Log in
  • ಮುಖಪುಟ
  • ಸ್ವಚ್ಛ ಶರೀರದಿಂದಲೇ ಸಾಧ್ಯ - ಸ್ವಚ್ಛಸಮಾಜ

ಸ್ವಚ್ಛ ಶರೀರದಿಂದಲೇ ಸಾಧ್ಯ - ಸ್ವಚ್ಛಸಮಾಜ

ಪದ್ಮಾಮೂರ್ತಿ

ನಮ್ಮ ಜೀವನ, ನಮ್ಮ ವರ್ತನೆ, ಬದುಕು ಇವೆಲ್ಲಾನ ಡೆಯಬೇಕಿದ್ದರೆ, ಆಹಾರ ಮುಖ್ಯ ವಾಗುತ್ತದೆ.ನಮ್ಮ ತನು-ಮನ ಆರೋಗ್ಯವಾಗಿದ್ದರೆ ತಾನೇ, ನಮ್ಮ ಕೆಲಸ, ಕಾರ್ಯ, ಸಮಾಜಸೇವೆ, ನಾಲ್ಕು ಜನಕ್ಕೆ ಒಳ್ಳೆಯದು ಮಾಡುವುದು.!ಆರೋಗ್ಯ ಕೆಡಿಸಿಕೊಂಡು ರೋಗದಿಂದ ಹಾಸಿಗೆ ಹಿಡಿದರೆ ನಮ್ಮ ಕೆಲಸ ಇರಲಿ, ನಮ್ಮನ್ನು ನೋಡಿಕೊಳ್ಳಲೂ ಬೇರೆಯವರ ಸಹಾಯ ಕೇಳಬೇಕಾಗುತ್ತದೆ. ರೋಗಗ್ರಸ್ತ ವ್ಯಕ್ತಿ, ತಾನೇ..ಬೇರೆಯವರಿಗೆ ಅವಲಂಬಿತನಾಗಿರುತ್ತಾನೆ.ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳಲಾಗುವುದಿಲ್ಲ. ಇನ್ನು ಬೇರೆ ಜನರಿಗೆ ಸೇವೆ ಮಾಡಲು ಹೇಗೆ ಸಾಧ್ಯಹೇಳಿ..!

ನಮ್ಮ ಶರೀರ ಆರೋಗ್ಯವಾಗಿರಬೇಕಾದರೆ ನಾವು ಸೇವಿಸುವ ಆಹಾರ ಅತಿಮುಖ್ಯವಾಗುತ್ತದೆ. ಈಗ ಎಲ್ಲೆಲ್ಲಿ ನೋಡಿದರೂ ಕಲಬೆರಕೆಯ ಆಹಾರ, ಆಹಾರದಿಂದಲೇ ಫುಡ್‌ಪಾಯ್ಸನ್! ಹೀಗಾಗಿ ಆಹಾರ ಸೇವಿಸಲೇ ಭಯವಾಗುತ್ತದೆ. ನಾವು ತಿನ್ನುವ ಯಾವುದೇ ಆಹಾರವಾಗಲೀ ಅದನ್ನೆಲ್ಲಾ ನಾವು ಅನ್ನೋಪರಬ್ರಹ್ಮ ಎನ್ನುತ್ತೇವೆ. ಈ ಅನ್ನವನ್ನು ಭುಂಜಿಸುವಾಗ ಶ್ರದ್ಧಾ-ಭಕ್ತಿಗಳಿಂದ ತೆಗೆದುಕೊಳ್ಳಬೇಕು. ಅಗತ್ಯವಿದ್ದಷ್ಟು ಮಾತ್ರ ಊಟಮಾಡಬೇಕು. ಬದಲಾಗಿ ನಾಲಿಗೆ ಚಪಲಕ್ಕೆ ಒಳಗಾಗಿ ಆಹಾರವನ್ನು ಹೆಚ್ಚು ಹೆಚ್ಚು ಸೇವಿಸಬಾರದು. ನಾಲಿಗೆ, ಹೊಟ್ಟೆ ಎರಡು ಪರಸ್ಪರ ವಿರೋಧಿಗಳು, ಹೊಟ್ಟೆಗೂ ಕಣ್ಣಿಗೂ ಬಹಳ ಹತ್ತಿರದ ಸಂಬಂಧ ಹೊಟ್ಟೆ ಭರ್ತಿಯಾದಾಗ ಕಣ್ಣು ಎಳೆಯುತ್ತದೆ.

ನಾಲಿಗೆ ಚಾಪಲ್ಯ ತಡೆಯೋದು ಕಷ್ಟವೇ! ರುಚಿಗಾಗಿ ತಿಂಡಿತಿನ್ನು ಎನ್ನುತ್ತದೆ ನಾಲಿಗೆ. ಉದಾಹರಣೆಗೆ ಡಯಾಬಿಟಿಸ್ ಇರುವ ವ್ಯಕ್ತಿಯು ಸಿಹಿ ಪದಾರ್ಥಗಳನ್ನು ತಿನ್ನಬಾರದು. ಆದರೆ ಮನಸ್ಸು ತಿನ್ನು-ತಿನ್ನು ಎಂದು ಹೇಳುತ್ತದೆ. ಆದರೆ ನಾಲಿಗೆ ಒಂದೆರಡು ಕ್ಷಣ, ರುಚಿಯನ್ನು ನೋಡಿ, ಹೊಟ್ಟೆಗೆ ತಳ್ಳಿಬಿಡುತ್ತದೆ. ಯಾವುದನ್ನು ತಿನ್ನಬಾರದೋ ಅದನ್ನು ತಿಂದದ್ದರಿಂದ ಅದು ನಿಮ್ಮ ಶರೀರಕ್ಕೆ ವಿಷವಾಗಿ ಪರಿವರ್ತನೆಯಾಗುತ್ತದೆ. ಪರಿಣಾಮ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗಿ, ಆರೋಗ್ಯ ಏರುಪೇರಾಗುತ್ತದೆ.ಇಂಥಹ ಅನೇಕ ಪ್ರಸಂಗಗಳನ್ನು ಹೇಳಬಹುದು.ಈ ರೀತಿ ಶರೀರ ಸಲಹಲು ಮಾತ್ರವಲ್ಲ. ಖಾಯಿಲೆ ಬರಲು ಕೆಲವು ಆಹಾರ ಕಾರಣವಾಗುತ್ತದೆ. ಸದಾ ಹೊರಗಡೆ ತಿನ್ನುವವರು ತಮ್ಮ ಆರೋಗ್ಯವನ್ನು ತಾವೇ ಕಳೆದುಕೊಂಡಂತೆ. ಹೊರಗಡೆ ಯಾವರೀತಿ ಆಹಾರ ತಯಾರಿಸುತ್ತಾರೆ ಎಂದು ನೀವು ಒಮ್ಮೆ ನೋಡಿದರೆ, ಜನ್ಮೇಪಿ ಹೊರಗೆ ಆಹಾರ ಸೇವಿಸುವುದಿಲ್ಲ. ಅನಿವಾರ್ಯ ಸಮಯದಲ್ಲಿ ಬಿಟ್ಟು, ಬಾಕಿ ಸಮಯದಲ್ಲಿ ಮನೆಯ ಆಹಾರಕ್ಕೆ ಹೆಚ್ಚು ಒತ್ತು ಕೊಡಿರಿ..

ನೀವು ಏನು ಆಹಾರ ತೆಗೆದುಕೊಳ್ಳಬೇಕೋ ಅದನ್ನು ಮಾತ್ರ ಸೇವಿಸಬೇಕು. ಶರೀರಪೋಷಣೆಗೆ ಅಲ್ಲದೆ, ಶರೀರಕ್ಕೆ ವಿಷವಾಗುವ ಆಹಾರವನ್ನು ನಾಲಿಗೆ ಕೇಳುತ್ತದೆ ಎಂದು ಸೇವಿಸಬಾರದು. ಮಾಡಬಾರದ ಊಟ ಒಂದು ದಿನ ತಾನೇ ಎಂದು ಮಾಡಿದರೂ ಆರೋಗ್ಯ ಕೆಡುತ್ತದೆ. ನಿಮ್ಮ ಶರೀರ ಚಟುವಟಿಕೆ ಕಳೆದುಕೊಳ್ಳುತ್ತದೆ. ನೀವು ಆಫೀಸ್ ಕೆಲಸ ಮಾಡಲಾರಿರಿ. ಮಹಿಳೆಯರಾದರೆ ಮನೆಕೆಲಸ ಮಾಡಲಾರರು. ನಿಮ್ಮ ಮಕ್ಕಳನ್ನೇ ನೋಡಿಕೊಳ್ಳಲು ಅಸಮರ್ಥರಾಗಿರುತ್ತೀರಿ. ಆಲಸ್ಯ ಮತ್ತು ನಿಶ್ಯಕ್ತಿಯಿಂದ ಯಾವಾಗಲೂ ಮಲಗಿರಬೇಕೆಂದೆನಿಸುತ್ತದೆ. ಈ ಕಾರಣದಿಂದಲೇ ಅಗತ್ಯವಾದ ಶರೀರಕ್ಕೆ ಬೇಕಾದ ಪೋಷಕಾಂಶಗಳ ಆಹಾರವನ್ನು ತೆಗೆದುಕೊಳ್ಳಬೇಕು.

ಕೃತ್ರಿಮವಾಗಿ ತಯಾರುಮಾಡಿದ ಪದಾರ್ಥಗಳು ಆಹಾರಕ್ಕೆ ರುಚಿತರಿಸಿದರೂ, ನಿಮ್ಮ ಹೊಟ್ಟೆಯ ಜೀರ್ಣಶಕ್ತಿಯನ್ನು ಹಾಳುಮಾಡುತ್ತವೆೆ. ಶರೀರದ ಪೋಷಣೆಗೆ ಎಂತಹ ಆಹಾರ ಬೇಕು, ಎಂದು ತಿಳಿದುಕೊಂಡು ಅದನ್ನು ಕಾಲಕ್ಕೆ ಅನುಸಾರವಾಗಿ ಸೇವಿಸುತ್ತಾ, ಶರೀರವನ್ನು ಸದೃಢವಾಗಿ ಇಟ್ಟುಕೊಂಡರೆ, ಆರೋಗ್ಯಕರ ಜೀವನ ನಿಮ್ಮದಾಗುತ್ತದೆ. ಆರೋಗ್ಯ ಸರಿಯಾಗಿದ್ದರೆ ಮಾತ್ರ ಸಮಾಜದಲ್ಲಿ ಸಾಧಿಸಬೇಕಾದ ಎಲ್ಲಾ ಕೆಲಸಗಳನ್ನು ನೀವು, ಸಾಧಿಸುತ್ತಾ.. ಜೀವನದಲ್ಲಿ ಸಾರ್ಥಕತೆ ಕಾಣಬಹುದು.

ತಾಯಿಯಾದವಳು ತನ್ನ ಮಗುವಿನ ಆಹಾರದ ಬಗ್ಗೆ ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾಳೆ. ತಾಯಿ ಕೊಡುವ ಆಹಾರದಿಂದಲೇ ನಮ್ಮ ಶರೀರ ದೊಡ್ಡದಾಗಿದೆ. ಆರೋಗ್ಯಪೂರ್ಣವಾಗಿದೆ. ಅವಳು ಬೆಳೆಸಿದ ಆರೋಗ್ಯಪೂರ್ಣ ಶರೀರವನ್ನು ಕಾಪಾಡಿಕೊಳ್ಳಲು. ಶುದ್ಧ ಪೋಷಕಾಂಶವಿರುವ ಆಹಾರವನ್ನು ಸೇವಿಸಿಕೊಂಡು ಬಂದರೆ, ನಮಗೆ ಆರೋಗ್ಯಭಾಗ್ಯವಲ್ಲದೆ, ದೀರ್ಘಾಯುಷ್ ಭಾಗ್ಯ ಕೂಡ ಸಿಗುತ್ತದೆ. ಆರೋಗ್ಯಪೂರ್ಣ ದೇಹವಿದ್ದಾಗ ಮಾತ್ರ, ಆರೋಗ್ಯಪೂರ್ಣ ಚಿಂತನೆ ಮತ್ತು ಸ್ವಸ್ಥಸಮಾಜದ ಸೃಷ್ಟಿ ಸಾಧ್ಯ! ಇಂಗ್ಲಿಷ್ನಲ್ಲಿ ಒಂದು ಗಾದೆ ಇದೆ. HEALTH IS WEALTH ಎಂದು, ಅಂದರೆ ಆರೋಗ್ಯವೇ ಸಕಲ ಸೌಭಾಗ್ಯ ಎಂದು! ಹೀಗಾಗಿ ನಾವು ಸ್ವಸ್ಥವಾಗಿ ಬಾಳೋಣ, ಸ್ವಸ್ಥ ಆಹಾರವನ್ನು ಸೇವಿಸೋಣ, ಸ್ವಸ್ಥ ಸಮಾಜವನ್ನು ಕಟ್ಟೋಣ.


This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management