Log in
  • ಮುಖಪುಟ
  • ನೀತಿ-ನಿಯಮಾವಳಿ ಗಾಳಿಗೆ, ಐಐಎಸ್ ಸಿ ಘಟತೆ ಬೀದಿಗೆ ! ಖೊಟ್ಟಿ ಚರಿತ್ರಕಾರನಿಗೆ ಪಂಡಿತನ ಪಟ್ಟ !

ನೀತಿ-ನಿಯಮಾವಳಿ ಗಾಳಿಗೆ, ಐಐಎಸ್ ಸಿ ಘಟತೆ ಬೀದಿಗೆ !

ಖೊಟ್ಟಿ ಚರಿತ್ರಕಾರನಿಗೆ ಪಂಡಿತನ ಪಟ್ಟ !

ರೋಹಿತ್ ಚಕ್ರತೀರ್ಥ, ಅಂಕಣಕಾರ 

ಭಾರತದಲ್ಲಿ ಕಾಂಗ್ರೆಸ್ ಆಡಳಿತವಿದ್ದಾಗ, ಮಾಧ್ಯಮದಲ್ಲಿ ಮತ್ತೆ ಮತ್ತೆ ಕಾಣಿಸಿಕೊಂಡು ಜನಪ್ರಿಯವಾದ ಪದಗಳಲ್ಲಿ ಒಂದು: "ಬುದ್ಧಿಜೀವಿ" ಎಂಬುದು. ಬುದ್ದಿಜೀವಿ ಎಂದರೆ ಯಾರು? ಈತನಿಗೆ ಕೆದರಿದ ಕೂದಲು, ದಪ್ಪಕಟ್ಟಿನ ಕನ್ನಡಕ, ಖಾದಿ ಜುಬ್ಬಾ, ಏನನ್ನೋ ಆಳವಾಗಿ ಯೋಚಿಸುತ್ತಿರುವಂಥ ಕಣ್ಣುಗಳು, ಕೈಯಲ್ಲಿ ಸಿಗರೇಟು, ಮೇಲೆತ್ತಿದ ಹುಬ್ಬುಗಳು. ಯೋಚನೆಯ ಬಾವಿಯಿಂದ ಶಬ್ದಗಳನ್ನು ಕೊಡದಲ್ಲಿ ಎತ್ತಿ ತರುತ್ತಿದ್ದಾನೋ ಎಂಬಂತೆ ಮಾತುಗಳನ್ನು ಆಡುವವನು ಈತ. ದೇಶದ ದೊಡ್ಡ ದೊಡ್ಡ ಸಂಕಿರಣಗಳಲ್ಲಿ, ಸಮಾವೇಶಗಳಲ್ಲಿ ಆಯೋಜನೆಯಾಗುತ್ತಿದ್ದವು ಇವನ ಭಾಷಣ, ಉಪನ್ಯಾಸಗಳು. ಈತನ ಹೆಸರು ಪತ್ರಿಕೆಯಲ್ಲಿ ಮುದ್ರಣವಾದಾಗೆಲ್ಲ ಹೆಸರ ಹಿಂದೆ ಮೂರ್ನಾಲ್ಕು ವಿಶೇಷಣಗಳು ಇರಲೇಬೇಕು ಎಂಬುದು ನಿಯಮ. ಶಾಲೆಕಾಲೇಜುಗಳ ಮಕ್ಕಳು ಓದುವ ಪಠ್ಯಗಳಲ್ಲಿ ಈತ ಬರೆದ ಕತೆ, ಕವಿತೆ, ಪ್ರಬಂಧಗಳು ಕಡ್ಡಾಯ. ಸರಕಾರ ಕೊಟ್ಟ ಹತ್ತುಹದಿನೆಂಟು ಪ್ರಶಸ್ತಿಗಳಲ್ಲಿ ಬಹುಪಾಲು ಸಂದದ್ದು ಇವನಿಗೇ. ಈತ ದೇಶದ ಸಾಕ್ಷಿಪ್ರಜ್ಞೆ. ದೇಶದ ಉಳಿದ ಜನರಿಗಿಂತ ಹತ್ತಿಪ್ಪತ್ತು ವರ್ಷಗಳಷ್ಟು ಮುಂದಕ್ಕೆ ಯೋಚಿಸುವಾತನೆಂದರೆ ಈತನೇ. ಉಳಿದವರಿಗೆ ತಲೆಬುರುಡೆಯ ಒಳಗಷ್ಟೇ ಮಿದುಳಿದ್ದರೆ ಈತನಿಗೆ ಮೈಯೆಲ್ಲ ಮಿದುಳು!

ಇಂಥವರನ್ನು ಹತ್ತಿಪ್ಪತ್ತಲ್ಲ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಬೆಳೆಸಿತು. ತಾನು ಅಧಿಕಾರದಲ್ಲಿದ್ದಾಗೆಲ್ಲ ಈ ಬುದ್ಧಿಜೀವಿಗಳನ್ನು ಸರಕಾರೀ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ತುಂಬಿಸಿತು; ಯೂನಿವರ್ಸಿಟಿಗಳಲ್ಲಿ ಭರ್ತಿಮಾಡಿತು. ಈ ಬುದ್ಧಿಜೀವಿಗಳಿಗೆ ಕಾಲಕಾಲಕ್ಕೆ ಪ್ರಶಸ್ತಿ-ಪುರಸ್ಕಾರಗಳು ಸಂದವು. ದೇಶವಿದೇಶಗಳಲ್ಲಿ ಆಯೋಜನೆಯಾಗುತ್ತಿದ್ದ ಸಮ್ಮೇಳನಗಳಲ್ಲಿ ಈ ವ್ಯಕ್ತಿಗಳು ವೇದಿಕೆ ಅಲಂಕರಿಸಿದರು. ತಮ್ಮ ವಿಚಾರ-ಚಿಂತನೆಗಳನ್ನು ನೂರಾರು ಮಂದಿಗೆ ನೇರವಾಗಿ, ಸಾವಿರಾರು ಮಂದಿಗೆ ಪರೋಕ್ಷವಾಗಿ ಬಲವಂತವಾಗಿ ಉಣಬಡಿಸಿದರು. ಮೂಲತಃ ಭಟ್ಟಂಗಿಗಳೂ ಬಹುಪರಾಕ್ ಕೂಗುವ ಹೊಗಳುಭಟ್ಟರೂ ಆಗಿದ್ದ ಈ ಅಕಶೇರುಕಗಳನ್ನು ಸರಕಾರ ಮಾತ್ರ ದೊಡ್ಡದಾಗಿ ಬುದ್ಧಿಜೀವಿಗಳು ಎಂದು ಪ್ರಚಾರ ಮಾಡಿತು. ಬುದ್ಧಿಜೀವಿಗಳನ್ನು ಜಗತ್ತಿನ ಮಹಾನ್ ತಾರೆಗಳೆಂದು ಪ್ರಚಾರ ಮಾಡುವುದು ಸರಕಾರಕ್ಕೆ ಅನಿವಾರ್ಯವಿತ್ತು.

ಯಾಕೆಂದರೆ ಸರಕಾರದ ಎಲ್ಲ ಅಪಸವ್ಯ, ದುರಂತ, ವೈಫಲ್ಯಗಳಿಗೂ ಬಣ್ಣದ ಮಾತುಗಳ ಬೇಗಡೆ ಮೆತ್ತಿ ಜನರಿಗೆ ಮಂಕುಬೂದಿ ಎರಚುವ ಕಲೆಯಲ್ಲಿ ನಿಷ್ಣಾತರಾಗಿದ್ದವರೇ ಈ ಬುದ್ಧಿಜೀವಿಗಳಲ್ಲವೇ? ಇನ್ನು ಬುದ್ಧಿಜೀವಿಗಳಿಗೆ, ಮೈಮುರಿದು ದುಡಿಯುವ ಯಾವ ನೌಕರಿಯ ಪರಿಚಯವೂ ಇಲ್ಲದ್ದರಿಂದ ಸರಕಾರದ ಕಡೆಯಿಂದ ಅಕ್ಕಿಬೇಳೆ ಗಿಟ್ಟಿಸುತ್ತ, ತಮ್ಮ ಆ ಮಹಾದಾನಿಯನ್ನು ಉದ್ದುದ್ದ ಶಬ್ದಾಲಂಕಾರದಿಂದ ಹೊಗಳುವುದು ಕೂಡ ಅನಿವಾರ್ಯವಾಗಿತ್ತು. ಒಟ್ಟಲ್ಲಿ ಅದು, ನೀ ನನಗಿದ್ದರೆ ನಾ ನಿನಗೆ ಎಂಬಂಥ ಸೊಗಸಾದ ವ್ಯವಸ್ಥೆ. ಇಂಥ ವ್ಯವಸ್ಥೆಯ ಒಳಹೊಕ್ಕು ಅಸಲಿಯತ್ತು ಗಮನಿಸುವ ಸೌಕರ್ಯ, ಆಸಕ್ತಿ ಮತ್ತು ಸಮಯ ಜನಸಾಮಾನ್ಯರಿಗೆ ಆ ಕಾಲದಲ್ಲಿ ಇರಲಿಲ್ಲವಾದ್ದರಿಂದ ಸರಕಾರ ಮತ್ತು ಬುದ್ಧಿಜೀವಿ ವರ್ಗ - ಇಬ್ಬರ ಪರಸ್ಪರ ಸಹಕಾರ ಸಂಘಕ್ಕೆ ಯಾವ ಆತಂಕವೂ ಎದುರಾಗಿರಲಿಲ್ಲ.

ಬುದ್ಧಿಜೀವಿಗಳ ಪೈಕಿ ಕೆಲವರು ನೇರವಾದ ಭಟ್ಟಂಗಿಗಳಾಗಿದ್ದರು. ಸರಕಾರ ಎಡವಿದರೂ ಬಿದ್ದು ಮಣ್ಣಿಗೆ ಮೂಗುಜ್ಜಿದರೂ ಅದನ್ನು ಶತಾಯಗತಾಯ ಸಮರ್ಥಿಸಿಕೊಳ್ಳುವುದೇ ತಮ್ಮ ಕೆಲಸ ಎಂದು ಭಾವಿಸಿದ್ದವರು ಅವರು. ಪಕ್ಷಕ್ಕೆ ವಕ್ತಾರರಾಗಿ ಕೆಲಸ ಮಾಡುವವರು ಕೂಡ ನಾಚುವಂತೆ ಈ ಭಟ್ಟಂಗಿಗಳು ಪಕ್ಷದ ಸಮರ್ಥನೆಗೆ ನಿಲ್ಲುತ್ತಿದ್ದರು. ಇನ್ನು ಎರಡನೆ ವರ್ಗ, ತಾವು ತಟಸ್ಥರೆಂದು ಹೇಳಿಕೊಳ್ಳುವವರ ಗುಂಪು. ತಾವು ನಿಷ್ಪಕ್ಷಪಾತಿಗಳು; ಯಾರನ್ನೂ ವಹಿಸಿಕೊಂಡು ಮಾತಾಡುವುದಿಲ್ಲ ಎಂದು ಹೇಳುತ್ತಲೇ ಒಂದಿಲ್ಲೊಂದು ಬಗೆಯಲ್ಲಿ ಪಕ್ಷದ ಓಲೈಕೆ ಮಾಡುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದವರ ಗುಂಪು ಇದು. ಇಂಥವರ ಅನಿವಾರ್ಯತೆ ಪಕ್ಷಗಳಿಗೂ ಇರುತ್ತದೆ ಅನ್ನಿ. ಯಾವುದಾದರೂ ಒಂದು ಬಣಕ್ಕೆ ತಮ್ಮನ್ನು ಕಾಯಾ ವಾಚಾ ಮನಸಾ ಸಮರ್ಪಿಸಿಕೊಂಡಂತೆ ಆಡುವ ಭಟ್ಟಂಗಿಗಳನ್ನು ಜನ ಹೆಚ್ಚು ದರಕರಿಸುವುದಿಲ್ಲ; ಆದರೆ ತಾವು ನಿಷ್ಪಕ್ಷಪಾತಿಗಳೆಂದು ಬಿಂಬಿಸಿಕೊಳ್ಳುವವರನ್ನು ಜನರೂ ಸ್ವಲ್ಪ ಗಂಭೀರವಾಗಿ ಪರಿಗಣಿಸುತ್ತಾರೆ; ಅವರ ಮಾತಲ್ಲಿ ಸತ್ಯ ಇರಬಹುದೆಂಬ ಮಾಯೆಗೆ ಒಳಗಾಗುತ್ತಾರೆ! ಹಾಗಾಗಿ ತಟಸ್ಥರನ್ನು ಕೂಡ ಪರದೆಯ ಹಿಂದೆ ನಿಂತು ಬೆಂಬಲಿಸುವ; ಫಂಡ್ ಮಾಡುವ ಕೆಲಸವನ್ನು ರಾಜಕೀಯ ಪಕ್ಷಗಳು ಮಾಡುತ್ತವೆ. ಇನ್ನು ಮೂರನೆಯದೊಂದು ಬಣ ಇದೆ. ಅದು ಮೇಲ್ನೋಟಕ್ಕೆ ಒಂದು ರಾಜಕೀಯ ಪಕ್ಷವನ್ನು ವಾಚಾಮಗೋಚರ ಬಯ್ಯುತ್ತಿರುತ್ತದೆ. ಆದರೆ ಪರದೆಯ ಹಿಂದೆ ಅದೇ ಪಕ್ಷದೊಡನೆ ಹಾಸಿಗೆ ಹಂಚಿಕೊಳ್ಳುತ್ತಿರುತ್ತದೆ. ಟಿವಿ ಚರ್ಚಾಕೂಟಗಳಲ್ಲಿ ಪರದೆ ಮುಂದೆ ಪರಸ್ಪರ ಕೂದಲು ಕಿತ್ತುಕೊಳ್ಳುವಂತೆ ಜಗಳಾಡಿ, ಕ್ಯಾಮೆರಾ ಆಫ್ ಆದ ಮೇಲೆ ಪರಸ್ಪರರ ಹೆಗಲ ಮೇಲೆ ಕೈಹಾಕಿಕೊಂಡು ತೆರಳುವ ಗೋಸುಂಬೆಗಳಂತೆ ಇವರು. ಇಂಥವರನ್ನು ಕೂಡ ಪಕ್ಷಗಳು ಚೆನ್ನಾಗೇ ನೋಡಿಕೊಳ್ಳುತ್ತವೆ. ಯಾಕೆಂದರೆ ಇವರಿಲ್ಲದೆ ಪಕ್ಷಗಳಿಗೆ ಬೇಕಾದ ಮತ ಧ್ರುವೀಕರಣ ಆಗುವುದಿಲ್ಲವಲ್ಲ!

ಕನ್ನಡ ಕಲಿಯೋಲ್ಲ ಎಂದವನಿಗೆ ಕರ್ನಾಟಕದ ರಾಜ್ಯೋತ್ಸವ ಪ್ರಶಸ್ತಿ!

ಈ ರಾಮಚಂದ್ರ ಗುಹಾ ಅಸಲಿಗೆ ಓದಿದ್ದು ಅರ್ಥಶಾಸ್ತ್ರ. ಆದರೆ ಹೆಸರು ಮಾಡಿದ್ದು ಇತಿಹಾಸಕಾರನೆಂಬ ಹಣೆಪಟ್ಟಿ ಹೊತ್ತು. ಈತನ ಇತಿಹಾಸದ ನೂರಾರು ಪುಟಗಳನ್ನಲ್ಲ; ಕೇವಲ ಒಂದೆರಡು ಪುಟಗಳನ್ನು ತಿರುವಿಹಾಕಿದರೂ ಗೊತ್ತಾಗುವ ಸತ್ಯವೆಂದರೆ, ಆ ಬರಹವೆಲ್ಲ ಸುಳ್ಳುಪೊಳ್ಳುಗಳ ಬೊಂತೆ ಎಂಬುದು! ಹಿಂದೆ ನಡೆದ ಘಟನೆಗಳೆಲ್ಲವನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ತಿರುಚಿ, ಹೊಸ ಅರ್ಥ ಹೊಳೆಯಿಸಿ, ತನ್ನ ಆರಾಧ್ಯದೈವ ನೆಹರೂವನ್ನು ಉತ್ಸವಮೂರ್ತಿಯಾಗಿ ಊರೆಲ್ಲ ತಿರುಗಾಡಿಸಿ, ಸತ್ಯದ ಹಣೆಗೆ ಮೊಳೆ ಹೊಡೆದದ್ದೇ ಈತ ಇದುವರೆಗೆ ಮಾಡಿರುವ ಘನಂದಾರೀ ಕೆಲಸ. ಅದನ್ನು ಸಂಶೋಧನೆ ಎಂಬ ಲೇಬಲ್ ಅಂಟಿಸಿ ಮಾಡಿದ್ದಾನೆ ಅಷ್ಟೆ.

ರಾಮಚಂದ್ರ ಗುಹಾನನ್ನು ಎಡಪಂಥೀಯ ವಲಯದಲ್ಲಿ ಪರಿಚಯಿಸುವುದು ನಮ್ಮ ಕಾಲದ ಅತ್ಯಂತ ಪ್ರಮುಖ

ಲೇಖಕ, ಇತಿಹಾಸಕಾರ, ನೆಹರೂಯುಗದ ಕಾಲಘಟ್ಟವನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುವ ಚರಿತ್ರಕಾರ, ಮಹಾನ್ ವಿದ್ವಾಂಸ, ಚಿಂತಕ, ಸಾಕ್ಷಿಪ್ರಜ್ಞೆ ಎಂಬೆಲ್ಲ ಬಿರುದುಬಾವಲಿಗಳಿಂದ. ಅಂದರೆ ಯಾವುದೇ ಹೆಸರಿಗೆ ಹೆಚ್ಚು ಹೆಚ್ಚು ವಿಶೇಷಣಗಳನ್ನು ಅಂಟಿಸಿದರೆ ಅವರ ಘನತೆಯನ್ನು ಇತಿಹಾಸದಲ್ಲಿ ಹೆಚ್ಚು ಹೆಚ್ಚು ಗಟ್ಟಿಯಾಗಿ ಪ್ರತಿಷ್ಠಾಪಿಸಬಹುದು ಎಂಬುದು ಎಡಪಂಥದ ನಂಬಿಕೆ ಮತ್ತು ಅನುಸರಿಸಿಕೊಂಡು ಬಂದ ಪದ್ಧತಿ. ಈ ವಿಶೇಷಣಗಳ ರೈಲುಪಟ್ಟಿಗಳನ್ನು ಹೆಸರುಗಳ ಹಿಂದೆ ಅಂಟಿಸುವ ಚಟ ಎಡಪಂಥದ ಎಲ್ಲ ಎಡಬಿಡಂಗಿಗಳೂ ವ್ಯಾಪಿಸಿದೆ. ಸ್ವತಃ ರಾಮಚಂದ್ರ ಗುಹಾ ಪ್ರಶಸ್ತಿ ವಾಪಸ್ ಬ್ರಿಗೇಡ್‌ನ ನಯನತಾರಾ ಸೆಹಗಲ್ ಅನ್ನು ಕುರಿತು ಹೇಳುವಾಗ, "ಉತ್ತರ ಪ್ರದೇಶದ ಅತ್ಯಂತ ಗೌರವಾನ್ವಿತ ಲೇಖಕಿಯರಲ್ಲಿ ಒಬ್ಬರಾದ... ಹಿರಿಯ ಮತ್ತು ಹೆಚ್ಚು ಸ್ವತಂತ್ರ ಮನೋಭಾವದ ಲೇಖಕಿಯಾದ..." ಎಂದೆಲ್ಲ ಹೇಳಿದ್ದುಂಟು! ಇದನ್ನು ಒಂದು ರೀತಿ, ಪರಸ್ಪರ ಬೆನ್ನು ಕೆರೆದುಕೊಳ್ಳುವವರ ಒಕ್ಕೂಟ ಎಂದು ಕರೆಯಬಹುದೇನೋ!

ಅಂದ ಹಾಗೆ, ನಾನು, ನನ್ನಪ್ಪ, ನನ್ನ ಪೂರ್ವಜರು ಎಲ್ಲರೂ ಬೆಂಗಳೂರಲ್ಲಿ ಹಲವು ವರ್ಷಗಳಿಂದ ಬಾಳಿದ್ದೇವೆ; ಆದರೂ ನಾನು ಕನ್ನಡ ಮಾತಾಡದೆ, ಕನ್ನಡ ಕಲಿಯದೆ ಈ ರಾಜ್ಯದಲ್ಲಿ ಆರಾಮಾಗಿ ಬದುಕಿದ್ದೇನೆ ಎಂದು ಹೇಳುವ ಈ ಭೂಪನಿಗೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಕೊಟ್ಟಿತ್ತು!

ಇತಿಹಾಸ ಗೊತ್ತಿಲ್ಲದವನು ಉದ್ಗ್ರಂಥ ಬರೆದಿದ್ದಾನೆ!

ಗುಹಾ ನಿಜವಾಗಿಯೂ ಇತಿಹಾಸ ತಿಳಿದುಕೊಂಡಿದ್ದಾನೆಯೇ ಅಥವಾ ಹಾಗೆಂದು ಕೇವಲ ಸೋಗು ಹಾಕುವವನೇ ಎಂಬುದನ್ನು ನಿರ್ಧರಿಸಲು ಈ ಮುಂದಿನ ಒಂದು ನಿದರ್ಶನ ಸಾಕು. ಗಾಂಧಿಯ ಬಗ್ಗೆ ಇಲ್ಲಸಲ್ಲದ ಸುಳ್ಳುಪಳ್ಳುಗಳನ್ನೆಲ್ಲ ಸತ್ಯದ ತಲೆಗೆ ಹೊಡೆಯುವಷ್ಟು ಧಾರ್ಷ್ಟ್ಯದಿಂದ ಬರೆದಿರುವ ಈತನ ಕೆಲವು ಸಾಲುಗಳನ್ನು ನೋಡಿ:

Gandhi's views on modern medicine reveal a characteristic openness of mind; a willingness to change his views when the facts changed; to adapt, modify or even overthrow past preconceptions when confronted with new evidence. They also reveal a characateristic pluralism, at once moral and intellectual. Just as Gandhi's India had room for many religions, many languages, it also would encourage a pluralism of medical forms and methods.

 ಅಂದರೆ, ಆಧುನಿಕ ವೈದ್ಯಶಾಸ್ತ್ರ ಅಥವಾ ಔಷಧಗಳಿಗೆ ಮಹಾತ್ಮಾ ಗಾಂಧಿ ವಿರೋಧಿಯಾಗಿರಲಿಲ್ಲ. ಬದಲು ಅವನ್ನೆಲ್ಲ ಅತ್ಯಂತ ಮುಕ್ತ ಮನಸ್ಸಿನಿಂದ ಸ್ವೀಕರಿಸುವ ಔದಾರ್ಯ ಅವರಲ್ಲಿತ್ತು - ಎಂಬುದು ಗುಹಾನ ನಿರ್ಣಯ. ಇದೇ ಮಹಾತ್ಮಾ ಗಾಂಧಿ, ತನ್ನ ಹೆಂಡತಿ ಕಸ್ತೂರ ಬಾ ಅವರು ಡಯಾಬಿಟೀಸ್ ಉಲ್ಬಣಿಸಿ ಹಾಸಿಗೆ ಹಿಡಿದು ಯಾತನೆ ಅನುಭವಿಸುತ್ತಿದ್ದಾಗ ಆಕೆಗೆ ಇನ್ಸುಲಿನ್ ಇಂಜೆಕ್ಷನ್ ಕೊಡಲು ನಿರಾಕರಿಸುತ್ತಾರೆ ಎಂಬುದನ್ನು ಮಾತ್ರ ಗುಹಾ ಅದೆಷ್ಟು ಜಾಣ್ಮೆಯಿಂದ ಮರೆತೇಬಿಟ್ಟಿದ್ದಾನೆ! ಕಸ್ತೂರ ಬಾ ತನ್ನ ಜೀವನದ ಕೊನೆಯ ಕೆಲವು ತಿಂಗಳುಗಳನ್ನು ಅತ್ಯಂತ ಹಿಂಸೆಪಡುತ್ತ ಕಳೆದರು. ಹಾಸಿಗೆ ಹಿಡಿದಿದ್ದರು. ಡಯಾಬಿಟೀಸ್‌ನಿಂದಾಗಿ ಸಕ್ಕರೆಯಂಶ ಇನ್ನಿಲ್ಲದಷ್ಟು ವಿಪರೀತವಾಗಿ ಹಲವು ಸಮಸ್ಯೆಗಳನ್ನು ತಂದೊಡ್ಡಿತ್ತು. ಆದರೆ ಆಕೆ ಇದ್ದ ಕೋಣೆಯಲ್ಲಿ ಗಾಂಧಿ ಬಾಗಿಲು ಹಾಕಿಕೊಂಡು ದೇವರ ನಾಮಗಳನ್ನು ಗಟ್ಟಿಯಾಗಿ ಹೇಳುತ್ತಿದ್ದರು. ಇನ್ಸುಲಿನ್ ಔಷಧ ಕೊಡುವ ವಿಚಾರದಲ್ಲಿ ತಂದೆಗೂ ಮಗನಿಗೂ ಜಟಾಪಟಿಯಾಯಿತು. ಕೊನೆಗೂ ಗಾಂಧಿ ತನ್ನ ಹಠ ಸಾಧಿಸಿ ಆಕೆಗೆ ಇನ್ಸುಲಿನ್ ಚುಚ್ಚುಮದ್ದು ಕೊಡಲು ಒಪ್ಪಲೇ ಇಲ್ಲ. ಆಕೆ ಸತ್ತಾಗ ಗಾಂಧಿ, "ದೇವರು ಅದೆಷ್ಟು ಬಗೆಯಲ್ಲಿ ಪರೀಕ್ಷೆಗೊಡ್ಡಿದರೂ ಕೊನೆಗೂ ನಾನು ಆ ಎಲ್ಲ ಪರೀಕ್ಷೆಗಳನ್ನು ಗೆದ್ದೆ. ನನ್ನ ಪತ್ನಿ ನನ್ನ ಮಡಿಲಲ್ಲೇ ಮಲಗಿ ಪ್ರಾಣ ಬಿಡುವಂತಾಯಿತು. ಇದಕ್ಕಿಂತ ಸಂತೋಷದ ಸಂಗತಿ ಏನಿದೆ?" ಎಂದರು! ಈಗ ಈ ಘಟನೆಯ ಬೆಳಕಿನಲ್ಲಿ ಮೇಲೆ ಗುಹಾ ಬರೆದದ್ದನ್ನು ಮತ್ತೊಮ್ಮೆ ಓದಿ. ಯಾವ ನಿಟ್ಟಿನಲ್ಲಿ ಈತ ಇತಿಹಾಸಕಾರ ಎಂದು ಹೇಳುತ್ತೀರಿ?

ಅಂತರಿಕ್ಷಕ್ಕೆ ಕ್ರಿಕೆಟ್ ಚೆಂಡು!

ಒಂದು ಕಾಲದಲ್ಲಿ ದೇಶದಲ್ಲಿ ಭಟ್ಟಂಗಿಗಳನ್ನು, ಚಪ್ಪಲಿ ನೆಕ್ಕುವ ಅಕಶೇರುಕಗಳನ್ನು ಬುದ್ಧಿಜೀವಿಗಳೆಂಬ ಹಣೆಪಟ್ಟಿ ಅಂಟಿಸಿ ಬೆಳೆಸಿದ ಕಾಂಗ್ರೆಸ್‌ನ ಸಂಸ್ಕೃತಿಯೇ ಇಂದು ದೇಶವಾಳುತ್ತಿರುವ ಬಿಜೆಪಿಗೆ ಬಂದಿದೆಯೇ ಎಂಬ ಹೊಸ ಅನುಮಾನ ನನ್ನದು. ಕಾರಣ, ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ)ಯ "ಸತೀಶ್ ಧವನ್ ಅಧ್ಯಯನ ಪೀಠಕ್ಕೆ" ನೇಮಕವಾಗಿರುವುದು "ಇತಿಹಾಸಕಾರ" ಎಂಬ ಹಣೆಪಟ್ಟಿ ಹಚ್ಚಿಕೊಂಡಿರುವ ರಾಮಚಂದ್ರ ಗುಹಾ. ಭಾರತೀಯ ವಿಜ್ಞಾನ ಸಂಸ್ಥೆ, ದೇಶದ ಮಾತ್ರವಲ್ಲ ಜಾಗತಿಕ ಮಟ್ಟದ ವಿಜ್ಞಾನ ಸಂಸ್ಥೆಗಳಲ್ಲೇ ಮಹತ್ವದ ಸ್ಥಾನ ಪಡೆದಿದೆಯೆಂಬುದನ್ನು ಹೊಸದಾಗಿ ವಿವರಿಸುವ ಅಗತ್ಯವೇನೂ ಇಲ್ಲವಷ್ಟೆ? ಹಾಗೆಯೇ ಸತೀಶ್ ಧವನ್ ಎಂಬ ಹೆಸರಿನ ಪ್ರಾಮುಖ್ಯ ಎಷ್ಟು, ಅವರು ಎಂಥ ಮಹತ್ತರ ವಿಜ್ಞಾನಿಯಾಗಿದ್ದರು ಎಂಬುದನ್ನೂ ಈ ಲೇಖನದಲ್ಲಿ ವಿಸ್ತರಿಸುವ ಅಗತ್ಯ ಕಾಣುವುದಿಲ್ಲ. ಅಂಥ ಸಂಸ್ಥೆಯ ಅಂಥ ಹೆಸರಿನ ಚೇರ್‌ಗೆ ಆರಿಸಲ್ಪಡುವ ವ್ಯಕ್ತಿಗಳ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ವಿದ್ವತ್ ವಲಯದಲ್ಲಿ ಒಂದು ಸಣ್ಣ ಚರ್ಚೆ ನಡೆಯುತ್ತದೆ. ಆ ವ್ಯಕ್ತಿಯ ಬಗ್ಗೆ ಕುತೂಹಲ ಗರಿಗೆದರುತ್ತದೆ. ಅವರ ಸಾಧನೆಗಳನ್ನು ವಿದ್ವಾಂಸರ ವಲಯ ಒಮ್ಮೆ ಅವಲೋಕಿಸುತ್ತದೆ. ಆ ವ್ಯಕ್ತಿ ಈ ಪೀಠಕ್ಕೆ ಹೊಸ ಕಳೆ ತರಬಹುದೆಂದು ಪಂಡಿತರ ಗುಂಪು ಆಸಕ್ತಿಯಿಂದ ನಿರೀಕ್ಷಿಸುತ್ತದೆ. ಹಾಗಿರುವಾಗ, ಪೀಠಕ್ಕೆ ಕಳೆ ತರುವವರನ್ನು ಕೈಬಿಟ್ಟು ಕಳೆಯನ್ನೇ ತಂದು ಕೂರಿಸಿದರೆ ಹೇಗಾದೀತು? ಸತೀಶ್ ಧವನ್ ಹೆಸರಿನ ಪೀಠಕ್ಕೆ ಗುಹಾ ಎಂಬ ತಥಾಕಥಿತ ಬುದ್ಧಿಜೀವಿಯನ್ನು ತಂದು ಕೂರಿಸಿರುವುದು ಹೆಚ್ಚುಕಡಿಮೆ ಬೆಳೆಯ ನಡುವಲ್ಲಿ ಕಳೆಯನ್ನು ಕೂರಿಸಿದಂತೇ ಆಗಿದೆ ಎನ್ನಬಹುದು. ಅದೂ ಅಲ್ಲದೆ, ಗುಹಾ ಆ ಪೀಠಕ್ಕೆ ಆಯ್ಕೆಯಾಗಿರುವುದು ಐಐಎಸ್‌ಸಿಯ ಎಲ್ಲ ನೀತಿ-ನಿಯಮ-ಸಂವಿಧಾನಗಳನ್ನು ಗಾಳಿಗೆ ತೂರಿ. ಒಂದಲ್ಲ ಹಲವು ಸ್ತರಗಳಲ್ಲಿ ಐಐಎಸ್‌ಸಿ ತಾನೇ ರೂಪಿಸಿದ ನಿಯಮ ನಿಬಂಧನೆಗಳನ್ನು ಎತ್ತಿ ಪಕ್ಕಕ್ಕಿಟ್ಟು ಗುಹಾನನ್ನು ಕರೆತಂದಿದೆ. ಇದೆಲ್ಲ ನಡೆದಿರುವುದು ನರೇಂದ್ರ ಮೋದಿಯ ನೇತೃತ್ವದ, ಸ್ವಚ್ಛ ಭಾರತದ ಮಂತ್ರ ಜಪಿಸುತ್ತಿರುವ ಎನ್‌ಡಿಎ ಸರಕಾರ ಅಧಿಕಾರದಲ್ಲಿರುವಾಗ ಎಂಬುದು ವಿಚಿತ್ರ, ದುರಂತ ಮತ್ತು ವಿಪರ್ಯಾಸ.

ಐಐಎಸ್‌ಸಿಯಲ್ಲಿ 1996ರಲ್ಲಿ ಸತೀಶ್ ಧವನ್ ಪ್ರಾಧ್ಯಾಪನ ಪೀಠವನ್ನು ಪ್ರಾರಂಭಿಸಲಾಯಿತು. ವಿಜ್ಞಾನ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರನ್ನು ಈ ಪೀಠಕ್ಕೆ ಆರಿಸಬೇಕು ಎಂಬುದು ಐಐಎಸ್‌ಸಿಯೇ ಹಾಕಿಕೊಂಡಿರುವ ನಿಯಮ. ಅದಲ್ಲದೆ ಡಾ. ಧವನ್ ಅವರು ಅಂತರಿಕ್ಷ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ್ದುದರಿಂದ, ಅವರ ಹೆಸರಿನ ಪೀಠಕ್ಕೆ ಆರಿಸುವ ವ್ಯಕ್ತಿ ಕೇವಲ ವಿಜ್ಞಾನಿ/ತಂತ್ರಜ್ಞ ಆಗಿದ್ದರೆ ಸಾಲದು; ಒಂದೋ ಸ್ವತಃ ಅಂತರಿಕ್ಷ ವಿಜ್ಞಾನ/ತಂತ್ರಜ್ಞಾನದಲ್ಲಿ ಮಹತ್ಸಾಧನೆ ಮಾಡಿರಬೇಕು ಅಥವಾ ಆ ಕ್ಷೇತ್ರಕ್ಕೆ ತುಂಬ ಬೇಕಾಗುವ ಯಾವುದಾದರೊಂದು ಕ್ಷೇತ್ರದಲ್ಲಿ ಗಣನೀಯ ಕೆಲಸ ಮಾಡಿರಬೇಕು - ಎಂದೂ ಐಐಎಸ್‌ಸಿ ತನ್ನ ನಿಬಂಧನೆಗಳಲ್ಲಿ ಒಂದು ಸಾಲು ಸೇರಿಸಿಕೊಂಡಿದೆ. ಈ ಪೀಠಕ್ಕೆ ಇದುವರೆಗೆ ಆಯ್ಕೆಯಾದವರು ಎಂಟು ಮಂದಿ. ಆಯ್ಕೆಯಾಗಿ ಬಂದಿದ್ದ ಡಾ. ಕೆ.ಆರ್. ಶ್ರೀನಿವಾಸನ್, ಡಾ. ತ್ರಿವಿಕ್ರಮ್ ಕುಂಡು, ಡಾ. ಪಿ. ಗುರುಸ್ವಾಮಿ, ಡಾ. ಗ್ಯಾರಿ ಬ್ರೌನ್, ಡಾ. ರಾಮ ಯಡವಳ್ಳಿ ಇವರಿಷ್ಟೂ ಜನ ಏರೋಸ್ಪೇಸ್ ಸೈಂಟಿಸ್ಟ್‌ಗಳಾಗಿ ಕೆಲಸ ಮಾಡಿದವರು. ಇನ್ನುಳಿದಂತೆ ಡಾ. ಎಸ್.ಎಸ್. ಐಯ್ಯಂಗಾರ್ ರೊಬಾಟಿಕ್ಸ್ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೆ ಡಾ. ಜೆ.ಎನ್. ರೆಡ್ಡಿ ಕಂಪ್ಯೂಟೇಶನಲ್ ಮೆಕಾನಿಕ್ಸ್ ಕ್ಷೇತ್ರದಲ್ಲಿ ದುಡಿದವರು. ಡಾ. ಡಿ.ಎಸ್. ನಾಯ್ಡು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡಿದವರು. ಇವರಿಷ್ಟು ಜನರ ನಂತರ ಈಗ ಆ ಪೀಠದಲ್ಲಿ ಕೂರುತ್ತಿರುವವರು ಯಾರು? ವಿಜ್ಞಾನ ಕ್ಷೇತ್ರದಲ್ಲಿ ಏನೊಂದೂ ಕೆಲಸ ಮಾಡದ, ತನ್ನ ಜೀವನದ ಬಹುಕಾಲವನ್ನೆಲ್ಲ ಕ್ರಿಕೆಟ್

ಇತಿಹಾಸ ಬರೆದು ಪೇಜ್ ತ್ರೀ ವಿಮರ್ಶಕರಿಂದ ಕ್ರೀಡಾ ಇತಿಹಾಸಕಾರ ಎಂಬ ಬಿರುದು ಗಿಟ್ಟಿಸಿಕೊಂಡ; ನೆಹರೂ ಗುಣಗಾನ ಮಾಡೀ ಮಾಡೀ ಕಾಂಗ್ರೆಸ್‌ನ ಉಳಿದ ಭಟ್ಟಂಗಿಗಳಿಂದ ಎಮಿನೆಂಟ್ ಹಿಸ್ಟೋರಿಯನ್ ಎಂದು ಕರೆಯಲ್ಪಟ್ಟ, ಆದರೆ ಅಸಲಿಗೆ ಅದ್ಯಾವುದೂ ಅಲ್ಲದ ಒಬ್ಬ ಎಡಪಂಥೀಯ (ಆ ಪಂಥದ ಸಿದ್ಧಾಂತ ಕೂಡ ಈ ವ್ಯಕ್ತಿಗೆ ಸರಿಯಾಗಿ ತಿಳಿದಿರುವುದು ಅನುಮಾನ!) ಬುದ್ಧಿಜೀವಿ! ಈತನಿಗೂ ವಿಜ್ಞಾನಕ್ಕೂ ಉತ್ತರ ದಕ್ಷಿಣ ಧ್ರುವಗಳ ಅಂತರ! ಹಾಗಿದ್ದ ಮೇಲೆ ಈತನನ್ನು ವಿಜ್ಞಾನ ಸಂಸ್ಥೆ ಯಾವ ವೈಜ್ಞಾನಿಕ ಆಧಾರದಲ್ಲಿ ಆರಿಸಿ ಸತೀಶ್ ಧವನ್ ಪೀಠದಲ್ಲಿ ಕುಳ್ಳಿರಿಸಿದೆ? ಈತನಿಂದ ಮುಂದಿನ ಒಂದು ವರ್ಷ ಸಂಸ್ಥೆಗೆ ವಿಜ್ಞಾನ ಕ್ಷೇತ್ರದಲ್ಲಿ, ಅಂತರಿಕ್ಷ ಕ್ಷೇತ್ರದಲ್ಲಿ ಆಗುವ ಪ್ರಯೋಜನವಾದರೂ ಏನು? ಎಲ್ಲಕ್ಕಿಂತ ಹೆಚ್ಚಾಗಿ ಸಂಸ್ಥೆ ಮಾಡಿದ ಎಡವಟ್ಟನ್ನು ಕಿಂಚಿತ್ತೂ ಪ್ರಶ್ನಿಸದೆ ಕೇಂದ್ರ ಸರಕಾರದ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವಾಲಯ ಅನುಮೋದಿಸಿದ್ದು ಹೇಗೆ? ನೀತಿ ನಿಯಮಾವಳಿಗಳು ಇರುವುದೇ ಗಾಳಿಗೆ ತೂರುವುದಕ್ಕೆ ಎಂದಾದರೆ ನಾಳೆಯ ದಿನ ಮೈಸೂರು ಯೂನಿವರ್ಸಿಟಿಗೆ ಯಾವುದಾದರೂ ಕಿರಾಣಿ ಅಂಗಡಿ ಕಿಟ್ಟಪ್ಪನನ್ನು ತಂದು ರಿಜಿಸ್ಟ್ರಾರ್ ಹುದ್ದೆಯಲ್ಲಿ ಕೂರಿಸಬಹುದಲ್ಲವೆ? ಎನ್‌ಸಿಇಆರ್‌ಟಿಯ ನಿರ್ದೇಶಕರ ಹುದ್ದೆಗೆ ಸಲ್ಮಾನ್ ಖಾನನನ್ನೋ ಊರ್ಮಿಳಾ ಮಾತೋಡ್ಕರ್ ಅನ್ನೋ ಆರಿಸುವುದರಲ್ಲಿ ಏನು ತಪ್ಪಿದೆ? ಬೇಡ, ಸ್ವತಃ ಎಚ್‌ಆರ್‌ಡಿ ಮಿನಿಸ್ಟ್ರಿಗೇ ಒಬ್ಬ ಗಲ್ಲಿ ಕ್ರಿಕೆಟ್ ಆಡುವ ಹುಡುಗನನ್ನು ಸಚಿವನನ್ನಾಗಿ ಮಾಡಿದರೆ ಹೇಗೆ?

ನೆಹರೂ ಬಲೂನಿಗೆ ಈತನದೇ ಗಾಳಿ

ವಿಷಯಕ್ಕೆ ಬರೋಣ. ಮೊತ್ತಮೊದಲಾಗಿ ಸ್ಪಷ್ಟಪಡಿಸಬೇಕಾದ ವಿಷಯವೇನೆಂದರೆ ಗುಹಾ ವಿಜ್ಞಾನಿಯಲ್ಲ; ವಿಜ್ಞಾನದಲ್ಲಿ ಆಸಕ್ತನೂ ಅಲ್ಲ. ಈತ ಕೆಲಸ ಮಾಡಿರುವುದೆಲ್ಲವೂ ಇತಿಹಾಸ ಕ್ಷೇತ್ರದಲ್ಲಿ; ಸೃಷ್ಟಿಸಿದ್ದು ಇತಿಹಾಸದ ಹೆಸರಲ್ಲಿ ಖೊಟ್ಟಿ ಹಿಸ್ಟರಿ; ಅಕ್ಷರಕಸ! ಎಲ್ಲೆಲ್ಲಿ ಈತ ಸುಳ್ಳು ಹೇಳಿದ್ದಾನೆ ಎಂಬುದನ್ನು ಎತ್ತಿ ತೋರಿಸುವುದಕ್ಕಿಂತ ಎಲ್ಲಿ ಸುಳ್ಳು ಹೇಳಿಲ್ಲ ಎಂಬುದನ್ನು ತೋರಿಸುವುದೇ ಸರಳ ಕೆಲಸವಾದೀತು! ಬೇರೆಲ್ಲ ವಿಚಾರಗಳನ್ನು ಬಿಡಿ; ಸ್ವತಃ ತನ್ನ ಆರಾಧ್ಯಮೂರ್ತಿಯಾಗಿರುವ ನೆಹರೂ ವಿಷಯದಲ್ಲೂ ಗುಹಾ ತಿಳಿದುಕೊಂಡದ್ದು ತಪ್ಪುಗಳನ್ನು ಮಾತ್ರವೇ. ಉದಾಹರಣೆಗೆ, ಆತ ಹೇಳಿದ ಈ ಮಾತನ್ನು ಗಮನಿಸಬಹುದು: "1928ರಲ್ಲಿ ಮೋತಿಲಾಲ್ ನೆಹರೂ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಅದರ ಮರುವರ್ಷ ಆ ಪೀಠವನ್ನು ಅಲಂಕರಿಸಿದ್ದು ನೆಹರೂ. ಮೋತಿಲಾಲರ ನಂತರ ಅವರ ಪುತ್ರ ಆ ಸ್ಥಾನಕ್ಕೆ ಆಯ್ಕೆಯಾಗಿ ಬರಬೇಕು ಎಂಬುದು ಗಾಂಧೀಜಿಯ ಆಸೆಯಾಗಿತ್ತು. ಜವಹರ್ ಆ ಕಾಲಕ್ಕೆ ನವತರುಣರ ಆಶಾಕಿರಣವಾಗಿದ್ದರು. ಅವರನ್ನು ಅನುಸರಿಸುವ, ಅವರಿಂದ ಪ್ರಭಾವಕ್ಕೊಳಗಾಗುವ ದೊಡ್ಡ ವರ್ಗವೇ ದೇಶದಲ್ಲಿತ್ತು. ಆದ್ದರಿಂದ ದೇಶದ ತರುಣಪಡೆಯನ್ನು ಒಗ್ಗೂಡಿಸಬೇಕಿದ್ದರೆ ಅದಕ್ಕೆ ಜವಹರ್ ಸೂಕ್ತ ವ್ಯಕ್ತಿ ಎಂದು ಗಾಂಧೀಜಿ ಅರಿತಿದ್ದರು. ಮಾತ್ರವಲ್ಲ, ನೆಹರೂ ಅದಾಗಲೇ ಒಬ್ಬ ಪ್ರಬುದ್ಧ ಲೇಖಕರಾಗಿಯೂ ತನ್ನ ಸ್ವತಂತ್ರ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು."

ಇಲ್ಲಿ ವಿಷಯ ಪ್ರತಿಪಾದನೆಯ ಜೊತೆಗೆ ತನ್ನ ಭಗವಂತನನ್ನು ಅತಿಶಯ ಭಕ್ತಿಯಿಂದ ಸ್ತುತಿಸುವ ಕೆಲಸವನ್ನೂ ಗುಹಾ ಮಾಡಿದ್ದಾನೆ ಎಂಬುದನ್ನು ಗಮನಿಸಿ. ತಮಾಶೆ ಎಂದರೆ ಈ ಇಡೀ ವಾಕ್ಯವೃಂದವೇ ಸುಳ್ಳಿನ ದೊಡ್ಡ ಕಂತೆ! 1928ರ ಡಿಸೆಂಬರ್‌ನಲ್ಲಿ ಮೋತಿಲಾಲ್ ನೆಹರೂ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದದ್ದು ನಿಜ; ಅದರ ಮರುವರ್ಷ ಆ ಪಟ್ಟವನ್ನು ನೆಹರೂ ಗಳಿಸಿದ್ದೂ ನಿಜ. ಆದರೆ ಹೇಗೆ? ಮೋತಿಲಾಲ್ ನಂತರ, ಕಾಂಗ್ರೆಸ್‌ನ ಅಧ್ಯಕ್ಷಗಿರಿ ಜವಾಹರ್‌ಗೆ ಸಿಗಬೇಕು ಎಂದು ಸ್ವತಃ ತಂದೆ ಮೋತಿಲಾಲ್ ಲಾಬಿ ಮಾಡಲು ಶುರುಮಾಡಿದಾಗ ಮಹಾತ್ಮ ಗಾಂಧಿ ಮೋತಿಲಾಲರಿಗೆ ಒಂದು ಪತ್ರ ಬರೆದು, "ಆ ಹುದ್ದೆಗೆ ಸರಿಯಾದ ವ್ಯಕ್ತಿ ಮದನಮೋಹನ ಮಾಲವೀಯರು" ಎಂದು ಸೂಚಿಸಿದರು. ಅದಕ್ಕೆ ಉತ್ತರವಾಗಿ ಮೋತಿಲಾಲರು "ಎಲ್ಲರಿಗಿಂತ ಅತ್ಯಂತ ಪ್ರಶಸ್ತ ವ್ಯಕ್ತಿ ವಲ್ಲಭಬಾಯಿ ಪಟೇಲರು. ಆದರೆ ಹಿರಿಯರ ಯುಗ ಇದೀಗ ಕೊನೆಯಾಗುತ್ತಿದೆ. ಇನ್ನೇನಿದ್ದರೂ ತರುಣರು ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಬೇಕು. ಆ ದೃಷ್ಟಿಯಿಂದ ಜವಾಹರ್ ಅತ್ಯಂತ ಸಮರ್ಪಕ ವ್ಯಕ್ತಿಯಾಗಿ ನನಗೆ ಕಾಣುತ್ತಾನೆ" ಎಂದು ಬರೆದರು. ಮೋತಿಲಾಲರ ಪತ್ರದಲ್ಲಿ ತನ್ನ ನಂತರ ತನ್ನ ಮಗನೇ ಕಾಂಗ್ರೆಸ್‌ನ ನೇತೃತ್ವವನ್ನು ಕೈಗೆ ತೆಗೆದುಕೊಳ್ಳಬೇಕು ಎಂಬುದಲ್ಲದೆ ಹಿರಿಯರಾದ ವಲ್ಲಭಬಾಯಿಯವರನ್ನು ಪಕ್ಕಕ್ಕಿಡಬೇಕು ಎಂಬ ಅಭೀಪ್ಸೆಯೂ ತೀವ್ರವಾಗಿಯೇ ಕಾಣುತ್ತದೆ ಅಲ್ಲವೆ? ಅಂದರೆ ಕಾಂಗ್ರೆಸ್‌ನಲ್ಲಿ ಅಪ್ಪ-ಮಕ್ಕಳ ಸಂಸ್ಕೃತಿಗೆ ಅಡಿಪಾಯ ಹಾಕಿದ್ದು ನೆಹರೂ ಅಥವಾ ಇಂದಿರಾ ಅಲ್ಲ; ಅವರೆಲ್ಲರ ಪೂರ್ವಸೂರಿಗಳಾದ ಮೋತಿಲಾಲರು! ಬಹುಶಃ ಈ ಸತ್ಯವನ್ನು ಹೇಳಿಬಿಟ್ಟರೆ ಎಲ್ಲಿ ತನ್ನ ಆರಾಧ್ಯಮೂರ್ತಿಯ ವ್ಯಕ್ತಿತ್ವ ಮುಕ್ಕಾಗುತ್ತದೋ ಎಂಬ ಭಯ ಗುಹಾನಿಗೆ ಕಾಡಿರಬೇಕು; ಹಾಗಾಗಿ ಆತ ನೆಹರೂ ಕಾಂಗ್ರೆಸ್ ಅಧ್ಯಕ್ಷನಾಗಿ ಬರಬೇಕೆಂದು ಸ್ವತಃ ಗಾಂಧಿಯವರೇ ಬಯಸಿದ್ದರು ಎಂಬ - ಇತಿಹಾಸದ ಬಹು ದೊಡ್ಡ ಸುಳ್ಳನ್ನು - ಅತ್ಯಂತ ಸಹಜ ಸತ್ಯವೆಂಬಂತೆ ಹೇಳಿಬಿಡುತ್ತಾನೆ! ಅಂದ ಹಾಗೆ, ಈತ ತನ್ನ ಜೀವನವೆಲ್ಲ ಬರೆದದ್ದು ನೆಹರೂ ಮತ್ತು ಗಾಂಧಿಯ ಬಗ್ಗೆ ಮಾತ್ರವೇ. ಹಾಗಿದ್ದರೂ ಆತನಿಗೆ ಇತಿಹಾಸದ ಕಾಲರೇಖೆಯ ಅತಿ ಪ್ರಮುಖ ಬಿಂದುವಾಗಿರುವ ಮೇಲಿನ ಘಟನೆ ಕಣ್ಣಿಗೆ ಕಾಣಿಸಲಿಲ್ಲ! ಅದೆಂಥ ದೃಷ್ಟಿದೋಷ ಇರಬಹುದು!

ಗುಹಾ ಹೇಳುವ ಇನ್ನೊಂದು ಸುಳ್ಳು, ನೆಹರೂ ಮತ್ತು ಪಟೇಲ್ ಭಿನ್ನವ್ಯಕ್ತಿತ್ವದವರಾದರೂ ಅತ್ಯಂತ ಸೌಹಾರ್ದದಿಂದ ಕೆಲಸ ಮಾಡಿದರು; ಇಬ್ಬರೂ ಪರಸ್ಪರ ಸಹಕಾರಪೂರ್ವಕ ದೇಶದ ಅಭಿವೃದ್ಧಿಗೆ ದುಡಿದರು; ಪಟೇಲರಿಗೆ ಪ್ರಧಾನಿ ನೆಹರೂ ತನ್ನ ಕೈಯಲ್ಲಿ ಸಾಧ್ಯವಿರುವ ಎಲ್ಲ ಸಹಕಾರವನ್ನೂ ಕೊಡುತ್ತಿದ್ದರು - ಎಂಬುದು. ಪಟೇಲ್ ಮತ್ತು ನೆಹರೂ ಸಂಬಂಧದ ಕುರಿತು ಪುಟಗಟ್ಟಲೆ ಬರೆದಿರುವ ಗುಹಾ, ಆ ಬರಹದ ತೊಂಬತ್ತರಷ್ಟು ಭಾಗವನ್ನು ಮತ್ತೆ ಎಂದಿನಂತೆ ತನ್ನ ಭಗವಂತ ನೆಹರೂ ಗುಣಗಾನಕ್ಕೇ ಮೀಸಲಿಟ್ಟಿದ್ದಾನೆ. ಆದರೆ ಪಟೇಲರ ಕೆಲಸಕಾರ್ಯಗಳಿಗೆ ನೆಹರೂ ಮಗ್ಗುಲ ಮುಳ್ಳಾಗಿದ್ದರು ಎಂಬುದು ಇತಿಹಾಸವನ್ನು ಪೂರ್ವಗ್ರಹಗಳಿಲ್ಲದೆ ಓದಿದವರಿಗೆ ಗೊತ್ತಾಗುವ ಸಂಗತಿ. ಪಟೇಲರು ತೀರಿಕೊಂಡಾಗ ನೆಹರೂ ರಾಷ್ಟ್ರಾಧ್ಯಕ್ಷ ಬಾಬು ರಾಜೇಂದ್ರ ಪ್ರಸಾದರಿಗೆ, ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಬೇಡಿ ಎಂಬ ಬೆದರಿಕೆ ರೂಪದ "ಸಲಹೆ" ಕೊಡುತ್ತಾರೆ; ಆ ಸಲಹೆಯನ್ನು ಧಿಕ್ಕರಿಸಿ ರಾಜೇಂದ್ರ ಪ್ರಸಾದರು ಪಟೇಲರಿಗೆ ಅಂತಿಮ ನಮನ ಸಲ್ಲಿಸುತ್ತಾರೆ; ಈ ಹಗೆಯನ್ನು ಹದಿನಾಲ್ಕು ವರ್ಷ ಇಟ್ಟುಕೊಂಡಿದ್ದ ನೆಹರೂ 1963ರಲ್ಲಿ ರಾಜೇಂದ್ರ ಪ್ರಸಾದರು ತೀರಿಕೊಂಡಾಗ ಆ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸದೆ ಚಂಡೀಗಢದಲ್ಲಿ ಬೆಳ್ಳಿಯಿಂದ ತುಲಾಭಾರ ಮಾಡಿಸಿಕೊಳ್ಳಲು ಹೋಗುತ್ತಾರೆ ಮತ್ತು ರಾಷ್ಟ್ರಾಧ್ಯಕ್ಷರಾಗಿದ್ದ ರಾಧಾಕೃಷ್ಣನ್ ಅವರಿಗೆ "ಬಾಬು ರಾಜೇಂದ್ರರ ಅಂತ್ಯಸಂಸ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸಬಾರದು" ಎಂದು ಮತ್ತದೇ ಹಳೆ ಬೆದರಿಕೆ ಹಾಕುತ್ತಾರೆ! ಇದು ನೆಹರೂ! ಈ ದೇಶ ಕಂಡ ಪ್ರಥಮ ಪ್ರಧಾನಿ! ಇಂಥ ವ್ಯಕ್ತಿ ಪಟೇಲರಿಗೆ ಸಂಪೂರ್ಣ ಸಹಕಾರ ಕೊಡುತ್ತಿದ್ದರು ಎಂದು ಹೇಳುವುದು ಪಟೇಲರಿಗೆ ಮಾತ್ರವಲ್ಲ, ಇತಿಹಾಸಕ್ಕೆ, ಈ ದೇಶಕ್ಕೆ ಮಾಡುವ ಅಪಚಾರ.

ಇವನ ಚರಿತ್ರೆ ಸುಳ್ಳು, ಉತ್ಪ್ರೇಕ್ಷೆಗಳ ಕಂತೆ

ನೆಹರೂಗೆ ಪಟೇಲರ ಮೇಲೆ ಯಾರಲ್ಲೂ ಹೇಳಿಕೊಳ್ಳಲಾರದ ಅದಮ್ಯ ದ್ವೇಷ, ಮಾತ್ಸರ್ಯ ಇತ್ತೆಂಬುದನ್ನು ನಂಬುವುದಕ್ಕೆ ಕಾರಣಗಳಿವೆ. ಆದರೆ ನೆಹರೂವನ್ನು ತನ್ನ ದೇವರೆಂದು ಸಂಕಲ್ಪಿಸಿಕೊಂಡ ಗುಹಾನಿಗೂ ಪಟೇಲರ ಮೇಲೆ ಅದೇ ತಣ್ಣನೆ ದ್ವೇಷವಿದೆ ಎಂಬುದು ಕುತೂಹಲದ ಸಂಗತಿ. ಪಟೇಲರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಈತ ಎಂತೆಂಥ ಸುಳ್ಳುಗಳನ್ನು ಸೃಷ್ಟಿಸಿದ್ದಾನೆ ಎಂದು ನೋಡಿದರೆ ಆಶ್ಚರ್ಯವಾಗುತ್ತದೆ ಮಾತ್ರವಲ್ಲ; ಈತನ ವ್ಯಕ್ತಿತ್ವದ ಮೇಲೆಯೇ ವಾಕರಿಕೆ ಬರುತ್ತದೆ. ತನ್ನ ಬರಹಗಳಲ್ಲಿ ಒಂದು ಕಡೆ ಗುಹಾ ಹೇಳುತ್ತಾನೆ: "ಭಾರತ ಪಾಕಿಸ್ತಾನಗಳೆಂದು ಎರಡು ದೇಶಗಳು ಸೃಷ್ಟಿಯಾದಾಗ ಜುನಾಗಢ ಪಾಕಿಸ್ತಾನವನ್ನು ಒಪ್ಪಿಕೊಂಡು ಅದರ ಭಾಗವಾಗಿತ್ತು. ಆದರೆ ಅಲ್ಲಿ ಪಟೇಲರು ಜನಮತಗಣನೆ ನಡೆಸಿ ಅದನ್ನು ಬಲವಂತದಿಂದ ಭಾರತಕ್ಕೆ ಸೇರಿಸಿಕೊಂಡರು. ಅಲ್ಲಿ ಜನಮತಗಣನೆ ನಡೆದದ್ದಕ್ಕೇ ಅಲ್ಲವೆ ಕಾಶ್ಮೀರದಲ್ಲಿಯೂ ಜನಮತಗಣನೆ ನಡೆಯಬೇಕೆಂಬ ಹುಯಿಲೆದ್ದಿರುವುದು? ಕಾಶ್ಮೀರದ ಸಮಸ್ಯೆಗೆ ಹಾಗಾದರೆ ಮೂಲ ಕಾರಣ ಪಟೇಲರು ಎಂದಾಯಿತಲ್ಲ?" ಎಂಥ ಅದ್ಭುತ ವಾದಸರಣಿ ನೋಡಿ! ಕಾಶ್ಮೀರ ಏಳು ದಶಕಗಳು ಕಳೆದರೂ ತಣಿಯದ ಕುದಿವ ಕುಲುಮೆಯಾಗಿ ನಿಂತಿರುವುದಕ್ಕೆ ಮೂಲ ಕಾರಣ ನೆಹರೂ ಎಂದು ಇತಿಹಾಸದ ನೂರು ನೂರು ದಾಖಲೆಗಳು ಬೆಟ್ಟು ಮಾಡಿ ತೋರಿಸುತ್ತಿರುವಾಗ, ಆ ಅಪವಾದವನ್ನು ನೆಹರೂ ಮೇಲಿಂದ ಕಳಚಿ ಗುಹಾ ಅದೆಂಥ ಚಾಣಾಕ್ಷತೆಯಿಂದ ಪಟೇಲರ ಹೆಗಲಿಗೆ ಹೊರಿಸುತ್ತಾನೆ ನೋಡಿ! ಅಸಲಿಗೆ ವಿಷಯ ಇದು: ಭಾರತ ವಿಭಜನೆಯ ಸಂದರ್ಭದಲ್ಲಿ ಜುನಾಗಢ ಪಾಕಿಸ್ತಾನದ ಆಳ್ವಿಕೆಯನ್ನು ಒಪ್ಪಿಕೊಂಡದ್ದು ನಿಜ. ಅದು ಅಲ್ಲಿನ ನವಾಬನ ಏಕಪಕ್ಷೀಯ ತೀರ್ಮಾನವಾಗಿತ್ತು. ಮುಸ್ಲಿಂ ದೊರೆಯಿಂದ ಆಳಿಸಿಕೊಂಡರೂ ಜುನಾಗಢ ಮೂಲತಃ ಹಿಂದೂಗಳು ಬಹುಸಂಖ್ಯಾತರಾಗಿದ್ದ ರಾಜ್ಯ. ಅದು ಪಾಕಿಸ್ತಾನದ ಪಾರಮ್ಯವನ್ನು ಒಪ್ಪಿಕೊಂಡಾಗ ಹಿಂದೂ ಪ್ರಜೆಗಳು ಕ್ರುದ್ಧರಾದರು. ರಾಜ್ಯದಲ್ಲಿ ದಂಗೆಗಳೆದ್ದವು. ನವಾಬನ ವಿರುದ್ಧ ಇಡೀ ರಾಜ್ಯವೇ ತಿರುಗಿಬಿತ್ತು. ಬೆದರಿ ಕಂಗಾಲಾದ ನವಾಬ ತನ್ನ ಸಂಸಾರ ಮತ್ತು ಒಂದಷ್ಟು ಸಂಪತ್ತನ್ನು ಕಟ್ಟಿಕೊಂಡು ರಾತ್ರೋರಾತ್ರಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದ. ದಂಗೆಯನ್ನು ನಿಯಂತ್ರಿಸಲು ಅಲ್ಲಿ ತಾತ್ಕಾಲಿಕ ಸರಕಾರವೊಂದನ್ನು ಅಧಿಕಾರಕ್ಕೆ ತರಲಾಯಿತು. ಜುನಾಗಢ ಭಾರತಕ್ಕೇ ಸೇರಬೇಕೆಂದು ಜನರಿಂದ ಪ್ರಾರಂಭವಾದ ದಂಗೆ ತೀವ್ರ ಸ್ವರೂಪ ಪಡೆದುಕೊಂಡಾಗ ಅಲ್ಲಿ ಜನಮತಗಣನೆ ನಡೆಸುವುದು ಎಂದು ತೀರ್ಮಾನವಾಯಿತು; ಆ ಪ್ರಕಾರ ಅದು ಭಾರತಕ್ಕೆ ಬಂತು. ಜುನಾಗಢವು ಹೈದರಾಬಾದಿನಂತೆ ಭಾರತದ ಸೀಮೆಯೊಳಗಿದ್ದ ರಾಜ್ಯ; ಅದಕ್ಕೂ ಪಾಕಿಸ್ತಾನಕ್ಕೂ ಸಹಜ ಗಡಿರೇಖೆ ಇರಲಿಲ್ಲ ಎಂಬ ಅಂಶವನ್ನೂ ನಾವಿಲ್ಲಿ ಗಮನಿಸಬೇಕು. ಆದರೆ ಕಾಶ್ಮೀರ ಭಾರತದ ಭಾಗ ಆದದ್ದು ಹೇಗೆ? ಭಾರತ ವಿಭಜನೆಯಾದಾಗ ಕಾಶ್ಮೀರ ಎರಡೂ ದೇಶಗಳಿಗೆ ಸೇರದೆ ಸ್ವತಂತ್ರ ದೇಶವಾಗಿ ಗುರುತಿಸಿಕೊಂಡಿತ್ತು. ಅದನ್ನು ಪೂರ್ವದ ಸ್ವಿತ್ಸರ್‌ಲ್ಯಾಂಡ್ ಮಾಡುವ ಕನಸು ಅಲ್ಲಿನ ರಾಜನದ್ದಾಗಿತ್ತು. ಭಾರತದಿಂದ ಪ್ರತ್ಯೇಕವಾಗಿ ನಿಂತು ಪಾಕಿಸ್ತಾನ ಎಂಬ ಅಸ್ಮಿತೆ ಗಿಟ್ಟಿಸಿದ ಎರಡೇ ತಿಂಗಳಲ್ಲಿ ಪಾಕ್, ತನ್ನ ಸೈನಿಕರನ್ನು ಕಾಶ್ಮೀರದೊಳಗೆ ನುಗ್ಗಿಸಿತು. ಅಲ್ಲಿ ವ್ಯಾಪಕ ದರೋಡೆ, ಕೊಲೆ, ಅತ್ಯಾಚಾರ ನಡೆದವು. ಕಾಶ್ಮೀರದ ರಾಜ ತನಗೆ ಸಹಾಯ ಮಾಡಬೇಕೆಂದು ಭಾರತದತ್ತ ಮುಖ ಮಾಡಿ ಅಂಗಲಾಚಬೇಕಾಯಿತು. ಕೊನೆಗೆ ಆ ವರ್ಷದ ಅಕ್ಟೋಬರ್ 26ರಂದು ಕಾಶ್ಮೀರ ಭಾರತದ ಭಾಗವಾಯಿತು; ಆ ರಾಜ್ಯದಲ್ಲಿದ್ದ ಬಹುಸಂಖ್ಯಾತರೂ ಆಗ ಹಿಂದೂಗಳೇ; ಅಲ್ಲಿನ ರಾಜನಾಗಿದ್ದವನೂ ಹಿಂದೂ ಧರ್ಮೀಯನೇ. ಕಾಶ್ಮೀರದ ರಾಜನೇ ಬೇಷರತ್ತಾಗಿ ಭಾರತಕ್ಕೆ ತನ್ನ ರಾಜ್ಯವನ್ನು ವಿಲೀನಗೊಳಿಸಿದ್ದರಿಂದ ಅಲ್ಲಿ ಜನಮತಗಣನೆ ನಡೆಸುವ, ನಡೆಸಬೇಕಾದ ಅನಿವಾರ್ಯತೆ ಇರಲೇ ಇಲ್ಲ. ಆದರೆ ಅಲ್ಲಿ ಜನರ ಅಭಿಪ್ರಾಯ ಸಂಗ್ರಹಿಸುತ್ತೇವೆ; ಆ ಮೂಲಕ ಅದು ಯಾವ ದೇಶಕ್ಕೆ ಹೋಗಬೇಕೆಂದು ನಿರ್ಧರಿಸುತ್ತೇವೆ ಎಂಬ ಎಡವಟ್ಟು ಹೇಳಿಕೆಯನ್ನು ವಿಶ್ವಸಂಸ್ಥೆಗೆ ಕೊಟ್ಟು ಸಮಸ್ಯೆ ಸೃಷ್ಟಿಸಿದ್ದು ಇದೇ ನೆಹರೂ ಅಲ್ಲದೆ ಪಟೇಲರಲ್ಲ! ಇದು ಇತಿಹಾಸದಲ್ಲಿ ಅತ್ಯಂತ ಸ್ಪಷ್ಟವಾಗಿ; ಸಂಶಯಕ್ಕೆಡೆಯಿಲ್ಲದಂತೆ ದಾಖಲಾಗಿರುವ ಸತ್ಯ. ಆದರೆ ಗುಹಾ ಆ ದಾಖಲೆಯನ್ನು ತನಗೆ ಬೇಕಾದಂತೆ ತಿರುಚಿ, ಮುಖ್ಯ ವಿಷಯವನ್ನು ಬಚ್ಚಿಟ್ಟು, ನೆಹರೂ ಮೇಲಿನ ಕಳಂಕವಷ್ಟನ್ನೂ ಪಟೇಲರ ಶಾಲಿಗೆ ಒರೆಸುತ್ತಾನೆ! ಈತ ಇತಿಹಾಸಕಾರ ಎಂದು ಕರೆಸಿಕೊಳ್ಳಬಹುದಾದರೆ ಒಸಾಮಾ ಬಿನ್ ಲಾಡೆನ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಡುವುದರಲ್ಲಿ ತಪ್ಪು ಕಾಣುವುದಿಲ್ಲ!

ದಡ್ಡತನ ತೋರಿಸಲಿಕ್ಕೂ ಅದೆಂಥ ಉತ್ಸಾಹ!

 ಗುಹಾ ಪದವಿ ಗಳಿಸಿದ್ದು ಅರ್ಥಶಾಸ್ತ್ರದಲ್ಲಿ. ಈತನ ಒಂದು ಟ್ವೀಟ್ ಇದು: (ಎನ್‌ಡಿಟಿವಿಯ ಪ್ರಣಯ್ ರಾಯ್ ಮತ್ತು ಬಳಗ) ಬ್ಯಾಂಕ್‌ಗಳಿಗೆ ಪಾವತಿಸಬೇಕಿರುವುದು 48 ಕೋಟಿ ರುಪಾಯಿ. ಆದರೆ ಅದಾನಿ ಬ್ಯಾಂಕ್‌ಗೆ ಪಾವತಿಸಬೇಕಿರುವ ಹಣ 72,000 ಕೋಟಿ ರುಪಾಯಿ. ಈಗ ಮುಂದಿನ ದಾಳಿ ಗೌತಮ್ ಅದಾನಿಯ ಮೇಲೆ ಆಗುತ್ತದೆಂದು ನಾವು ನಿರೀಕ್ಷಿಸೋಣವೇ?

ತಮಾಶೆ ಇರುವುದು ಇಲ್ಲಿ ಗುಹಾ ಪ್ರಸ್ತಾಪಿಸಿರುವ 48 ಕೋಟಿ ರುಪಾಯಿ ಎನ್‌ಡಿಟಿವಿಯ ರಾಯ್ ಬಳಗ ಬ್ಯಾಂಕ್‌ಗೆ ಕಟ್ಟದೆ ಬಾಕಿ ಉಳಿಸಿಕೊಂಡ ದುಡ್ಡು. ಅದು ಬ್ಯಾಂಕ್ ವಂಚನೆ ಪ್ರಕರಣ. ಬ್ಯಾಂಕ್‌ಗಳು ಮೇಲಿಂದ ಮೇಲೆ ರಾಯ್ ಮತ್ತವನ ಪರಿವಾರಕ್ಕೆ ನೊಟೀಸ್ ಕೊಟ್ಟರೂ ಯಾವೊಂದಕ್ಕೂ ಉತ್ತರಿಸುವ ಗೊಡವೆಗೆ ಆತ ಹೋಗಿರಲಿಲ್ಲ. ಅಂತಿಮವಾಗಿ ಅವರ ಮೇಲೆ ಬ್ಯಾಂಕ್‌ಗಳು ರೇಡ್ ಮಾಡಬೇಕಾಗಿ ಬಂತು. ಆದರೆ ಅದಾನಿ ಬ್ಯಾಂಕ್‌ನಿಂದ ಪಡೆದ ಸಾಲ 72,000 ಕೋಟಿ ರುಪಾಯಿ. ಪಡೆದ ಸಾಲವನ್ನು ವಾಪಸ್ ಮಾಡದೆ ಆತ ಮೋಸ ಮಾಡಿದ ಪ್ರಕರಣ ಯಾವುದೂ ಬೆಳಕಿಗೆ ಬಂದಿಲ್ಲ! ವಂಚನೆ ಮತ್ತು ಸಾಲಕ್ಕಿರುವ ವ್ಯತ್ಯಾಸವನ್ನು ಬಹುಶಃ ಗುಹಾ ತನ್ನ ಕಾಲೇಜು ದಿನಗಳಲ್ಲಿ ಓದಿಲ್ಲ ಅನ್ನಿಸುತ್ತದೆ!

ಶ್ವಾನವನ್ನು ಸಿಂಹಾಸನದಲ್ಲಿ ಕೂರಿಸಿದಂತಾಗಿದೆ

ಇಷ್ಟೆಲ್ಲ ಅಪಸವ್ಯಗಳ ಮೂರ್ತರೂಪವಾಗಿರುವ ಗುಹಾ ಭಾರತೀಯ ವಿಜ್ಞಾನ ಮಂದಿರದಲ್ಲಿ ಪ್ರೊಫೆಸರ್ ಹುದ್ದೆಯೊಂದನ್ನು ಆವರಿಸಿಕೊಳ್ಳುತ್ತಿರುವುದು ಹಸು ಸಿಗಲಿಲ್ಲವೆಂದು ಶ್ವಾನದ ಕೊರಳಿಗೆ ಹೂಮಾಲೆ ಹಾಕಿ ಗೋಪೂಜೆ ಮಾಡಿದಂತೆ. "ಮೋದಿ ಸರಕಾರ ಅಧಿಕಾರಕ್ಕೆ ಬಂದ ದಿನದಿಂದ ದೇಶದ ಬೌದ್ಧಿಕ ವಲಯಕ್ಕೆ ಗ್ರಹಣ ಹಿಡಿದಿದೆ. ನಿಜವಾದ ಬುದ್ಧಿಜೀವಿಗಳು ದೇಶದಲ್ಲಿ ಉಸಿರೆತ್ತದ ಪರಿಸ್ಥಿತಿ ಇದೆ; ಬೌದ್ಧಿಕವಾಗಿ ದಿವಾಳಿ ಆಗಿರುವವರೇ ಎಲ್ಲೆಡೆ ಪ್ರಚಾರ ಪಡೆದು ಹಾರಾಡುವಂತಾಗಿದೆ" ಎಂಬುದು ಗುಹಾ ಹೋದಲ್ಲಿ ಬಂದಲ್ಲಿ ಹೇಳುತ್ತಿರುವ ಮಾತು. ಐಐಎಸ್‌ಸಿಯಲ್ಲಿ ಆತನ ನೇಮಕವಾಗಿರುವುದು ಆತನ ಮಾತಿಗೆ ಪುಷ್ಟಿ ಕೊಡುವಂಥ ಸನ್ನಿವೇಶವೇ ಹೌದು! ಐಐಎಸ್‌ಸಿ ಎಂಬ ಪವಿತ್ರ ವಿಜ್ಞಾನ ಮಂದಿರದಲ್ಲಿ ಗುಹಾ ಮಾಡಿಟ್ಟುಹೋಗಲಿರುವ ಕೊಳೆಯನ್ನು ಮುಂದೆ ತೊಳೆಯುವವರು ಯಾರು?

(2) ಗುಹಾ ಈ ದೇಶ ಕಂಡ ಮಹಾನ್ ಇತಿಹಾಸಕಾರ ಅಲ್ಲವೆ? ದೆಹಲಿಯಲ್ಲಿ ಔರಂಗಜೇಬ ರಸ್ತೆಯ ಹೆಸರನ್ನು ತೆರವುಗೊಳಿಸಿದಾಗ ಈತ ಕೆಂಡಾಮಂಡಲನಾಗಿದ್ದ. ಸಹಜವೇ. ಮುಘಲ್ ಇತಿಹಾಸಕ್ಕೆ ಸಂಬಂಧಿಸಿದ ಯಾವೊಂದು ವಿಷಯವನ್ನು ಬಲಪಂಥೀಯ ಸರಕಾರಗಳು

ಎತ್ತಿಕೊಂಡರೂ ದೇಶದ ತಥಾಕಥಿತ ಎಡ ಚರಿತ್ರಕಾರರು ಮೈಯಲ್ಲಿ ಆವೇಶ ಬಂದಂತೆ ಆಡುವುದು ಹಿಂದಿನಿಂದ ನಡೆದು ಬಂದಿದೆ. ಗುಹಾ ತನ್ನ ಪ್ರತಿಭಟನಾ ರೂಪದ ಬರಹದಲ್ಲಿ, ದೆಹಲಿಯಲ್ಲಿ ಶಿವಾಜಿ, ಮಹಾರಾಣಾ ಪ್ರತಾಪ್, ರಣಜೀತ್ ಸಿಂಗ್, ಸಿ.ವಿ. ರಾಮನ್ ಮುಂತಾದ ವ್ಯಕ್ತಿಗಳ ಹೆಸರುಗಳಿರುವ ರಸ್ತೆಗಳೇ ಇಲ್ಲ ಎಂದು ಹೇಳಿದ್ದ. ಗುಹಾ ಏನೋ ಬರೆದ; ಆದರೆ ಪ್ರಕಟಿಸುವ ಪತ್ರಿಕೆಯಾದರೂ ಆ ಎಲ್ಲ ಅಂಶಗಳು ನಿಜವೇ ಎಂದು ಪರಿಶೀಲಿಸಬೇಕಿತ್ತಲ್ಲ? ಕೆಲವು ದಿನಗಳ ನಂತರ ಪತ್ರಿಕೆ, "ಕ್ಷಮಿಸಿ, ಆ ಎಲ್ಲ ಹೆಸರಿನ ರಸ್ತೆಗಳೂ ದೆಹಲಿಯಲ್ಲಿವೆ. ತಪ್ಪಿಗೆ ವಿಷಾದಿಸುತ್ತೇವೆ" ಎಂದು ತಪ್ಪೊಪ್ಪಿಗೆ ಪ್ರಕಟಿಸಿತು!

(3) 2018ರ ಮೇ ತಿಂಗಳಲ್ಲಿ ಕರ್ನಾಟಕದಲ್ಲಿ ಮೂರು ಪಕ್ಷಗಳ ನಡುವೆ ಹೆಚ್ಚಿನ ಮತ ಗಳಿಸಿದ್ದು ಬಿಜೆಪಿ. ಆದರೆ ಪಕ್ಷಕ್ಕೆ ಸರಕಾರ ರಚಿಸುವಷ್ಟು ಸರಳ ಬಹುಮತ ಬಂದಿರಲಿಲ್ಲ. ಸಹಜವಾಗಿಯೇ ರಾಜ್ಯಪಾಲರು ಸರಕಾರ ರಚಿಸುವಂತೆ ಯಡಿಯೂರಪ್ಪನವರನ್ನು ಆಹ್ವಾನಿಸಿದರು. ಬಹುಮತವಿಲ್ಲದ ಪಕ್ಷಕ್ಕೆ ಸರಕಾರ ರಚಿಸಲು ಅವಕಾಶ ಕೊಟ್ಟಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ನ ಜಿ. ಪರಮೇಶ್ವರ ಸುಪ್ರೀಂ ಕೋರ್ಟ್ ಹತ್ತಿದರು. ತನ್ನ ದೂರಿನಲ್ಲಿ ಅವರು ಆರೋಪಿಗಳ ಸ್ಥಾನದಲ್ಲಿ ಹೆಸರಿಸಿದ್ದ ಮೂವರ ಪೈಕಿ ಮೊದಲ ಹೆಸರು ಭಾರತ ಸರಕಾರದ್ದು! ಸಹಜವಾಗಿಯೇ ಭಾರತದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್, "ಕರ್ನಾಟಕದ ರಾಜ್ಯಪಾಲರು ಈ ವಿಷಯದಲ್ಲಿ ನಡೆದುಕೊಂಡದ್ದು ಸಾಂವಿಧಾನಿಕವಾಗಿಯೇ ಇದೆ" ಎಂದು ಹೇಳಿಕೆ ಕೊಟ್ಟರು. ತಾನು ಯಾವ ಪಕ್ಷದ ಬೆಂಬಲಿಗನೂ ಅಲ್ಲ; ತಾನು ತಟಸ್ಥ ಎಂದು ಹೋದಲ್ಲಿ ಬಂದಲ್ಲಿ ಹೇಳಿಕೊಳ್ಳುವ ಗುಹಾ ಸಾಹೇಬರಿಗೆ ಇದು ಯಾವ ಕಡೆಯಿಂದ ಚುಚ್ಚಿತೋ ಗೊತ್ತಿಲ್ಲ! ಕೂಡಲೇ ಟ್ವಿಟ್ಟರ್‌ನಲ್ಲಿ ಗುಹಾ, "ಕರ್ನಾಟಕದ ರಾಜಕೀಯ ವಿದ್ಯಮಾನದ ವಿಷಯದಲ್ಲಿ ಮೂಗು ತೂರಿಸಲು ಅಟಾರ್ನಿ ಜನರಲ್ ಯಾರು? ರಾಜ್ಯಪಾಲ ವಜುಬಾಯಿ ವಾಲಾರಿಗಂತೂ ಯಾವ ಘನತೆಯೂ ಇಲ್ಲ; ಆದರೆ ತನಗೆ ಘನತೆ ಇದೆ ಎಂದು ತಿಳಿದು ಆತ ಅಸಡ್ಡಾಳವಾಗಿ ನಡೆದುಕೊಳ್ಳುತ್ತಿದ್ದಾರೆ. ಇಂಥ ವ್ಯಕ್ತಿಯ ಪರ ವಹಿಸಿಕೊಳ್ಳಲು ಹೋಗಿ ಅಟಾರ್ನಿ ಜನರಲ್ ವೇಣುಗೋಪಾಲ್ ಅವರ ಆರು ದಶಕಗಳ ವೃತ್ತಿಜೀವನದ ಘನತೆಯೂ ಹಾಳಾದಂತಾಗಿದೆ" ಎಂದು ಬರೆದ!

ವಜುಬಾಯಿ ವಾಲಾ ಅವರು ಕರ್ನಾಟಕದ ರಾಜ್ಯಪಾಲರಾಗಿ ಸಾಧನೆ ಮಾಡಿದ್ದಾರೋ ಇಲ್ಲವೋ ಎಂಬುದು ಬೇರೆ ಚರ್ಚೆಯ ವಿಷಯ. ಆದರೆ ರಾಜ್ಯಪಾಲ ಎಂಬ ಹುದ್ದೆಯ ಗೌರವ, ಘನತೆಗಳನ್ನು ಅವರು ಪ್ರಶ್ನಾರ್ಹ ಸ್ಥಿತಿಗೆ ತರುವಂಥ ಕೆಲಸ ಮಾಡಿಲ್ಲ ಎನ್ನಬಹುದು. ಅಲ್ಲದೆ 2018ರಲ್ಲಿ ಅಸೆಂಬ್ಲಿ ಚುನಾವಣೆಗಳ ಸಂದರ್ಭದಲ್ಲಿ ಯಾವ ಪಕ್ಷಕ್ಕೂ ಬಹುಮತವಿಲ್ಲದ ಸಂದರ್ಭದಲ್ಲಿ ಅವರು ಇನ್ನು ಹೇಗೆ ನಡೆದುಕೊಳ್ಳಬೇಕಿತ್ತು? ಕರ್ನಾಟಕದ ರಾಜ್ಯಪಾಲರಾಗುವ ಮೊದಲು ವಜುಬಾಯಿ ವಾಲಾ, ರಾಜ್‌ಕೋಟ್‌ನ ಮೇಯರ್ ಆಗಿ, 7 ಬಾರಿ ಎಂಎಲ್‌ಎ ಆಗಿ, ಕ್ಯಾಬಿನೆಟ್ ದರ್ಜೆಯ ಸಚಿವರಾಗಿ, ಗುಜರಾತ್‌ನಲ್ಲಿ ಬಿಜೆಪಿ ರಾಜ್ಯಾ ಧ್ಯಕ್ಷರಾಗಿ ಕೆಲಸ ಮಾಡಿದ್ದವರು. ಅಲ್ಲದೆ ಗುಜರಾತ್ ಅಸೆಂಬ್ಲಿಯಲ್ಲಿ ದಾಖಲೆಯ 18 ಬಾರಿ ಬಜೆಟ್ ಮಂಡಿಸಿದವರು, ಗುಜರಾತ್ ವಿಧಾನಸಭಾಧ್ಯಕ್ಷರಾಗಿ ಕೆಲಸ ಮಾಡಿದವರು, ಎಮರ್ಜೆನ್ಸಿ ಅವಧಿಯಲ್ಲಿ 11 ತಿಂಗಳ ಕಾರಾಗ್ರಹವಾಸವನ್ನೂ ಅನುಭವಿಸಿದವರು. ಅಂಥ ವ್ಯಕ್ತಿಯ ಬಗ್ಗೆ ಮಾತಾಡುವಾಗ ಗುಹಾ, Vajubhai Vala had no reputation to lose to begin with, but by acting as he has... ಎಂದು ಹೇಳುತ್ತಾನೆಂದರೆ ಆತನ ಶೂನ್ಯ ರಾಜಕೀಯಜ್ಞಾನ ಮತ್ತು ಪರಮಾವಧಿ ಅಹಂಕಾರ ಪ್ರದರ್ಶನಕ್ಕಿಡಲ್ಪಟ್ಟಿದೆ ಎಂದೇ ಭಾವಿಸಬೇಕಲ್ಲವೆ?

ವಿಜ್ಞಾನದ ಬಗ್ಗೆಯೂ ಈತನಿಗೆ ಗೌರವವಿಲ್ಲ

ಭಾರತೀಯ ವಿಜ್ಞಾನ ಸಂಸ್ಥೆಯ ಸತೀಶ್ ಧವನ್ ಪೀಠದಂಥ ಒಂದು ಉನ್ನತ ಸ್ಥಾನಕ್ಕೆ ಪ್ರಾಧ್ಯಾಪಕರಾಗಿ ಬರುವವರು ಪ್ರಥಮತಃ ವಿಜ್ಞಾನಿಗಳಾಗಿರಬೇಕು ಎಂಬುದು ಮೊದಲ ಅಗತ್ಯ.

ಆದರೆ ವಿಜ್ಞಾನಿ ಆಗಿರುವುದು ಅಂತಿರಲಿ; ಪತ್ರಿಕೆಗಳಲ್ಲಿ ಬಂದ ವಿಜ್ಞಾನ ವರದಿಗಳನ್ನು ಕೂಡ ಸರಿಯಾಗಿ ಓದಿ ಅರ್ಥೈಸಿಕೊಳ್ಳಲಾರದ ವ್ಯಕ್ತಿ ಗುಹಾ! ಅದೊಮ್ಮೆ ವಿಶ್ವ ಆರೋಗ್ಯ ಸಂಸ್ಥೆ ಬಿಡುಗಡೆಗೊಳಿಸಿದ ವರದಿಯಲ್ಲಿ ಜಗತ್ತಿನ ವಾಯುಮಲಿನ ನಗರಗಳ ಪಟ್ಟಿಯಲ್ಲಿ ದೆಹಲಿಯೂ ಇದೆ ಎಂದು ಹೇಳಲಾಗಿತ್ತು. ಅದನ್ನು ದೆಹಲಿಯೇ ಜಗತ್ತಿನ ಅತಿ ಮಲಿನ ನಗರ ಎಂದು ಓದಿಕೊಂಡ ಗುಹಾ ಅದರ ಮೇಲೇ ಒಂದು ಲೇಖನ ಬರೆದ!

ಇನ್ನು, ಈತನ ಮೋದಿದ್ವೇಷ ಜಗದ್ವಿಖ್ಯಾತ. ಮೋದಿ ಏನನ್ನೇ ಹೇಳಲಿ, ಮಾಡಲಿ, ಅದಕ್ಕೊಂದು ವಿರುದ್ಧಾರ್ಥ ಕಟ್ಟಿ ಮೋದಿಯನ್ನು ಗೇಲಿ ಮಾಡುವುದು, ನಾಲ್ಕು ಜನರ ಚಪ್ಪಾಳೆ ಗಿಟ್ಟಿಸುವ ಏಕಮಾತ್ರ ಉದ್ದೇಶದಿಂದ ಬಾಯಿಗೆ ಬಂದಂತೆ ಮಾತಾಡುವುದು ಈತನ ಚಟ. ಒಂದು ಸಮಾರಂಭದಲ್ಲಿ ಮೋದಿಯವರು, ಜಗತ್ತಿಗೆ ಪ್ಲಾಸ್ಟಿಕ್ ಸರ್ಜರಿಯನ್ನು ಕೊಟ್ಟದ್ದು ಭಾರತ ಎಂದು ಕೊಟ್ಟ ಹೇಳಿಕೆಯೇ ಸಾಕಾಯಿತು, ಅದನ್ನಿಟ್ಟುಕೊಂಡು ಗುಹಾ ಥಾನು ಥಾನು ಬರೆದುಹಾಕಿದ. ಇಂಥ ಹೇಳಿಕೆಯಿಂದ ಭಾರತೀಯರು ಮುಖ ತಗ್ಗಿಸುವಂತಾಗಿದೆ; ಈ ದೇಶದಲ್ಲಿ ಬೌದ್ಧಿಕತೆ ಅಪಾಯದಲ್ಲಿದೆ; ಬುದ್ಧಿಜೀವಿಗಳಿಗೆ ಉಸಿರೆತ್ತದಂಥ ವಾತಾವರಣ ಸೃಷ್ಟಿಯಾಗಿದೆ; ದೇಶದ ಪ್ರಮುಖ ಶಿಕ್ಷಣ/ಸಂಶೋಧನ ಕೇಂದ್ರಗಳಲ್ಲಿ ಇಂಟಲೆಕ್ಚುಯಲ್ ಅಲ್ಲದ ಬಲಪಂಥೀ ಯರೇ ತುಂಬಿಕೊಳ್ಳುತ್ತಿದ್ದಾರೆ; ಈ ದೇಶ ಹೀಗೆ ಮುಂದುವರಿದರೆ ವಿನಾಶವಾಗುತ್ತದೆ ಎಂದು ಬರೆದ. ಕೊಲಂಬಿಯಾ ವಿಶ್ವವಿದ್ಯಾಲಯದ ವೈದ್ಯವಿಜ್ಞಾನ ವಿಭಾಗದ ವೆಬ್ ಪುಟದಲ್ಲಿ ಬರೆದಿರುವ ಸಾಲುಗಳನ್ನು ನೋಡಿ: ಪ್ಲಾಸ್ಟಿಕ್ ಸರ್ಜರಿ ಇತ್ತೀಚಿನ ಆವಿಷ್ಕಾರ ಎಂದು ಭಾವಿಸಿದ್ದೀರಾ? ಅದಕ್ಕೆ ಎರಡೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಜಗತ್ತಿನಲ್ಲಿ ಮೊದಲ ಪ್ಲಾಸ್ಟಿಕ್ ಸರ್ಜರಿ ನಡೆಸಿದ್ದು ಕ್ರಿಸ್ತಪೂರ್ವ 6ನೇ ಶತಮಾನದಲ್ಲಿ ಭಾರತದಲ್ಲಿ ಬದುಕಿದ್ದ ಸುಶ್ರುತ ಎಂಬ ವೈದ್ಯ. ಆತ ಶಸ್ತ್ರಚಿಕಿತ್ಸಾ ವಿಜ್ಞಾನದ ಪಿತಾಮಹ. ಆತನ ಸಂಹಿತೆಯಲ್ಲಿ 1100 ರೋಗಗಳ ಹೆಸರುಗಳನ್ನು ಉಲ್ಲೇಖಿಸಲಾಗಿದೆ ಮಾತ್ರವಲ್ಲ ಆ ರೋಗಗಳ ಗುಣಲಕ್ಷಣಗಳನ್ನು ಪಟ್ಟಿ ಮಾಡಲಾಗಿದೆ ಮತ್ತು ರೋಗನಿದಾನ, ಪರಿಹಾರಗಳನ್ನೂ ಸೂಚಿಸಲಾಗಿದೆ. ಪ್ಲಾಸ್ಟಿಕ್ ಸರ್ಜರಿಯ ಮೂಲಕ ದೇಹದ ಕೆಲವು ಭಾಗಗಳನ್ನು ಸರಿಪಡಿಸಿಕೊಳ್ಳಬಹುದು ಎಂಬುದನ್ನು ಸ್ವತಃ ಪ್ರಾಯೋಗಿಕವಾಗಿ ಪರೀಕ್ಷೆ ಮಾಡಿ ಜಗತ್ತಿಗೆ ಕೊಟ್ಟ ವೈದ್ಯ ಸುಶ್ರುತ!

ಮೋದಿಯನ್ನು ಕಂಡರೆ

ಮೈಯೆಲ್ಲ ಕೆಂಡ!

ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡರೆ ಮೈಯೆಲ್ಲ ಪರಚಿಕೊಳ್ಳುವ ದೊಡ್ಡ "ಇಂಟಲೆಕ್ಚುಯಲ್" ವರ್ಗವೇ ನಮ್ಮ ದೇಶದಲ್ಲಿ ಇದೆಯಲ್ಲ? ಅದರ ಮುಂಚೂಣಿಯಲ್ಲಿರುವ ಪರಚಾಟಗಳಲ್ಲಿ ಗುಹಾ ಕೂಡ ಸೇರುತ್ತಾನೆ. ಈತನಿಗೆ ಮೋದಿಯ ಮೇಲೆ ಅದೆಂಥ ದ್ವೇಷ, ಸಿಟ್ಟು, ಉರಿ ಇದೆ ಎಂಬುದನ್ನು ನೋಡಬೇಕಾದರೆ ಕರಣ್ ಥಾಪರ್ ಜೊತೆ ಈತನ ಸಂದರ್ಶನದ ತುಣುಕುಗಳನ್ನು ನೋಡಬೇಕು. ಪ್ರಧಾನಿ ತನ್ನ ಹೆಸರು ಬರೆದುಕೊಂಡ ಕೋಟ್ ತೊಡುತ್ತಾರೆ;

ಅವರಿಗೆ ತನ್ನ ಮೇಲೇ ಅತಿ ವ್ಯಾಮೋಹ; ಅವರು ಶ್ರೀರಾಮನನ್ನು ಕೂಡ ತನ್ನ ಸಮಾನ ಎಂದು ಭಾವಿಸುವುದಿಲ್ಲ ಎಂಬುದು ಗುಹಾ ಮಾತು. ದುರಂತವೆಂದರೆ ದೊಡ್ಡ ಬಾಯಲ್ಲಿ ಈತ ಗೊಳ ಗೊಳ ಎನ್ನುತ್ತ ಮೋದಿಯನ್ನು ವಾಚಾಮಗೋಚರ ಬಯ್ಯುತ್ತಿದ್ದರೆ ಅದನ್ನು ಆಸ್ವಾದಿಸುವ, ಜೋರಾಗಿ ಚಪ್ಪಾಳೆ ತಟ್ಟಿ ಹುರಿದುಂಬಿಸುವ ತರುಣ ವರ್ಗ ಕೂಡ ಈ ದೇಶದಲ್ಲಿದೆ! ದೆಹಲಿಯಲ್ಲಿ ವಾಯುಮಾಲಿನ್ಯ ಜಾಸ್ತಿಯಾಗಿದೆ ಎಂಬ ವರದಿ ಪ್ರಕಟವಾಗಿದ್ದ ಸಮಯದಲ್ಲಿ ಗುಹಾ ಬರೆದ ಟ್ವೀಟ್ ಹೀಗಿತ್ತು.

ಪ್ರಧಾನಿಗಳು ದೇಶದ ರಾಜಧಾನಿಯಲ್ಲಿ ಸಮಯ ಕಳೆಯುವುದೇ ಅಪರೂಪ (ಅರ್ಥಾತ್ ವಿದೇಶ ಸುತ್ತುವುದರಲ್ಲೇ ಸಮಯ ಕಳೆಯುತ್ತಾರೆ). ಹಾಗಾಗಿ ದೆಹಲಿಯ ವಾಯುವಿನ ಗುಣಮಟ್ಟ ಕುಸಿದಿದೆ! ನಂಬಿದರೆ ನಂಬಿ, ಗುಣಗ್ರಾಹಿತ್ವವಿಲ್ಲದ ಈ ಅಯೋಗ್ಯನಿಗೆ ಯುಪಿಎ ಸರಕಾರ 2009ರಲ್ಲಿ ಪದ್ಮಭೂಷಣ ಕೊಟ್ಟಿತ್ತು!.

ಇದೀಗ ಗುಹಾ ಯಾವ ಸಂಸ್ಥೆಯಲ್ಲಿ ಪ್ರಾಧ್ಯಾಪಕನಾಗಿ ನೇಮಕಗೊಂಡಿದ್ದಾನೋ ಅದೇ ಸಂಸ್ಥೆಯ ನಿರ್ದೇಶಕರಾಗಿ ಹತ್ತು ವರ್ಷ ಆಡಳಿತ ನಡೆಸಿದ್ದ ಪ್ರಸಿದ್ಧ ವಿಜ್ಞಾನಿ ಸಿ.ಎನ್.ಆರ್. ರಾವ್ ಕುರಿತು ಆಕ್ಷೇಪಗಳ ಸುರಿಮಳೆಯನ್ನೇ ಹರಿಸಿದ್ದ ಗುಹಾ. ಐಐಎಸ್‌ಸಿಯ ಮುಂಭಾಗದಲ್ಲಿ ಸಿ.ಎನ್.ಆರ್. ರಾವ್ ಹೆಸರಿನ ಸರ್ಕಲ್ ಅನ್ನು ಉದ್ಘಾಟಿಸಲು ಸ್ವತಃ ರಾವ್ ಅವರು ಬಂದಿದ್ದರು. ಅದು ನಾರ್ಸಿಸಮ್‌ನ ಮಾದರಿಯಂತೆ ಕಾಣಿಸಿತು ಗುಹಾಗೆ. ರಾವ್ ಅವರನ್ನು ಬಯ್ಯಲೆಂದೇ ಒಂದು ಲೇಖನ ಮೀಸಲಾಯಿತು. ಆತ್ಮರತಿಯ ಕುರಿತ ಆ ಲೇಖನದಲ್ಲಿ ರಾವ್, ಮೋದಿ ಇಬ್ಬರೂ ಬಂದುಹೋದರು. ಗುಹಾನ ಅರ್ಥವಿಲ್ಲದ ಪ್ರಲಾಪದ ಸ್ಯಾಂಪಲ್ ನೋಡಿ: ಮೋದಿಯವರ ಆಡಂಬರದ ಆತ್ಮರತಿಯ ಪ್ರದರ್ಶನ ಪ್ರಬಲ ಮತ್ತು ಯಶಸ್ವಿ ಭಾರತೀಯ ಪುರುಷರು ಸಾರ್ವಜನಿಕವಾಗಿ ಹೇಗೆ ಕಾಣಿಸಿಕೊಳ್ಳಬಯಸುತ್ತಾರೆ ಎಂಬುದರ ದ್ಯೋತಕ. ಯಾವ ಸಮಾಜದಲ್ಲಿ ಆಂತರಿಕ ಚೈತನ್ಯ ಮತ್ತು ನಡವಳಿಕೆ ಎರಡೂ ಒಂದೇ ಆಗಿರುತ್ತದೋ ಅಥವಾ ಸದಭಿರುಚಿಯ ತತ್ವಗಳು ಅಂತರ್ಗತವಾಗಿರುತ್ತವೋ ಅಂತಹ ಕಡೆ ಮೋದಿಯಂತವರ ನಡವಳಿಕೆ ಸಂಪೂರ್ಣ ಅಸಮಂಜಸ ಎನಿಸಿಕೊಳ್ಳುತ್ತದೆ. (ಈ ಸಾಲುಗಳಿಗೆ ಏನು ಅರ್ಥ ಎಂಬುದನ್ನು ಸ್ವತಃ ಗುಹಾ ವಿವರಿಸಬೇಕು!) ಒಟ್ಟಲ್ಲಿ ಗುಹಾ ಪ್ರಕಾರ ಮೋದಿ ತನ್ನ ಹೆಸರಿದ್ದ ಸೂಟ್ ತೊಡುವುದು ಮತ್ತು ಸಿ.ಎನ್.ಆರ್. ರಾವ್ ತನ್ನ ಹೆಸರಿನ ಸರ್ಕಲ್‌ನ ಉದ್ಘಾಟನೆ ಮಾಡುವುದು ಎರಡೂ ಆತ್ಮರತಿಯ ಉತ್ತುಂಗ ಉದಾಹರಣೆಗಳು. ಎಂ.ಜಿ. ರೋಡ್ ಪಕ್ಕದಲ್ಲಿ ಅನಿಲ್ ಕುಂಬ್ಳೆ ವೃತ್ತ ಇದೆಯಲ್ಲ; ಅದರ ಬಗ್ಗೆ ಏನು ಹೇಳುತ್ತೀರಿ ಎಂದು ಯಾರೋ ಕೇಳಿದರಂತೆ. ಗುಹಾ ಆಗ ಮೈಗೆಲ್ಲ ಎಣ್ಣೆ ಸವರಿಕೊಂಡು ಏನೋ ಬುದ್ಧಿವಂತಿಕೆಯ ಉತ್ತರ ಕೊಟ್ಟು ತಪ್ಪಿಸಿಕೊಂಡ. ಬಿಸಿಸಿಐನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅದೇ ಕುಂಬ್ಳೆ ಜೊತೆ ಫೋಟೋ ತೆಗೆಸಿಕೊಂಡು, ತಾನು ತುಂಬಾ ಗೌರವಿಸುವ ವ್ಯಕ್ತಿ ಎಂದು ಕುಂಬ್ಳೆಯನ್ನು ಹೊಗಳಿದ್ದನೀತ!

ಪ್ರಕರಣ ದಾಖಲಾದರೂ

ಕ್ಯಾರೇ ಎನ್ನಲಿಲ್ಲ!

ಪ್ರಜಾವಾಣಿಯಲ್ಲಿ "ರೌಡಿಯೇ ಕ್ಲಾಸ್ ಮಾನಿಟರ್ ಆದಾಗ" ಎಂಬ ಶೀರ್ಷಿಕೆಯಲ್ಲಿ ಗುಹಾ ಬರೆದ ಅಂಕಣವೊಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಆಯ್ಕೆಯನ್ನು ಟೀಕಿಸಲೆಂದೇ ಮೀಸಲಾಗಿತ್ತು. ಇದರಲ್ಲಿ, ಆತ, ಯೋಗಿಜಿ ಅಧಿಕಾರಕ್ಕೆ ಬಂದ ಮೇಲೆ ಉತ್ತರ ಪ್ರದೇಶದಲ್ಲಿ ಕೋಮುಗಲಭೆ ಹೆಚ್ಚಾಗಿದೆ, ಮುಸ್ಲಿಮರು ಭಯಗ್ರಸ್ಥರಾಗಿದ್ದಾರೆ, ದಲಿತರನ್ನು ಥಳಿಸಲಾಗುತ್ತಿದೆ, ಲವ್ ಜಿಹಾದ್ ಅನ್ನು ವಿರೋಧಿಸುವ ನೆಪದಲ್ಲಿ ಹಿಂಸಾಚಾರ ನಡೆಯುತ್ತಿದೆ, ಗೋರಕ್ಷಕರ ಹಾವಳಿ ಹೆಚ್ಚಾಗಿದೆ ಎಂದೆಲ್ಲ ಪುಂಖಾನುಪುಂಖವಾಗಿ ಆರೋಪಗಳ ಸುರಿಮಳೆಗೈದಿದ್ದ. ಯಾವುದಕ್ಕೂ ಅಂಕಿ ಅಂಶಗಳ ಆಧಾರ ಇಲ್ಲ! ಎಲ್ಲಿ ಯಾರ ಮೇಲೆ ಹಲ್ಲೆಯಾಗಿದೆ, ಎಲ್ಲಿ ಗಲಾಟೆ ದೊಂಬಿ ನಡೆದಿವೆ ಎಂಬ ಯಾವ ವಿವರವೂ ಇಲ್ಲ! ಆದರೆ ಪ್ರತಿ ವಾಕ್ಯ ಹೆಚ್ಚಾಗಿದೆ, ತೀವ್ರಗೊಂಡಿದೆ, ಅಗಾಧವಾಗಿದೆ, ಅಸಹನೀಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಪದಪುಂಜಗಳಿಂದ ಮುಕ್ತಾಯವಾಗಿತ್ತು ಅಷ್ಟೆ. ಈ ಲೇಖನದಲ್ಲಿ ಗುಹಾ, "ಆದಿತ್ಯನಾಥ ಅವರು ವೇದಿಕೆಯಲ್ಲಿ ಕುಳಿತಿದ್ದ ಮತ್ತೊಂದು ಕಾರ್ಯಕ್ರಮದಲ್ಲಿ, ಮುಸ್ಲಿಂ ಮಹಿಳೆಯರ ಮೃತ ದೇಹಗಳನ್ನು ಗೋರಿಯಿಂದ ಹೊರತೆಗೆದು ಅತ್ಯಾಚಾರ ಮಾಡಬೇಕು ಎಂದು ಹೇಳಿದ್ದರು" - ಎಂಬ ಮಾತನ್ನೂ ಬರೆದಿದ್ದಾನೆ. ಇದೊಂದು ಸುಳ್ಳು ಸುದ್ದಿ ಎಂಬುದು ಆತ ಲೇಖನ ಬರೆಯುವ ಕಾಲಕ್ಕಾಗಲೇ ಅತ್ಯಂತ ಸ್ಪಷ್ಟವಾಗಿ ಸಾಬೀತಾಗಿತ್ತು. ಆದರೂ ಸುಳ್ಳು ಹೇಳುವ ಚಟ ಅವನ ಕೈಯಿಂದ ಆ ಅಪದ್ಧವನ್ನು ಬರೆಸಿತು!

ಗೌರಿ ಲಂಕೇಶ್ ಹತ್ಯೆಯಾದಾಗ, ಅದನ್ನು ಮಾಡಿದವರು ಬಲಪಂಥೀಯರೇ ಎಂದು ಗೋಳಾಡಿದವರಲ್ಲಿ ಗುಹಾ ಕೂಡ ಒಬ್ಬ. ಹತ್ಯೆಯಾಗಿ ಎರಡು ಮೂರು ವರ್ಷಗಳು ಕಳೆದರೂ ಕೊಲೆಗಾರರು ಯಾರು ಎಂಬುದನ್ನು ಸ್ಪಷ್ಟವಾಗಿ ಪತ್ತೆಹಚ್ಚಲು ಇದುವರೆಗೆ ಸಾಧ್ಯವಾಗಿಲ್ಲ. ಪಲೀಸರಿಗೇ ಅಭೇದ್ಯವಾಗುಳಿದಿರುವ ಈ ಪ್ರಕರಣವನ್ನು ಕರ್ನಾಟಕದ ಬುದ್ಧಿಜೀವಿಗಳು ಮಾತ್ರ ಮೊದಲ ವಾರದಲ್ಲೇ ಭೇದಿಸಿಯಾಗಿತ್ತು! ಗೌರಿಯ ಹತ್ಯೆಯ ಹಿಂದೆ ಹಿಂದುತ್ವವಾದಿಗಳಿದ್ದಾರೆ, ಆರೆಸ್ಸೆಸ್ ಮತ್ತು ಬಿಜೆಪಿಯ ಹಿಂದುತ್ವವಾದಿ ಶಕ್ತಿಗಳು ಸೇರಿ ಗೌರಿಯನ್ನು ಕೊಲೆ ಮಾಡಿದ್ದಾರೆ ಎಂಬ ಗುಹಾ ಹೇಳಿಕೆಯನ್ನು ಪ್ರಶ್ನಿಸಿ ಬಿಜೆಪಿ ಮಾನನಷ್ಟ ಮೊಕದ್ದಮೆ ಹೂಡಿತ್ತು. ಮೂರು ದಿನಗಳಲ್ಲಿ ಸ್ಪಷ್ಟೀಕರಣ ಕೊಡದೆ ಹೋದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ಕೊಟ್ಟಿತ್ತು. ಆದರೆ ಗುಹಾ ಎಂಥ ದುರಹಂಕಾರಿ ಎಂದರೆ ತನ್ನ ತಪ್ಪು ಹೇಳಿಕೆಗೆ ಆತ ಸ್ಪಷ್ಟೀಕರಣವನ್ನೂ ಕೊಡಲಿಲ್ಲ; ಆರೆಸ್ಸೆಸ್ ಕ್ಷಮೆಯನ್ನೂ ಕೇಳಲಿಲ್ಲ! ಬಹುಶಃ ಬಿಜೆಪಿಯ ಆರಂಭಶೂರತ್ವದ ಪರಿಚಯ ಆತನಿಗೂ ಚೆನ್ನಾಗಿಯೇ ಇದ್ದಿರಬೇಕು! ಯಾಕೆಂದರೆ ಮೂರು ದಿನಗಳೊಳಗೆ ವಿವರಣೆ ಕೊಡದಿದ್ದರೆ ಮೊಕದ್ದಮೆ ಹೂಡುತ್ತೇವೆ, ಹೋರಾಟ ಮಾಡುತ್ತೇನೆ ಎಂದೆಲ್ಲ ಹೂಂಕರಿಸಿದ್ದ ಅದೇ ಬಿಜೆಪಿ, ಇಂದು ಅದೇ ಗುಹಾ ಐಐಎಸ್‌ಸಿಯಲ್ಲಿ ಪ್ರತಿಷ್ಠಿತ ಹುದ್ದೆಯನ್ನು ಅಲಂಕರಿಸಲು ಅವಕಾಶ ಮಾಡಿಕೊಟ್ಟಿದೆ! ಎಡಪಂಥೀಯ ಎಡಬಿಡಂಗಿಗಳ ಕೈಯಲ್ಲಿ ಹೊಗಳಿಸಿಕೊಳ್ಳಬೇಕು ಎಂಬ ವಿಚಿತ್ರ ಚಟ ಬಿಜೆಪಿಯನ್ನೂ ಬಿಟ್ಟಿಲ್ಲ ಎಂದು ಕಾಣುತ್ತದೆ!

ಐಐಎಸ್‌ಸಿ ನಿರ್ದೇಶಕ ಅನುರಾಗ್ ಕುಮಾರ್ ಅವರಿಗೆ ಕೆಲವೊಂದು ಪ್ರಶ್ನೆಗಳಿವೆ

1. ಸತೀಶ್ ಧವನ್ ಪೀಠಕ್ಕೆ

ಪ್ರಾಧ್ಯಾಪಕರನ್ನು ಆರಿಸುವಾಗ, ಅವರು ವಿಜ್ಞಾನ - ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರಬೇಕು ಎಂದು ತಮ್ಮ ಸಂಸ್ಥೆಯ ನಿಯಮಾವಳಿ ಹೇಳುತ್ತದೆ. ರಾಮಚಂದ್ರ ಗುಹಾ ವಿಜ್ಞಾನದಲ್ಲಿ ಮಾಡಿರುವ ಸಾಧನೆ ಏನು? ಈತನಿಗೆ ವಿಜ್ಞಾನ ಪದವಿ ಇದೆಯೆ?

2. ಸತೀಶ್ ಧವನ್ ಪೀಠಕ್ಕೆ

ಆರಿಸಿಬರುವವರು ವಿಶೇಷವಾಗಿ ಅಂತರಿಕ್ಷ ಕ್ಷೇತ್ರದ ಸಂಶೋಧನೆಗಳನ್ನು ಮಾಡಿರಬೇಕು ಎಂದು ತಮ್ಮ ಸಂಸ್ಥೆಯ ನಿಯಮಾವಳಿಯಲ್ಲಿದೆ. ಗುಹಾ ಮಾಡಿರುವ ಅಂತರಿಕ್ಷ ಸಂಶೋಧನೆ ಯಾವುದು?

3. ಗುಹಾನ ಹೇಳಿಕೆಗಳನ್ನು ಹರವಿಕೊಂಡು ಕೂತರೆ ಮೇಲಿಂದ ಮೇಲೆ ಕಾಣಿಸುವುದು ಆತನ ಭಾರತದ್ವೇಷ. ಒಂದು ನಿರ್ದಿಷ್ಟ ಸಮುದಾಯವನ್ನು, ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನು ನಿಂದಿಸಲೆಂದೇ ಅವನ ಬುದ್ಧಿಮತ್ತೆಯೆಲ್ಲ ಖರ್ಚಾಗಿದೆ. ಐಐಎಸ್‌ಸಿ, ಇಂಥ ಏಕಪಕ್ಷೀಯ ಚಿಂತಕನನ್ನು ಯಾವ ಮಾನದಂಡಗಳನ್ನಿಟ್ಟು ಆಯ್ಕೆ ಮಾಡಿತು?

4. ಯಾವುದೇ ವ್ಯಕ್ತಿ ನಿಮ್ಮ ಸಂಸ್ಥೆಯ ಯಾವುದಾದರೂ ಪೀಠದ ಪ್ರಾಧ್ಯಾಪಕನಾಗಿ ಬಂದ ಮೇಲೆ ಆತನಿಂದ ನಿಮ್ಮ ಸಂಸ್ಥೆಗೆ ಬೌದ್ಧಿಕವಾಗಿ ಒಂದಷ್ಟು ಲಾಭಗಳು ಸಿಗಬೇಕು ಎಂದು ನೀವು ಬಯಸುತ್ತೀರಿ. ಗುಹಾನಿಂದ ನಿಮ್ಮ ಸಂಸ್ಥೆಗೆ ಆಗುವ ಬೌದ್ಧಿಕ, ವೈಚಾರಿಕ ಲಾಭ ಏನು? ಈತ ನಿಮ್ಮ ಸಂಸ್ಥೆಯಲ್ಲಿ ವಿಷಗಾಳಿ ಹರಡುವುದಿಲ್ಲವೆ? ತನ್ನ ಎಂದಿನ ಪೂರ್ವಗ್ರಹೀತ ಚಿಂತನೆಗಳನ್ನು ಬೌದ್ಧಿಕ ವಲಯದಲ್ಲಿ ಹರಡಿ ಚೆನ್ನಾಗಿರುವ ವಾತಾವರಣವನ್ನೂ ಕಲುಷಿತ ಮಾಡಲು ನೀವೇ ಆತನಿಗೆ ಅವಕಾಶ ಕೊಟ್ಟ ಹಾಗಾಗುವುದಿಲ್ಲವೆ?

5. ಐಐಎಸ್‌ಸಿ ಇರುವುದೇ ಮುಖ್ಯವಾಗಿ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವ ಸಲುವಾಗಿ. ಪಿಎಚ್‌ಡಿ ಇಲ್ಲಿ ಪ್ರಾಧ್ಯಾಪಕರಾಗಲು ಇರುವ ಒಂದು ಸಾಮಾನ್ಯ ಅರ್ಹತೆ. ಸತೀಶ್ ಧವನ್ ಪೀಠದಲ್ಲಿ ಕುಳಿತುಕೊಳ್ಳುವ ವ್ಯಕ್ತಿಗಂತೂ ಆ ಅರ್ಹತೆ ಬೇಕೇ ಬೇಕು. ಅದು ಹೇಗೆ ಆ ನಿಯಮವನ್ನು ನೀವು ಈ ಆಯ್ಕೆಯಲ್ಲಿ ಗಾಳಿಗೆ ತೂರಿದಿರಿ?

6. ರಾಮಚಂದ್ರ ಗುಹಾ ಮುಖ್ಯವಾಗಿ ಹೆಸರು ಮಾಡಿರುವುದು ನೆಹರೂ ಮತ್ತು ಗಾಂಧಿಯ ಜೀವನದ ತಿರುಚಿದ ಇತಿಹಾಸ ಬರೆದು. ಇನ್ನೂ ಹೆಚ್ಚೆಂದರೆ ಕ್ರಿಕೆಟ್ ಇತಿಹಾಸಕಾರನಾಗಿ. ಒಬ್ಬ ಸೋಕಾಲ್ಡ್ ಕ್ರಿಕೆಟ್ ಇತಿಹಾಸಕಾರ ನಿಮ್ಮಲ್ಲಿ ಸತೀಶ್ ಧವನ್ ಪ್ರೊಫೆಸರ್ ಆಗಿ ಕೆಲಸ ಮಾಡಬಹುದು ಎಂದಾದರೆ ಐಐಎಸ್‌ಸಿಯ ನಿರ್ದೇಶಕ ಹುದ್ದೆಗೆ ಕೂಡ ಒಬ್ಬ ಕ್ರಿಕೆಟಿಗನನ್ನೋ ಜವಳಿ ಅಂಗಡಿ ಮಾಲೀಕನನ್ನೋ ಸಿನೆಮಾ ತಂತ್ರಜ್ಞನನ್ನೋ ತಂದು ಕೂರಿಸಬಹುದಲ್ಲ? ನಿಮ್ಮ ಹುದ್ದೆಯನ್ನು ಅಂಥ ವ್ಯಕ್ತಿಗಳಿಗೆ ನೀವು ಬಿಟ್ಟುಕೊಡುತ್ತೀರಾ?

7. ಐಐಎಸ್‌ಸಿ ನಡೆಯುತ್ತಿರುವುದು ಸರಕಾರದ ಅನುದಾನದಲ್ಲಿ. ಇಲ್ಲಿ ನಡೆಯುವ ಪ್ರಕ್ರಿಯೆಗಳೆಲ್ಲವೂ ಪಾರದರ್ಶಕವಾಗಿರಬೇಕೆಂದು ಬಯಸುವುದು ದೇಶದ ಪ್ರಜೆಗಳ ಹಕ್ಕು ಸಹ. ರಾಮಚಂದ್ರ ಗುಹಾನನ್ನು ಪ್ರಾಧ್ಯಾಪಕನಾಗಿ ಆರಿಸಿದ ಪ್ರಕ್ರಿಯೆ ಹೇಗಿತ್ತು? ಆ ನಿರ್ಣಯ ಮಂಡಳಿಯಲ್ಲಿ ಇದ್ದವರಾರು? ಗುಹಾನ ಯಾವ ಸಾಧನೆಯನ್ನು ಮಂಡಳಿ ಪರಿಗಣಿಸಿತು? ಗುಹಾ ಆಯ್ಕೆಯನ್ನು ಅಂತಿಮಗೊಳಿಸಿದವರು ಯಾರು? ಸಂಭಾವ್ಯ ಪ್ರಾಧ್ಯಾಪಕರ ಪಟ್ಟಿಯಲ್ಲಿ ಎಷ್ಟು ಹೆಸರಿತ್ತು? ಯಾರನ್ನು ಬದಿಗಿಟ್ಟು ನೀವು ಗುಹಾನನ್ನು ಆರಿಸಿದಿರಿ? ಇವನ್ನೆಲ್ಲ ಜನರ ಮುಂದಿಡುವುದು ನಿಮ್ಮ ಕರ್ತವ್ಯ ಎಂದು ನಿಮಗೆ ಅನ್ನಿಸಿಲ್ಲವೆ?

8. ಸತೀಶ್ ಧವನ್ ಪ್ರಾಧ್ಯಾಪನ ಪೀಠಕ್ಕೆ ಆಯ್ಕೆಯಾಗುವ ವ್ಯಕ್ತಿಗಳಿಗೆ ಸಂಸ್ಥೆ ಕೊಡುವ ವೇತನ, ಭತ್ಯೆ, ಇತರ ಸವಲತ್ತುಗಳ ವಿವರ ನೀಡಿ.

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management