ ಮಾಲೀಕರು ಎಂಗ್ ಆ್ಯಂಡ್ ಎನರ್ಜಿಟಿಕ್ ಆದ ರಾಘವೇಂದ್ರ ರಾವ್ ಅವರದ್ದು. ಇವರು ಹುಟ್ಟಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳಿದೇನ ಹಳ್ಳಿಯಲ್ಲಿ. ಮಧ್ಯಮವರ್ಗದ ಕೃಷಿಕ ಕಮ್ ಅರ್ಚಕ ಕುಟುಂಬ. ಹುಟ್ಟೂರಿನಲ್ಲೇ ವಿದ್ಯಾಭ್ಯಾಸ ಮುಗಿಸಿ ಬಿ.ಇ. ಮಾಡಲು ಬೆಂಗಳೂರಿಗೆ ಬಂದರು. ಎರಡು ವರ್ಷದ ಅಧ್ಯಯನದ ಬಳಿಕ ಓದಿನಲ್ಲಿ ನಿರಾಸಕ್ತಿ ಬೆಳೆಯಿತು. ಕಾರಣ ಅವರಿಗೆ ಮುಂಚಿನಿಂದಲೂ ಚಲನಚಿತ್ರದಲ್ಲಿ ಅಭಿನಯಿಸಬೇಕು, ಒಬ್ಬ ದೊಡ್ಡ ನಾಯಕ ನಟನಾಗಬೇಕು ಎಂಬ ಹುಚ್ಚುಆಸೆ ತಲೆಯಲ್ಲಿತ್ತು. ಹಾಗಾಗಿ 2002 ರಲ್ಲಿ ತನ್ನ 2 ನೇ ವರ್ಷದ ಬಿ.ಇ. ಮುಗಿಸಿ ಒಂದು ದಿನ ಯಾರಿಗೂ ಹೇಳದೇ ಕಾಲೇಜಿಗೆ ಗುಡ್‌ಬೈ ಹೇಳಿ, ಕೈಯಲ್ಲಿ ಒಂದು ಬ್ಯಾಗನ್ನು ಹಿಡಿದುಕೊಂಡು, ಚಲನಚಿತ್ರದಲ್ಲಿ ನಾಯಕನಟನಾಗಬೇಕೆಂಬ ಆಸೆಯ ದಿಕ್ಕಿಗೆ ನಡೆದರು. ಆದರೆ ಕೈಯಲ್ಲಿ ಹಣವಿಲ್ಲದ್ದರಿಂದ ತನ್ನ ಜೀವನೋಪಾಯಕ್ಕಾಗಿ ಹೋಟೆಲ್‌ಗಳಲ್ಲಿ ಕೆಲಸಮಾಡಲು ಶುರುಮಾಡಿದರು. ಬೆಂಗಳೂರಿನ ಹೋಟೆಲ್‌ನಲ್ಲಿ 4 ವರ್ಷ, ಚೆನ್ನೈನ ಹೋಟೆಲ್‌ನಲ್ಲಿ 2 ವರ್ಷ, ದೆಹಲಿಯ ಹೋಟೆಲ್‌ನಲ್ಲಿ 1 ವರ್ಷ, ಬಾಂಬೆಯ ಹೋಟೆಲ್‌ನಲ್ಲಿ 1 ವರ್ಷ ಹೀಗೆ ಬರೋಬ್ಬರಿ ಬೇರೆ ಬೇರೆ ರಾಜ್ಯಗಳಲ್ಲಿ ಒಟ್ಟು 8 ವರ್ಷ ಎಲ್ಲಾ ತರಹದ ಕೆಲಸವನ್ನು ಮಾಡುತ್ತಾ, ಕೆಲವರನ್ನು ಸಂಪರ್ಕಿಸಿ ಸಿನೆಮಾದಲ್ಲಿ ಅಭಿನಯಿಸುವ ಪ್ರಯತ್ನಮಾಡಿದರು, ಆದರೆ ಅದು ಸಫಲವಾಗಲಿಲ್ಲ.

8 ವರ್ಷಗಳ ನಂತರ ಇದ್ದಕ್ಕಿದ್ದ ಹಾಗೆ ನಾನು ಹೋಗುತ್ತಿರುವ ದಾರಿ ಸರಿಯಲ್ಲ ಎಂದೆನಿಸಿ, ಮತ್ತೆ ಓದಲು ನಿರ್ಧರಿಸಿ, ಮುಂಚೆ ತಾನು ಓದುತ್ತಿದ್ದ ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜಿಗೆ ಬಂದು ಪ್ರಾಂಶುಪಾಲರನ್ನು ಭೇಟಿಮಾಡಿ 2009 ರಲ್ಲಿ ತನ್ನ ಬಿ.ಇ. ಪದವಿಯನ್ನು ಮುಗಿಸಿದರು. ನಂತರ ಎಲ್ಲರಂತೆ ಒಂದು ಕಂಪನಿಯಲ್ಲಿ ಕೆಲಸಮಾಡಲು ಶುರುಮಾಡಿದರು. 8 ವರ್ಷ ಮನೆ, ಕಾಲೇಜು ಬಿಟ್ಟು ಅಲೆಮಾರಿ ಜೀವನ ನಡೆಸಿ ಮತ್ತೆ ಮನೆಗೆ ವಾಪಸ್ಸಾಗಿ ಓದನ್ನು ಮುಂದುವರೆಸಿ ಎಲ್ಲರಂತೆ ಸಮಾಜದಲ್ಲಿ ನಮ್ಮ ಮಗ ಬದುಕುತ್ತಿದ್ದಾನೆ ಎಂದು ತಂದೆ-ತಾಯಿ ನೆಮ್ಮದಿಯ ಉಸಿರು ಬಿಡುತ್ತಿರುವಾಗಲೇ, ಕೆಲಸಕ್ಕೆ ಸೇರಿ 6 ತಿಂಗಳಲ್ಲೇ ಆ ಕೆಲಸ ಬೋರ್ ಹೊಡೆಯಲು ಶುರುಮಾಡಿತು. ಮುಂದೇನು ಎಂಬ ಆಲೋಚನೆ ಪ್ರಾರಂಭವಾದಾಗ ತಕ್ಷಣ ಇವರ ತಲೆಗೆ ಹೊಳೆದದ್ದು, ನಾನೇಕೆ ಹೋಟೆಲ್ ಮಾಡಬಾರದು ಎಂದು. ಈ ವಿಚಾರವನ್ನು ಮನೆಯವರ ಮುಂದೆ ಇಟ್ಟಾಗ ಬಂದ ಪ್ರತಿಕ್ರಿಯೆ - ಈಗಲೇ 8 ವರ್ಷ ನಿನ್ನ ಜೀವನವನ್ನು ಹಾಳುಮಾಡಿಕೊಂಡಿದ್ದೀಯ, ಮತ್ತೊಂದೇನೋ ಮಾಡಿ ಇನ್ನೇನೋ ಆಗುವುದು ಬೇಡ ಎಂದು ಎಲ್ಲರೂ ವಿರೋಧಿಸಿದರು. ಆದರೆ ಇದ್ಯಾವುದಕ್ಕೂ ಕಿವಿಗೊಡದೆ ಹೋಟೆಲ್ ಮಾಡಿಯೇ ತೀರುತ್ತೇನೆಂದು ಪಣತೊಟ್ಟರು. ಆದರೆ ಕೈಯಲ್ಲಿ ಕಾಸಿಲ್ಲ, ಹಾಗೂ-ಹೀಗೂ ಸ್ನೇಹಿತರಲ್ಲಿ ಸಾಲಮಾಡಿ ಎರಡೂವರೆ ಲಕ್ಷ ಹೊಂದಿಸಿದರು. ನಂತರ 100 ಸ್ಕ್ವೆಯರ್‌ಫೀಟ್ ಇರುವ ಕೊಠಡಿಯೊಂದನ್ನು ಬಾಡಿಗೆಗೆ ಪಡೆದು 4 ಜನ ಕೆಲಸಗಾರರನ್ನು ಹುಡುಕಿ ಕರೆದುಕೊಂಡು ಬಂದು, ಮೂರು ಚಕ್ರವಿರುವ ಸೈಕಲ್‌ಗಾಡಿಯನ್ನು ಸಿದ್ಧಮಾಡಿಸಿ, ಫೆ. 2012 ರಲ್ಲಿ ಮಲ್ಲೇಶ್ವರಂ ಬಳಿಯಿರುವ ಕುಮಾರ ಪಾರ್ಕ್‌ನ ಫುಟ್‌ಪಾತ್‌ನಲ್ಲಿ ಸಂಜೆ ವೇಳೆ - ಇಡ್ಲಿ, ದೋಸೆ, ಕಾಫಿಯನ್ನು ಜನರಿಗೆ ನೀಡಲು ಶುರುಮಾಡಿಯೇಬಿಟ್ಟರು. ಪ್ರಾರಂಭವಾದ ಕೆಲವೇ ದಿನಗಳಲ್ಲಿ ಜನರಿಂದ ಅಪಾರ ಪ್ರೋತ್ಸಾಹ ಸಿಕ್ಕಿ ದಿನೇದಿನೇ ಬೇಡಿಕೆ ಹೆಚ್ಚಾದಂತೆ, ಇವರು ಮಾಡುತ್ತಿದ್ದ ಅಡುಗೆಗಳ ಸಂಖ್ಯೆಯೂ ಹೆಚ್ಚಾಯಿತು. ಇವರ ಅಡುಗೆಯ ಶುಚಿ, ರುಚಿ ತಿಂಡಿಗಳನ್ನು ಸವಿಯಲು ದೂರದೂರದಿಂದ ಜನರು ಬರುವುದು

ಅಧಿಕವಾಯಿತು. ಆರಂಭಿಸಿದ ನಾಲ್ಕು ತಿಂಗಳ ಅವಧಿಯಲ್ಲೇ ಕೆಲವು ಕಾರ್ಪೋರೇಟರ್‌ಗಳು ಹಾಗೂ ಅಧಿಕಾರಿಗಳ ಕಿರುಕುಳಗಳಿಂದ ಕ್ಯಾಂಟೀನ್ ವಾರ ಮುಚ್ಚಬೇಕಾಯಿತು. ಇನ್ನೇನು ಅಷ್ಟೇ ಮುಗಿಯಿತು ಎನ್ನುವಷ್ಟರಲ್ಲಿ ಇವರ ಕ್ಯಾಂಟೀನ್‌ಗೆ ಬಂದು ತಿಂಡಿ ತಿಂದು ಪರಿಚಯವಾಗಿದ್ದ ಹಲವರು ಇವರ ಪರವಾಗಿ ನಿಂತು ಬೆಂಬಲ ನೀಡಿ ಮತ್ತೆ ಅದೇ ಜಾಗದಲ್ಲಿ ಕ್ಯಾಂಟೀನ್ ಇಡಲು ಸಹಕರಿಸಿದರು. ಕ್ರಮೇಣ ಬರುವ ಗ್ರಾಹಕರ ಸಂಖ್ಯೆಯು ಬೆಳೆಯಹತ್ತಿತ್ತು. ಕೇವಲ ಸಂಜೆ ವೇಳೆ ಮಾತ್ರ ಕ್ಯಾಂಟೀನ್ ತೆರೆಯುತ್ತಿದ್ದ ಇವರು ಗ್ರಾಹಕರ ಒತ್ತಾಯದ ಮೇರೆಗೆ ಮಧ್ಯಾಹ್ನದ ಊಟವನ್ನೂ ಕೊಡಲು ನಿರ್ಧರಿಸಿ, ಮೆಜೆಸ್ಟಿಕ್‌ನ ರೈಲ್ವೆ ಪ್ಯಾರಲಲ್ ರೋಡ್‌ಗೆ ಗಾಡಿಯನ್ನು ತಳ್ಳಿಕೊಂಡು ಹೋಗಿ ಊಟ ನೀಡಲು ಪ್ರಾರಂಭಿಸಿದರು. ರಾಘವೇಂದ್ರ ಶ್ರಮಜೀವಿಯಾಗಿದ್ದರೆಂದರೆ - ಬೆಳಿಗ್ಗೆ 5 ಕ್ಕೆ ಕೆಲಸ ಶುರುವಾದರೆ, ರಾತ್ರಿ 1 ಗಂಟೆಗೆ ಮುಗಿಯುತ್ತಿತ್ತು. ಪ್ರತಿದಿನ ನಿದ್ರೆ 3 ರಿಂದ 4 ಗಂಟೆ ಅಷ್ಟೆ. ಇವರ ಜೊತೆ ಇದ್ದ ನಾಲ್ಕು ಜನರು ಕೂಡಾ ಇವರಂತೆಯೇ ಕೆಲಸ ಮಾಡುತ್ತಿದ್ದರು. ಆ ಹೋಟೆಲಿಗೆ ಐ.ಡಿ.ಸಿ. ಕಿಚನ್ ಎಂದು ನಾಮಕರಣಮಾಡಿದರು. ಆರಂಭದ ದಿನಗಳಲ್ಲಿ ಮೂರು ಚಕ್ರದ ಸೈಕಲ್‌ನಲ್ಲಿ ಇಡ್ಲಿ, ದೋಸೆ, ಕಾಫಿಯ ಮಾರಾಟ ಮಾಡಿದ್ದರಿಂದ ಆ ಮೂರು ಪದಾರ್ಥಗಳ ಮೊದಲನೆಯ ಒಂದೊಂದು ಆಂಗ್ಲ ಅಕ್ಷರಗಳನ್ನು ತೆಗೆದುಕೊಂಡು ತಮ್ಮ ಹೋಟೆಲ್‌ಗೆ ಇಟ್ಟಿದ್ದಾರೆ.

ಆರಂಭದ ದಿನಗಳಲ್ಲಿ 5 ಪದಾರ್ಥಗಳಿಂದ ಶುರುವಾದ ಹೋಟೆಲ್ ಇಂದು 25 ಬಗೆಯ ವಿವಿಧ ಶುಚಿರುಚಿಯಾದ ಉಪಾಹಾರ, ಭೋಜನವನ್ನು ಗ್ರಾಹಕರಿಗೆ ನೀಡುತ್ತಿದೆ. ಅಷ್ಟೇ ಅಲ್ಲದೆ, ಬೆಂಗಳೂರಿನಲ್ಲಿ 3 ಬ್ರಾಂಚನ್ನು ಹೊಂದಿ 200 ಜನರಿಗೆ ಉದ್ಯೋಗಾವಕಾಶವನ್ನೂ ಈ ಉಪಾಹಾರ ಮಂದಿರ ನೀಡಿದೆ. ಇದರ ಜೊತೆಗೆ ಇವರು ಮುಂಬೈನಲ್ಲೂ 2 ಬ್ರಾಂಚ್‌ಗಳನ್ನು ಮಾಡಿದ್ದಾರೆ. 2018 ರಲ್ಲಿ ಐಡಿಸಿ ವ್ಹೀಲ್ಸ್ ಆರಂಭಿಸಿ ಬೇರೆಬೇರೆ ಸಂಸ್ಥೆಗಳಿಗೆ ಕೇಟರಿಂಗ್ ಸೌಲಭ್ಯವನ್ನು ಮಾಡಿದ್ದಾರೆ.

ಹೇಗೆ ನೀವು ಐದಾರು ವರ್ಷದಲ್ಲೇ ಇಷ್ಟೊಂದು ದೊಡ್ಡಮಟ್ಟದಲ್ಲಿ ನಿಮ್ಮ ಹೋಟೆಲನ್ನು ಬೆಳೆಸಿದಿರಿ ಎಂಬ ಪ್ರಶ್ನೆಗೆ ಅವರಿಂದ ಬಂದ ಉತ್ತರ - ನಾನು ಯಾವತ್ತೂ ಇಲ್ಲಿ ಮಾಲೀಕನಾಗಿ ಕೆಲಸಮಾಡಲೇ ಇಲ್ಲ. ನಾನು ನನ್ನ ಕೆಲಸಗಾರರನ್ನು ಕೆಲಸಗಾರರಂತೆ ನೋಡೇ ಇಲ್ಲ. ಇಂದೂ ಕೂಡಾ ಗ್ರಾಹಕರು ಹೆಚ್ಚಾಗಿ ಬಂದ ಸಮಯದಲ್ಲಿ ತಟ್ಟೆ-ಲೋಟಗಳನ್ನು ಎತ್ತುತ್ತೇನೆ, ತೊಳೆಯುತ್ತೇನೆ. ನನ್ನ ಬಳಿ ಕೆಲಸಮಾಡುವವರನ್ನು ಸಹದ್ಯೋಗಿಗಳಂತೆ ನೋಡಿಕೊಳ್ಳುತ್ತಿದ್ದೇನೆ, ಹಾಗಾಗಿ ಅವರು ಕೂಡಾ ಗ್ರಾಹಕರೊಂದಿಗೆ ಪ್ರೀತಿ, ಸ್ನೇಹದಿಂದ ವ್ಯವಹರಿಸುತ್ತಾರೆ. ಇದರ ಫಲವಾಗಿ ನಮ್ಮ ಹೋಟೆಲ್ ಇಷ್ಟೊಂದು ಎತ್ತರಕ್ಕೆ ಬೆಳೆದು ಗ್ರಾಹಕರ ಪ್ರೀತಿಯನ್ನು ಪಡೆದಿದೆ.

ನಾನು ಆರಂಭದಲ್ಲಿ ಹೋಟೆಲ್ ಮಾಡಬೇಕೆಂಬ ಆಸೆಯಿಂದ ಮೂರು ಚಕ್ರದ ಸೈಕಲ್‌ನಲ್ಲಿ, ಫುಟ್‌ಪಾತ್ ಬಳಿ ದೋಸೆ, ಇಡ್ಲಿ ಕೊಡಲು ಶುರುಮಾಡಿದಾಗ ತುಂಬಾ ಜನ ಹಂಗಿಸಿದರು. ಮನೆತನದ ಮಾನ-ಮರ್ಯಾದೆ ತೆಗೆಯುತ್ತಿದ್ದಾನೆ ಎಂದು ಆಡಿಕೊಂಡರು. ಆದರೂ ಅವರ ಮಾತಿಗೆ ಕಿವಿಗೊಡದೆ ನನ್ನ ಕೆಲಸವನ್ನು ಶ್ರದ್ಧೆಯಿಂದ ಮಾಡಿದ್ದೇನೆ. ನನ್ನ ಕೆಲಸವನ್ನು ಪ್ರೀತಿಸಿದೆ, ನನ್ನವರೊಂದಿಗೆ ಸ್ನೇಹದಿಂದ ನಡೆದುಕೊಂಡೆ. ಅಂದು ಆರಂಭದಲ್ಲಿ ನನ್ನ ಜೊತೆ ಇದ್ದ ಆ ನಾಲ್ವರು ಇಂದು ನನ್ನ ಬಳಿಯೇ ಇದ್ದಾರೆ. ನಾವು ಯಾವ ಕೆಲಸ ಮಾಡಬೇಕು ಎಂದುಕೊಂಡಿದ್ದೇವೆಯೋ ಆ ಕೆಲಸವನ್ನು ಧೈರ್ಯದಿಂದ ಮಾಡಬೇಕು. ಇತರರು ಏನನ್ನುತ್ತಾರೋ ಎಂದು ತಲೆಕೆಡಿಸಿಕೊಳ್ಳಬಾರದು ಆಗ ಮಾತ್ರ ನಾವು ನಮ್ಮ ದಾರಿಯಲ್ಲಿ ಯಶಸ್ಸನ್ನು ಕಾಣಲು ಸಾಧ್ಯ. ಅಂದು ಬೈದವರು, ಆಡಿಕೊಂಡವರು ಇಂದು ನನ್ನ ಹೋಟೆಲ್‌ಗೆ ಬಂದು ಹೇಗಿದ್ದೀರಿ, ಚೆನ್ನಾಗಿದ್ದೀರಾ ಎಂದು ಮಾತನಾಡಿಸಿ, ತಿಂಡಿ-ಊಟ ಮಾಡಿಕೊಂಡು ಹೋಗಿದ್ದಾರೆ. ಇಷ್ಟು ಸಾಕಲ್ಲವೆ ನನಗೆ?.

ನಿಮ್ಮ ಮುಂದಿನ ಗುರಿ ಏನು ಎಂಬ ಮಾತಿಗೆ - ನಮ್ಮ ಧ್ಯೇಯ ಎಲ್ಲಾ ರಾಜ್ಯಗಳಲ್ಲೂ ನಮ್ಮ ದಕ್ಷಿಣಭಾರತ ಭೋಜನದ ರುಚಿಯನ್ನು ಐಡಿಸಿ ಮೂಲಕ ಪರಿಚಯಿಸಬೇಕೆಂಬುದು, ಅಷ್ಟೇ ಅಲ್ಲದೆ ಗ್ರಾಹಕರಿಗೆ ರಾಸಾಯನಿಕಮುಕ್ತ ಹಾಗೂ ಅತಿ ಕಡಿಮೆ ಬೆಲೆಯಲ್ಲಿ ಆಹಾರವನ್ನು ನೀಡಿ ಅವರ ಆರೋಗ್ಯವನ್ನು ಕಾಪಾಡುವ ಮಹತ್ವದ ಗುರಿಯನ್ನು ಹೊಂದಿದ್ದೇವೆ.

ಇಂಥ ಒಬ್ಬ ಪರಿಶ್ರಮಿ ಎಂಗ್ ಅಂಡ್ ಎನರ್ಜಿಟಿಕ್ ಆಗಿರುವ 35 ವರ್ಷದ ರಾಘವೇಂದ್ರರಾವ್ ಅವರಿಗೆ ನಮ್ಮದೊಂದು ಸಲಾಂ ಹೇಳೋಣ.

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management