Log in
  • ಮುಖಪುಟ
  • ಗೋ ಸರ್ಕ್ಯೂಟ್ ಭಾರತೀಯ ಪ್ರವಾಸೋದ್ಯಮದಲ್ಲಿ ಒಂದು ಹೊಸ ಸಾಧ್ಯತೆ

ಗೋ ಸರ್ಕ್ಯೂಟ್

ಭಾರತೀಯ ಪ್ರವಾಸೋದ್ಯಮದಲ್ಲಿ ಒಂದು ಹೊಸ ಸಾಧ್ಯತೆ

ಎಸ್.ಎಲ್. ರಾಧಾಕೃಷ್ಣ ಹೊಳ್ಳ

ಇತಿಹಾಸ ಪ್ರಸಿದ್ಧ ಸ್ಥಳಗಳಿಗೆ, ತಿೀರ್ಥಕ್ಷೇತ್ರಗಳಿಗೆ ಅಥವಾ ನಿಸರ್ಗದ ಸೌಂದರ್ಯ ಸವಿಯಲು ಪ್ರವಾಸ ಹೋಗುವುದನ್ನು ನಾವು ನೋಡಿದ್ದೇವೆ. ಆದರೆ, ವಿವಿಧ ದೇಶೀಯ ತಳಿಯ ಗೋವುಗಳನ್ನು ನೋಡುವುದಕ್ಕೆಂದೇ ಪ್ರವಾಸಹೋಗಲು ಸಾಧ್ಯವೇ? ಬಹುಶಃ ಅಂತಹದ್ದೊಂದು ವ್ಯವಸ್ಥೆ ಸದ್ಯದಲ್ಲೇ ಸಾಕಾರಗೊಳ್ಳಲಿದೆ.

ಫೆ. 2019 ರ ಬಜೆಟ್‌ನಲ್ಲಿ ಕೇಂದ್ರಸರ್ಕಾರ ರಾಷ್ಟ್ರೀಯ ಕಾಮಧೇನು ಆಯೋಗವನ್ನು ಸ್ಥಾಪಿಸುವ ಘೋಷಣೆ ಮಾಡಿತ್ತು. ಅದರಂತೆ ಆಯೋಗ ಈಗ ಕೆಲಸ ಪ್ರಾರಂಭಿಸಿದ್ದು ಗೋಸೇವೆ, ಗೋವಿಜ್ಞಾನ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ಸಾಮಾಜಿಕ ಕಾರ್ಯಕರ್ತರು, ಪಶು ಸಂಗೋಪನೆ ಕ್ಷೇತ್ರದಲ್ಲಿ ಸಂಶೋಧನೆ ಮಾಡುತ್ತಿರುವ ವಿಜ್ಞಾನಿಗಳು ಹಾಗೂ ಕೆಲವು ರಾಜ್ಯಗಳ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಈ ಆಯೋಗದ ಸದಸ್ಯರು. ಆಯೋಗದ ಮೊದಲ ಸಭೆಯ ಬಳಿಕ ಅಧ್ಯಕ್ಷರಾದ ಡಾ. ವಲ್ಲಭ್ ಕಥೀರಿಯಾ ಅವರು ‘ಗೋ ಸರ್ಕ್ಯೂಟ್’ ಕಲ್ಪನೆಯನ್ನು ದೇಶದ ಮುಂದಿಟ್ಟಿದ್ದಾರೆ.

ದೇಸೀ ತಳಿಯ ಗೋವುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಾಕುವ ರಾಜ್ಯಗಳಾದ ಉತ್ತರಪ್ರದೇಶ, ಹರಿಯಾಣ, ರಾಜಸ್ಥಾನ, ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ ಮತ್ತು ಕೇರಳ ರಾಜ್ಯಗಳ ವಿವಿಧ ಗೋಶಾಲೆಗಳು ಹಾಗೂ ಗೋ ಆಧಾರಿತ ಚಿಕಿತ್ಸೆ ನೀಡುವ ಕೇಂದ್ರಗಳು ಈ ‘ಗೋ ಸರ್ಕ್ಯೂಟ್’ನ ಭಾಗವಾಗಿರಲಿವೆ. ಈ ಯೋಜನೆಯಡಿಯಲ್ಲಿ ಒಂದು ಕೇಂದ್ರಕ್ಕೆ ಸುಮಾರು 2 ಕೋಟಿ ರೂ.ಗಳ ವೆಚ್ಚದಲ್ಲಿ ದೇಶಾದ್ಯಂತ ಸುಮಾರು 400 ಕೇಂದ್ರಗಳನ್ನು ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವ ಯೋಜನೆ ಆಯೋಗದ್ದು. ಸ್ಪಾ, ಆಯುರ್ವೇದ ಚಿಕಿತ್ಸೆ, ಗೋಮಯ-ಗೋಮೂತ್ರ ಮೊದಲಾದ ವಸ್ತುಗಳಿಂದ ತಯಾರಿಸಿದ ಸೋಪ್, ಶಾಂಪೂ, ದೇಸೀ ಗೋವಿನ ತುಪ್ಪ, ಔಷಧೀಯ ಉತ್ಪನ್ನಗಳು ಈ ಕೇಂದ್ರಗಳಲ್ಲಿ ಲಭ್ಯವಿರಲಿವೆ. ಈಗಾಗಲೇ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿಸಿದ್ದು, ಸೋಮನಾಥ ದೇವಸ್ಥಾನ, ಸಾಬರಮತಿ ಆಶ್ರಮ, ದೆಹಲಿಯ ತಿಹಾರ್ ಜೈಲ್, ಪುಣೆಯ ಯರವಾಡಾ ಜೈಲ್, ಗೋವಾದ ಸಮುದ್ರ ತೀರದ ಪ್ರವಾಸೀ ತಾಣಗಳು, ಕೇರಳದ ಆಯುರ್ವೇದ ಚಿಕಿತ್ಸಾ ಕೇಂದ್ರಗಳಲ್ಲಿ ಈ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ರಾಷ್ಟ್ರೀಯ ಕಾಮಧೇನು ಆಯೋಗ ಹೊಂದಿದೆ.

ರಾಷ್ಟ್ರೀಯ ಕಾಮಧೇನು ಆಯೋಗ -

ಏನು, ಎತ್ತ?

ಗುಜರಾತಿನ ಗೋಸೇವಾ ಮತ್ತು ಗೋಚಾರ್ ವಿಕಾಸ ಮಂಡಳಿಯ ಅಧ್ಯಕ್ಷರಾಗಿ ಹತ್ತು ವರ್ಷಗಳ ಅನುಭವ ಹೊಂದಿರುವ ಡಾ. ವಲ್ಲಭ್ ಕಥೀರಿಯಾ ಅವರ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ರಾಷ್ಟ್ರೀಯ ಕಾಮಧೇನು ಆಯೋಗದಲ್ಲಿ ಮಹಾರಾಷ್ಟ್ರದ ದೇವಲಾಪುರದಲ್ಲಿರುವ ಗೋವಿಜ್ಞಾನ ಅನುಸಂಧಾನ ಕೇಂದ್ರದ ಸುನಿಲ್ ಮಾನ್‌ಸಿಂಗ್‌ಕಾ, ತುಳುನಾಡಿನ ಪಶುಸಂಗೋಪನೆ ಮತ್ತು ಹೈನುಗಾರಿಕಾ ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಬಾಲಚಂದ್ರನ್, ಮಹಾರಾಷ್ಟ್ರದ ಬೈಫ್ ಸಂಸ್ಥೆ, ಹರಿಯಾಣದ ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಮಥುರಾದ ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪಶುಸಂಗೋಪನಾ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕೆ ಎಂ ಎಲ್ ಪಾಠಕ್, ಇಂದೋರಿನ ಲೋಕಸಭಾ ಸದಸ್ಯ ಹುಕುಂಚಂದ್ ಸಾವ್ಲಾ ಮತ್ತು ಸರ್ಕಾರಿ ಇಲಾಖೆಗಳ ಕೆಲವು

ಅಧಿಕಾರಿಗಳು ಸದಸ್ಯರಾಗಿದ್ದಾರೆ.

ನಮ್ಮ ಸಂವಿಧಾನದ ನಿರ್ದೇಶಕ ತತ್ತ್ವಗಳಲ್ಲಿ ಗೋಸಂಪತ್ತನ್ನು ರಕ್ಷಣೆಮಾಡಬೇಕೆನ್ನುವ ನಿರ್ದೇಶನ ಇದ್ದಾಗ್ಯೂ, ಇದುವರೆಗೆ ಯಾವ ಸರ್ಕಾರಗಳೂ ಅದನ್ನು ಜಾರಿಗೊಳಿಸುವತ್ತ ಗಂಭೀರ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಈ ದಿಕ್ಕಿನಲ್ಲಿ ಹೆಜ್ಜೆ ಇಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆ. ದೇಸೀ ಗೋಸಂಪತ್ತಿನ ಸಂರಕ್ಷಣೆ ಮತ್ತು ಸಂವರ್ಧನೆಮಾಡುವ ಉದ್ದೇಶಗಳನ್ನು ಹೊಂದಿರುವ ರಾಷ್ಟ್ರೀಯ ಕಾಮಧೇನು ಆಯೋಗದ ಪ್ರಮುಖ ಉದ್ದೇಶಗಳಲ್ಲಿ ಕೆಲವು ಇಲ್ಲಿವೆ.

ಪ್ರಧಾನಿ ಮೋದಿಯವರೊಂದಿಗೆ ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ಡಾ. ವಲ್ಲಭ ಕಥೀರಿಯಾ

- ಗೋಸಂಪತ್ತನ್ನು ರಕ್ಷಿಸುವುದು, ರಾಜ್ಯಗಳಲ್ಲಿ ಜಾರಿಯಲ್ಲಿರುವ ಗೋಹತ್ಯೆ ನಿಷೇಧ ಕಾನೂನು ಸರಿಯಾಗಿ ಜಾರಿಯಾಗುವಂತೆ ನೋಡಿಕೊಳ್ಳುವುದು ಹಾಗೂ ಗೋಸಂವರ್ಧನೆಗೆ ಸಂಬಂಧಿಸಿದ ಯೋಜನೆಗಳಿಗೆ ಮಾರ್ಗದರ್ಶನ ಮಾಡುವುದು.

- ಕೆಳಗಿನ ವಿಷಯಗಳಿಗೆ ಸಂಬಂಧಿಸಿದಂತೆ ನೀತಿ ನಿರೂಪಣೆ ಮತ್ತು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವುದು:

- ದೇಸೀ ಗೋತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿ

- ಗೋಸಾಕಣೆಯ ತಂತ್ರಜ್ಞಾನ ಮತ್ತು ನಿರ್ವಹಣಾ ವ್ಯವಸ್ಥೆಗಳ ಅಭಿವೃದ್ಧಿ

- ಗೋಸಾಕಣೆ ಮಾಡುವ ರೈತರ ಆದಾಯ ವೃದ್ಧಿ

- ಹೈನುಗಾರಿಕಾ ಸಹಕಾರ ಸಂಘಗಳು, ಹೈನು ಉತ್ಪಾದನೆಗಳನ್ನು ತಯಾರಿಸುವ ಕಂಪೆನಿಗಳು, ಕೃಷಿ ಉತ್ಪನ್ನಗಳನ್ನು ತಯಾರಿಸುವ ಕಂಪೆನಿಗಳು ಮತ್ತು ಗೋಸಂತತಿ ಅಭಿವೃದ್ಧಿಪಡಿಸುವ ಸಂಸ್ಥೆಗಳ ಹಿತಾಸಕ್ತಿಯ ರಕ್ಷಣೆ

- ಗೋಶಾಲೆ, ಪಿಂಜರಾಪೋಲ್ ಮತ್ತಿತರ ಗೋಸಂತತಿ ಅಭಿವೃದ್ಧಿಗಾಗಿ ಕೆಲಸಮಾಡುವ ಸಂಸ್ಥೆಗಳಿಗೆ ಸಹಕಾರಿಯಾಗಿ ಇರುವ ಕಾನೂನುಗಳ ಪರಿಣಾಮಕಾರಿ ಅನುಷ್ಠಾನ

- ಗೋಸಂತತಿ ಸಂರಕ್ಷಣೆ ಮತ್ತು ಸಂವರ್ಧನೆಗೆ ಅಗತ್ಯವಾದ ನೀತಿ ನಿರೂಪಣೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಮಾರ್ಗದರ್ಶನ

- ಗೋಸಂತತಿಯ ಸುಸ್ಥಿರ ಅಭಿವೃದ್ಧಿ ಹಾಗೂ ದೇಶದಲ್ಲಿರುವ ಗೋಸಂಪತ್ತನ್ನು ಆರ್ಥಿಕ ದೃಷ್ಟಿಯಿಂದ ಪರಿಣಾಮಕಾರಿಯಾಗಿ ಉಪಯೋಗಿಸಲು ಯೋಜನೆಗಳನ್ನು ರೂಪಿಸಲು ಕೇಂದ್ರ ಸರ್ಕಾರಕ್ಕೆ ಸಹಾಯ

- ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗೋಸಂರಕ್ಷಣೆ ಮತ್ತು ಸಂವರ್ಧನೆಗೆ ಸಂಬಂಧಿಸಿದಂತೆ ಈಗಾಗಲೇ ಜಾರಿಗೊಳಿಸಿರುವ ಕಾನೂನುಗಳನ್ನು ಪರಿಶೀಲಿಸಿ, ಅವುಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸರ್ಕಾರಗಳಿಗೆ ಸಲಹೆಕೊಡುವುದು

- ಕೃಷಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆಮಾಡಿ, ಗೋಮೂತ್ರ ಮತ್ತು ಗೋಮಯ ಆಧಾರಿತ ಸಾವಯವ ಗೊಬ್ಬರದ ಬಳಕೆ ಹೆಚ್ಚುವಂತೆ ಮಾಡಲು ಕೃಷಿಕರಿಗೆ ಪ್ರೋತ್ಸಾಹಧನ ಮೊದಲಾದ ಯೋಜನೆಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದು

- ದೇಸೀ ಗೋತಳಿ ಸಂವರ್ಧನೆಗಾಗಿ ಕೆಲಸಮಾಡುತ್ತಿರುವ ಸಂಸ್ಥೆಗಳ ನಡುವೆ ಸಮನ್ವಯದ ಕೆಲಸಮಾಡುವುದು

ಬರಡು ಹಸುಗಳನ್ನು ನಿರ್ವಹಣೆಮಾಡುವ ಬಗ್ಗೆ ಗೋಶಾಲೆ, ಗೋಸದನ, ಪಿಂಜರಾಪೋಲ್‌ಗಳಿಗೆ ತಾಂತ್ರಿಕ ಸಲಹೆ ನೀಡುವುದು

- ಅತಿವೃಷ್ಟಿ, ಅನಾವೃಷ್ಟಿ ಮೊದಲಾದ ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಗೋಶಾಲೆಗಳ ಸ್ಥಾಪನೆಗೆ ಹಾಗೂ ಅಂತಹ ಸಂದರ್ಭಗಳಲ್ಲಿ ಗೋಕಳ್ಳಸಾಗಣೆ ಮತ್ತು ವಲಸೆಯನ್ನು ತಡೆಯಲು ಬೇಕಾದ ಕ್ರಮಗಳ ಬಗ್ಗೆ ಸರ್ಕಾರಗಳಿಗೆ ಮಾರ್ಗದರ್ಶನ ಮಾಡುವುದು

- ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗೋಮಾಳಗಳನ್ನು ಅಭಿವೃದ್ಧಿಪಡಿಸುವುದು

- ದೇಸೀ ಗೋತಳಿಯ ಮಹತ್ವದ ಬಗ್ಗೆ ಹಾಗೂ ದೇಸೀ ಗೋ ಉತ್ಪನ್ನಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು

- ದೇಸೀ ಗೋತಳಿ ಅಭಿವೃದ್ಧಿ, ಸಾವಯವ ಗೊಬ್ಬರ, ಬಯೋಗ್ಯಾಸ್ ಮೊದಲಾದ ವಿಷಯಗಳಲ್ಲಿ ಸಂಶೋಧನೆ ನಡೆಸಲು ಕೇಂದ್ರ ಅಥವಾ ರಾಜ್ಯ ಸರ್ಕಾರದ ಪಶುಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳ ಜೊತೆ ಕೆಲಸಮಾಡುವುದು

- ಗೋ ಆಧಾರಿತ ಚಿಕಿತ್ಸಾ ಪದ್ಧತಿಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳ ಜೊತೆ ಕೆಲಸ ಮಾಡುವುದು

- ಗೋಸಾಕಣೆಗೆ ಸಂಬಂಧಿಸಿದ ತಂತ್ರಜ್ಞಾನಗಳು ರೈತರಿಗೆ ಮತ್ತು ಉದ್ಯಮಿಗಳಿಗೆ ತಲುಪುವಂತೆ ಮಾಡುವುದು

- ಹೈನುಗಾರಿಕೆ ಮತ್ತು ಗೋ ಉತ್ಪನ್ನಗಳನ್ನು ತಯಾರಿಸಲು ಬಂಡವಾಳ ಆಕರ್ಷಿಸಲು ಅಗತ್ಯವಾದ ವಾತಾವರಣ ಕಲ್ಪಿಸುವುದು

- ಗೋಸಾಕಣೆಗೆ ಬೇಕಾದ ಕೌಶಲ್ಯವುಳ್ಳ ವ್ಯಕ್ತಿಗಳ ಅಗತ್ಯ ಮತ್ತು ಲಭ್ಯತೆಗಳ ಅಧ್ಯಯನ ನಡೆಸಿ, ಬೇಕಾದಷ್ಟು ಸಂಖ್ಯೆಯಲ್ಲಿ ಅಂತಹ ಕುಶಲ ವ್ಯಕ್ತಿಗಳು ಸಿಗುವಂತಾಗಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರಗಳಿಗೆ ಸಲಹೆ ಕೊಡುವುದು

- ಗೋಸಂರಕ್ಷಣೆ ಮತ್ತು ಸಂವರ್ಧನೆಗೆ ಅಗತ್ಯವಾದ ಇತರ ಯಾವುದೇ ಕಾರ್ಯಗಳನ್ನು ಆಯೋಗ ಕೈಗೆತ್ತಿಕೊಳ್ಳಬಹುದು

ಈ ಎಲ್ಲಾ ಕೆಲಸಗಳನ್ನು ಆಯೋಗವು ಮುಂಬರುವ ದಿನಗಳಲ್ಲಿ ಕೈಗೊಳ್ಳಲು ಸಾಧ್ಯವಾದರೆ, ದೇಸೀ ಗೋಸಂಪತ್ತು ಸಂರಕ್ಷಣೆ ಮತ್ತು ಸಂವರ್ಧನೆಯ ಕ್ಷೇತ್ರದಲ್ಲಿ ನಿಜಕ್ಕೂ ಇದೊಂದು ದೊಡ್ಡ ಶಕ್ತಿಯಾಗಲಿದೆ.


This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management