Log in
  • ಮುಖಪುಟ
  • ಬೆಂಗಳೂರಿಗೆ ಲಿಂಗನಮಕ್ಕಿ ನೀರು ಮಲೆನಾಡಿನಲ್ಲಿ ಪ್ರತಿಭಟನೆ ಜೋರು

ಬೆಂಗಳೂರಿಗೆ ಲಿಂಗನಮಕ್ಕಿ ನೀರು ಮಲೆನಾಡಿನಲ್ಲಿ ಪ್ರತಿಭಟನೆ ಜೋರು

ಪ್ರೊ. ಬಿ.ಎಂ. ಕುಮಾರಸ್ವಾಮಿ, ಪರಿಸರ-ಆರ್ಥಿಕತಜ್ಞರು

ಲಿಂಗನಮಕ್ಕಿ ಜಲಾಶಯದ ಶರಾವತಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಯನ್ನು ಘೋಷಿಸುವ ಮೂಲಕ ದೋಸ್ತಿ ಸರ್ಕಾರದ ಉಪಮುಖಮಂತ್ರಿ ಡಾ. ಪರಮೇಶ್ವರ, ಶಿವಮೊಗ್ಗ ಜಿಲ್ಲೆಗೆ ವಾಸ್ತವವಾಗಿ ಬೆಂಕಿ ಹಚ್ಚಿಬಿಟ್ಟಿದ್ದಾರೆ. ಸರ್ಕಾರದ ಯೋಜನೆ ಪ್ರಕಟವಾಗುತ್ತಿದ್ದಂತೇ, ಶಿವಮೊಗ್ಗ ಜಿಲ್ಲೆಯ ಜನ ಕೊತಕೊತ ಕುದಿಯುತ್ತಿದ್ದಾರೆ. ಪ್ರತಿನಿತ್ಯ 2-3 ಸಂಘಟನೆಗಳ ಜನ ಯೋಜನೆಯನ್ನು ವಿರೋಧಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಪ್ರತಿಭಟನೆ ಭುಗಿಲೆದ್ದಿದೆ. ಕಾಂಗ್ರೆಸ್ ಹಾಗೂ ಜೆ.ಡಿ.ಎಸ್. ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು, ರೈತ ಸಂಘಟನೆ, ವಕೀಲರು, ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ವಿವಿಧ ಕೋಮುಗಳ ಮಠಾಧೀಶರು - ಎಲ್ಲರೂ ಒಕ್ಕೊರಲಿನಿಂದ ಲಿಂಗನಮಕ್ಕೆ ನೀರನ್ನು 400 ಕಿ.ಮೀ. ದೂರದ ಬೆಂಗಳೂರಿನ, ತೀರದ ದಾಹವನ್ನು ತೀರಿಸಲು ಕೊಂಡೊಯ್ಯುವ ದೋಸ್ತಿ ಸರ್ಕಾರದ ಯೋಜನೆಯನ್ನು ಒಮ್ಮತದಿಂದ ತಿರಸ್ಕರಿಸಿದ್ದಾರೆ ಹಾಗೂ ಪ್ರತಿಭಟಿಸುತ್ತಿದ್ದಾರೆ.

12000 ಕೋಟಿ ರೂ.

ಇಂಥ ಅವೈಜ್ಞಾನಿಕ ಹಾಗೂ ಮೂರ್ಖತನದ ಯೋಜನೆಗೆ 12000 ಕೋಟಿ ರೂ. ವೆಚ್ಚಮಾಡಲು ಸರ್ಕಾರ ಸಿದ್ಧವಾಗಿರುವುದು, ತೆರಿಗೆದಾರರ ಹಣದ ಬಗ್ಗೆ ದೋಸ್ತಿಸರ್ಕಾರಕ್ಕೆ ಎಂಥ ತಿರಸ್ಕಾರವಿದೆ ಎಂಬುದನ್ನು ಸಾಬೀತುಪಡಿಸುತ್ತದೆ.

ಶಿವಮೊಗ್ಗ ಜಿಲ್ಲೆಯ ತೀರ್ಥಳ್ಳಿ ತಾಲ್ಲೂಕಿನ ಅಂಭುತೀರ್ಥ ಎಂಬ ಕ್ಷೇತ್ರದಲ್ಲಿ ಪುಟ್ಟದಾಗಿ ಹುಟ್ಟುವ ಶರಾವತಿ ನದಿ ಪಶ್ಚಿಮಘಟ್ಟಗಳಲ್ಲಿ ಪಶ್ಚಿಮಾಭಿಮುಖವಾಗಿ ಹರಿದು ಹೊನ್ನಾವರದ ಬಳಿ ಅರಬ್ಬಿ ಸಮುದ್ರ ಸೇರುತ್ತದೆ. ಕೇವಲ 128 ಕಿ,ಮೀ. ಉದ್ದದ ಈ ಪುಟ್ಟ ನದಿ, ವಿಶ್ವವಿಖ್ಯಾತ ಜೋಗಜಲಪಾತವನ್ನು ಸೃಷ್ಟಿಸಿದೆ. ಸಾಗರ ತಾಲ್ಲೂಕಿನ ಲಿಂಗನಮಕ್ಕಿ ಎಂಬ ಗ್ರಾಮದ ಬಳಿ ಶರಾವತಿ ನದಿಗೆ ಅಡ್ಡಲಾಗಿ ಒಂದು ಬೃಹತ್ ಡ್ಯಾಂ ನಿರ್ಮಿಸಿದ್ದು 1964 ರಲ್ಲಿ. ಇದೇ ಲಿಂಗನಮಕ್ಕಿ ಜಲಾಶಯ. ಇದರ ಗರಿಷ್ಟ ಜಲಸಂಗ್ರಹಣಾ ಸಾಮರ್ಥ್ಯ 151 Tm Cft. ಭರ್ತಿಯಾದಾಗ ನೀರಿನ ಎತ್ತರ ಸಮುದ್ರಮಟ್ಟದಿಂದ 1819 ಅಡಿ ಆಗುತ್ತದೆ.

*ಲಿಂಗನಮಕ್ಕಿ ಯೋಜನೆ, ಒಂದು ಜಲವಿದ್ಯುತ್‌ಯೋಜನೆ. ಇಲ್ಲಿನ ನೀರನ್ನು ಆ ಸೈಟ್‌ನಲ್ಲಿರುವ ವಿದ್ಯುದಾಗಾರಕ್ಕೆ ಹರಿಸಿ, ಜಲವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ. ಲಿಂಗನಮಕ್ಕಿ ಯೋಜನೆಯು ಅತ್ಯಂತ ಅಗ್ಗದ ದರದಲ್ಲಿ ವರ್ಷಕ್ಕೆ 5000 ಮಿಲಿಯನ್ ಯೂನಿಟ್ಸ್ ವಿದ್ಯುತ್ ಉತ್ಪಾದಿಸುತ್ತದೆ. ಕರ್ನಾಟಕದ ಒಟ್ಟು ವಿದ್ಯುತ್‌ಪೂರೈಕೆಯಲ್ಲಿ ಶೇ. 15 ರಷ್ಟು ಭಾಗ ಶರಾವತಿ ಜಲವಿದ್ಯುತ್ ಯೋಜನೆಯಿಂದ ಬರುತ್ತಿದೆ. ಲಿಂಗನಮಕ್ಕಿ ಯೋಜನೆಯು ಜಲವಿದ್ಯುತ್‌ಯೋಜನೆ. ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಖಂಡಿತಾ ಅಲ್ಲ.

ಬೆಂಗಳೂರಿನ ಜಲಪೂರೈಕೆ ಮತ್ತು ಒಳಚರಂಡಿ (BWSSB) ಮಂಡಳಿಯ ಮಾಜಿ ಅಧ್ಯಕ್ಷರಾದ B.N. ತ್ಯಾಗರಾಜ ಸಮಿತಿಯು 2014 ರಲ್ಲಿ ಕೊಟ್ಟ ವರದಿಯಲ್ಲಿ ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಲಿಂಗನಮಕ್ಕಿ ಜಲಾಶಯದಿಂದ 30 ಟಿ.ಎಂ.ಸಿ. ನೀರನ್ನು ಬೆಂಗಳೂರಿಗೆ ಹರಿಸುವ ಸಲಹೆಮಾಡಿತು. ಮೊದಲ ಹಂತದಲ್ಲಿ 10 ಟಿ.ಎಂ.ಸಿ. ನೀರನ್ನು ಎತ್ತಲಾಗುತ್ತದೆ. ಇದು ಸಮಸ್ಯೆಯ ಪ್ರಾರಂಭ. ಶರಾವತಿ ನೀರನ್ನು ಬೆಂಗಳೂರಿಗೆ ಕೊಂಡೊಯ್ಯುವುದನ್ನು ಒಮ್ಮತದಿಂದ ಜನ ತಿರಸ್ಕರಿಸುವುದರ ಹಿಂದೆ ಹಲವು ಪ್ರಬಲ ಕಾರಣಗಳಿವೆ. ಅವನ್ನು ನೋಡೋಣ.

ವಿದ್ಯುತ್ ಉತ್ಪಾದನೆಗೆ ಬಳಸಬೇಕಾದ ಶರಾವತಿ ನೀರನ್ನು ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಗಾಗಿ (ವರ್ಷಕ್ಕೆ 30 ಟಿ.ಎಂ.ಸಿ. - ಮೊದಲ ಹಂತದಲ್ಲಿ 10 ಟಿ.ಎಂ.ಸಿ.) ಬಳಸಿಕೊಂಡರೆ, ವಿದ್ಯುತ್‌ಉತ್ಪಾದನೆಗೆ ತೀವ್ರವಾದ ಧಕ್ಕೆ ಉಂಟಾಗುವುದಿಲ್ಲವೆ? ಇದರಿಂದ ರಾಜ್ಯದಲ್ಲಿ ವಿದ್ಯುತ್‌ಅಭಾವ ಮತ್ತಷ್ಟು ಬಿಗಡಾಯಿಸುವುದಿಲ್ಲವೆ ?

*ಲಿಂಗನಮಕ್ಕಿ ಜಲಾಶಯ ನಿರ್ಮಿಸಿದಾರಭ್ಯ ಸಾಗರ,ತೀರ್ಥಳ್ಳಿ, ಹೊಸನಗರ ತಾಲ್ಲೂಕುಗಳಲ್ಲಿ ಮಳೆಪ್ರಮಾಣ ಒಂದೇ ಸಮನೆ ಕಡಿಮೆಯಾಗುತ್ತಾ ಇದೆ. ಜಲಾಶಯದ 54 ವರ್ಷಗಳ ಇತಿಹಾಸದಲ್ಲಿ ಅದು ಪೂರಾ ತುಂಬಿದ್ದು ಕೇವಲ 15 ಬಾರಿ. ಈಚಿನ ವರ್ಷಗಳಲ್ಲಂತೂ ಮಲೆನಾಡು ಅಕ್ಷರಷಃ ಬರದ ನಾಡಾಗಿದೆ. ತೀರ್ಥಹಳ್ಳಿ, ಸಾಗರ ಮತ್ತು ಹೊಸನಗರ ತಾಲ್ಲೂಕುಗಳು ಶರಾವತಿಯ ಪ್ರಮುಖ ಜಲಾನಯನ ಪ್ರದೇಶಗಳು. ಈ ತಾಲ್ಲೂಕುಗಳನ್ನು ಈಚೆಗೆ ಸರ್ಕಾರವೇ ಬರಪೀಡಿತ ಎಂದು ಘೋಷಿಸಿದೆ. ಬೋರ್‌ವೆಲ್‌ಗಳಲ್ಲಿ ನೀರು ಬರುತ್ತಿಲ್ಲ. ಟ್ಯಾಂಕರ್‌ಗಳಲ್ಲಿ ನೀರು ಪೂರೈಸಬೇಕಾದ ದೈನ್ಯ ಸ್ಥಿತಿ ಶಿವಮೊಗ್ಗ ಜಿಲ್ಲೆಗೆ ಬಂದಿದೆ. ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರೀತ್ಯಗಳ ಈ ಕಾಲದಲ್ಲಿ ಲಿಂಗನಮಕ್ಕಿ ತುಂಬುವುದು ಅಸಾಧ್ಯವೆಂದೇ ಕಾಣುತ್ತಿದೆ. ಶರಾವತಿ ನದಿಯೇ ಒಣಗಿ ಹೋಗುತ್ತಿರುವಾಗ ಬೆಂಗಳೂರಿಗೆ ನೀರು ಕೊಡುವುದು ಎಲ್ಲಿಂದ? ಈ ಯೋಜನೆ ಏನಾದರೂ ಕಾರ್ಯಗತವಾದಲ್ಲಿ,ಲಿಂಗನಮಕ್ಕಿಯಲ್ಲಿ ನೀರೂ ಇಲ್ಲ, ವಿದ್ಯುತ್ತೂ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗುವುದು ಶತಸಿದ್ಧ.

*ಸಮುದ್ರಮಟ್ಟದಿಂದ ಸುಮಾರು 1600 ಅಡಿ ಎತ್ತರದಲ್ಲಿರುವ ಲಿಂಗನಮಕ್ಕಿ ಜಲಾಶಯದಿಂದ 3100 ಅಡಿ ಎತ್ತರದಲ್ಲಿರುವ ಬೆಂಗಳೂರಿಗೆ ನೀರು ಕೊಂಡೊಯ್ಯಲು 1500 ಅಡಿ ಎತ್ತರಕ್ಕೆ ಎತ್ತಿ 400 ಕಿ.ಮೀ. ದೂರಕ್ಕೆ ತಳ್ಳಬೇಕಾಗುತ್ತದೆ. ಲಿಂಗನಮಕ್ಕಿಯಲ್ಲಿ ಉತ್ಪಾದನೆಯಾಗುವ ಬಹುಪಾಲು ವಿದ್ಯುತ್ತು ಈ ಒಂದು ಉದ್ದೇಶಕ್ಕೇ ಬೇಕಾದೀತು. ಈ ವಿದ್ಯುತ್ತನ್ನೇ ನಂಬಿರುವ ರೈತರು, ಉದ್ದಿಮೆದಾರರು ಹಾಗೂ ಗೃಹಬಳಕೆದಾರರ ಗತಿ ಏನು?

ವಿದ್ಯುತ್ ಅಭಾವದಿಂದ ಈಗಾಗಲೇ ಎತ್ತಿನಹೊಳೆ ಯೋಜನೆ ಕುಂಟುತ್ತಾ ಸಾಗಿದೆ.

ಪರಿಸರದ ದೃಷ್ಟಿಯಿಂದಲಂತೂ ಈ ಯೋಜನೆ ಅನಾಹುತಕಾರಿ. ಪೈಪ್‌ಲೈನ್ ಅಳವಡಿಸಲು ಶಿವಮೊಗ್ಗ ಚಿಕ್ಕಮಗಳೂರು ಮತ್ತು ಹಾಸನದಂಥ *ಪಶ್ಚಿಮಘಟ್ಟಗಳ ಜಿಲ್ಲೆಗಳಲ್ಲಿ ವ್ಯಾಪಕ ಅರಣ್ಯನಾಶಕ್ಕೆ ಕಾರಣವಾಗುತ್ತದೆ. ಈಗಾಗಲೇ, ರಸ್ತೆ ಅಗಲೀಕರಣ, ರೈಲ್ವೇಮಾರ್ಗ ನಿರ್ಮಾಣ, ವಿದ್ಯುತ್ ಸಾಗಾಣಿಕೆ ಇವೇ ಮುಂತಾದ ಯೋಜನೆಗಳಿಗಾಗಿ ಲಕ್ಷಾಂತರ ಮರಗಳ ಮಾರಣಹೋಮ ನಡೆಯುತ್ತಿದೆ. ಸಾಲುಮರದ ತಿಮ್ಮಕ್ಕ ನೆಟ್ಟು ಬೆಳೆಸಿದ ನೂರಾರು ಮರಗಳನ್ನು ಕಡಿದುಹಾಕಲು ಯೋಜನೆ ಸಿದ್ಧವಾಗಿದೆ ಎಂಬ ಆಘಾತಕಾರೀ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಈ ಯೋಜನೆ ಪಶ್ಚಿಮ ಘಟ್ಟಗಳಲ್ಲಿ ಅಳಿದುಳಿದ ನೈಸರ್ಗಿಕ ಅರಣ್ಯಗಳನ್ನೂ ನುಂಗಿ ನೀರುಕುಡಿಯುತ್ತದೆ. ಎತ್ತಿನಹೊಳೆ ಯೋಜನೆ ಈಗಾಗಲೇ ಬೃಹತ್‌ಪ್ರಮಾಣದ ಅರಣ್ಯ ನಾಶಮಾಡಿದೆ. ಹೀಗಾಗಿ ಕರ್ನಾಟಕಕ್ಕೆ ಭವಿಷ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣವಾಗುವುದಿಲ್ಲವೆ ?

* ವಿದ್ಯುತ್ ಉತ್ಪಾದನೆಯಾದ ನಂತರ ವ್ಯರ್ಥವಾಗಿ ಸಮುದ್ರಕ್ಕೆ ಹೋಗುವ ನೀರನ್ನು ಮಾತ್ರ ನಾವು ಬಳಕೆ ಮಾಡಿಕೊಳ್ಳುತ್ತೇವೆ’ ಎಂಬ ಡಾ. ಪರಮೇಶ್ವರ ಅವರ ಹೇಳಿಕೆ ತೀರಾ ಬಾಲಿಶವಾಗಿದೆ. ’ನದಿನೀರು ಸಮುದ್ರಕ್ಕೆ ಹರಿಯುವುದು’ ವ್ಯರ್ಥ ಹೇಗಾಗುತ್ತದೆ. ಬೆಂಗಳೂರಿಗೆ ಹರಿದರೆ ಮಾತ್ರ ಅದು ಸಾರ್ಥಕವಾಗುತ್ತದೆಯೆ? ನದಿನೀರು ಸಮುದ್ರಕ್ಕೆ ಹರಿಯುವುದು ಪ್ರಕೃತಿವ್ಯವಸ್ಥೆ. ಅದು ಜಲಚರಗಳ ಜೀವನಾಧಾರ. ಕರಾವಳಿ ಜಿಲ್ಲೆಗಳ ಮೀನುಗಾರಿಕೆಯ ಆಧಾರ. ಉಪಮುಖ್ಯಮಂತ್ರಿಗಳಿಗೆ ಇಷ್ಟೂ ತಿಳುವಳಿಕೆ ಇಲ್ಲದಿದ್ದರೆ ಹೇಗೆ?

ಎಲ್ಲಾ ಬೃಹತ್‌ಯೋಜನೆಗಳಂತೆ ಈ ಯೋಜನೆಯಲ್ಲೂ ಸಾಮಾಜಿಕ ನ್ಯಾಯ ಎಂಬುದು ಕಾಣೆಯಾಗಿದೆ. 1960-64ರ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಾಗಿ ಸಹಸ್ರಾರು ರೈತರ ಭೂಸ್ವಾ ಧೀನಪಡಿಸಿಕೊಳ್ಳಲಾಯಿತು. ಯೋಜನೆ ಮುಕ್ತಾಯಗೊಂಡು 60 ವರ್ಷಗಳಾದರೂ ಬಹುಪಾಲು ರೈತರಿಗೆ ಪರ್ಯಾಯ ಭೂಮಿ ನೀಡಿಲ್ಲ. 2016 ರಲ್ಲಿ ಅಂದಿನ ಅರಣ್ಯ ಮತ್ತು ಪರಿಸರಖಾತೆ ಕಾರ್ಯದರ್ಶಿಗಳಾಗಿದ್ದ ಮದನಗೋಪಾಲ್, ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ, 60 ವರ್ಷಗಳ ಹಿಂದೆ ಲಿಂಗನಮಕ್ಕಿ ಯೋಜನೆಗೆ ಭೂಮಿ ಕಳೆದುಕೊಂಡವರಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರದ ಬಳಿ ಭೂಮಿ ಎಲ್ಲಿದೆ ಎಂದು ಹುಡುಕಲು ಸಭೆ ನಡೆಸಿದರು. ಮುಂದಿನ ವರ್ಷ ಮದನ್‌ಗೋಪಾಲ್ ನಿವೃತ್ತರಾದರು. ಅದರೊಂದಿಗೆ ಭೂಮಿ ಹಂಚಿಕೆಯ ಕಡತಗಳೂ ಅಟ್ಟ ಸೇರಿದವು. ಶರಾವತಿ ಯೋಜನೆಯ ಲಾಭಗಳನ್ನೆಲ್ಲಾ ಸರ್ಕಾರ ಪಡೆದುಕೊಳ್ಳುತ್ತಿದೆ. ಆದರೆ ಭೂಮಿ ಕಳೆದುಕೊಂಡ ಬಡ ರೈತರಿಗೆ ಪರ್ಯಾಯ ಭೂಮಿ ಕೊಡಲು ಸರ್ಕಾರಕ್ಕೆ 60 ವರ್ಷಗಳಾದರೂ ಸಾಧ್ಯವಾಗಿಲ್ಲ.

* ಲಿಂಗನಮಕ್ಕಿ ನೀರನ್ನು 400 ಕಿ.ಮೀ. ದೂರದ ಬೆಂಗಳೂರಿಗೆ ಕೊಂಡೊಯ್ಯಲು ಎಷ್ಟು ಕೃಷಿ ಭೂಮಿ, ಮನೆ ಮಠಗಳು ಬಲಿಯಾಗುತ್ತವೆಯೋ ಏನೋ? ಅಂಥ ರೈತರಿಗೆ ಪರ್ಯಾಯ ಭೂಮಿ ಕೊಡಲು 100 ವರ್ಷಗಳಾದರೂ ಬೇಡವೆ?

* ಲಿಂಗನಮಕ್ಕಿ ಯೋಜನೆಯ ಇನ್ನೊಂದು ಜ್ವಲಂತ ದುರಂತ ಏನೆಂದರೆ, ಜಲಾಶಯದ ಹಿನ್ನೀರಿನಲ್ಲಿ ಪೂರಾ ಮುಳುಗದ ಕರೂರು ಹೋಬಳಿಯ ತುಮರಿ, ಬ್ಯಾಕೋಡು ಮುಂತಾದ ಗ್ರಾಮಗಳ ದುರಂತ ಕಥೆ. ಈ ಗ್ರಾಮಗಳ ಜನ ತಮ್ಮದಲ್ಲದ ತಪ್ಪಿಗೆ ನರಕಸದೃಶ ಜೀವನವನ್ನು 60 ವರ್ಷಗಳಿಂದಲೂ ಅನುಭಸುತ್ತಿದ್ದಾರೆ. ಅವರು ಸರ್ಕಾರಿ ಕೆಲಸಗಳು, ಶಿಕ್ಷಣ, ವೈದ್ಯಕೀಯ, ವ್ಯಾಪಾರ ಮುಂತಾದ ಎಲ್ಲಾ ಕೆಲಸಗಳಿಗೂ ತಾಲ್ಲೂಕು ಕೇಂದ್ರವಾದ ಸಾಗರಕ್ಕೆ ಲಾಂಚ್‌ನಲ್ಲಿ ಹಿನ್ನೀರು ದಾಟಿಕೊಂಡೇ ಬರಬೇಕು. ಅದಕ್ಕೆ ಅವರು ಹಣ ತೆರಬೇಕು. ಸಂಜೆ 4ಕ್ಕೆ ಲಾಂಚ್‌ಸೇವೆ ಮುಕ್ತಾಯವಾಗುತ್ತದೆ. ಅಷ್ಟರೊಳಗೆ ಮನೆತಲುಪಿಕೊಳ್ಳದಿದ್ದರೂ, ಇಡೀ ರಾತ್ರಿ ಮನೆ ತಲಪುವಂತಿಲ್ಲ.

ಈಚೆಗೆ ಕೆಲವು ವರ್ಷಗಳಿಂದ ಸಿಗಂದೂರು ಭಾರೀ ಯಾತ್ರಾಸ್ಥಳವಾಗಿರುವುದರಿಂದ ಲಾಂಚ್‌ನಲ್ಲಿ ಯಾತ್ರಾರ್ಥಿಗಳ ನೂಕುನುಗ್ಗಲು ಹೆಚ್ಚಾಗಿರುವುದರಿಂದ ಕರೂರು ಹೋಬಳಿಯ ಗ್ರಾಮಸ್ಥರಿಗೆ ಹೊಳೆದಾಟುವುದು ಮತ್ತೂ ತ್ರಾಸದಾಯಕವಾಗಿದೆ.

ಹೊಳೆದಾಟಲು ಒಂದು ಸೇತುವೆ ಕಟ್ಟಿಕೊಟ್ಟರೆ, ಈ ಎಲ್ಲಾ ಮುಳುಗಡೆದಾರರ ಬವಣೆಗಳಿಗೆ ಪರಿಹಾರ ದೊರೆಯುತ್ತದೆ. ಆದರೆ ರಾಜ್ಯಸರ್ಕಾರಕ್ಕೆ ಈ ಬಗ್ಗೆ ತೀರಾ ನಿರಾಸಕ್ತಿ. ಸಮಸ್ಯೆ ಇಂದಿಗೂ ಮುಂದುವರಿದೇ ಇದೆ. ಬೆಂಗಳೂರಿಗೆ ನೀರೊಯ್ಯಲು ಮೊದಲ ಹಂತಕ್ಕೆ 12,000 ಕೋಟಿ ರೂ. ಖರ್ಚುಮಾಡಲು ಸಿದ್ಧವಿರುವ ಸರ್ಕಾರಕ್ಕೆ 200 ಕೋಟಿ ವೆಚ್ಚದ ಕಳಸವಳ್ಳಿ ಸೇತುವೆ ನಿರ್ಮಾಣಕ್ಕೆ ಬಡತನ ಬಂದಿದೆ.

ಮೇಲ್ಕಂಡ ಕಾರಣಗಳಿಗಾಗಿ ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡುಹೋಗುವ ಯೋಜನೆ ಅವೈಜ್ಞಾನಿಕ, ಅಪ್ರಾಯೋಗಿಕ, ಪರಿಸರನಾಶಕ ಹಾಗೂ ಸಮಾಜವಿರೋಧಿ ಯೋಜನೆ. ಇದರಲ್ಲಿ ಯಾವ ವಿವೇಕವೂ ಇಲ್ಲ. ಬದಲಾಗಿ ಮೂರ್ಖತನ ಹಾಗೂ ದುರಾಸೆಯೇ ತುಂಬಿದೆ.

* ಈ ಯೋಜನೆಯಿಂದ, ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೆ, ಇಡೀ ಕರ್ನಾಟಕ, ವಿದ್ಯುತ್ ಅಭಾವಕ್ಕೆ ಸಿಲುಕಬೇಕಾಗುತ್ತದೆ. ಆದ್ದರಿಂದ ಇಡೀ ರಾಜ್ಯದ ಜನ ಈ ರಾಜಕೀಯಪ್ರೇರಿತ ಮೂರ್ಖಯೋಜನೆಯ ವಿರುದ್ಧ ತೀವ್ರವಾಗಿ ಪ್ರತಿಭಟಿಸಬೇಕು.

ಬೆಂಗಳೂರಿನ ನೀರಿನ ಸಮಸ್ಯೆಗೆ ಬೆಂಗಳೂರಿನಲ್ಲೇ ಉತ್ತರ ಹುಡುಕಬೇಕು. ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ ಕಟ್ಟಿಸಿದ ನೂರಾರು ಕೆರೆಗಳನ್ನು ಸಮರದೋಪಾದಿಯಲ್ಲಿ ಒತ್ತುವರಿ ಖುಲ್ಲಾಗೊಳಿಸಿ, ಹೂಳು ತಗೆಸಿ ಸುಭದ್ರಗೊಳಿಸಿ. ಛಾವಣಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಿ. ಬೆಂಗಳೂರಿಗೆ ಬೇಕಾದದ್ದಕ್ಕಿಂತಾ ಹೆಚ್ಚು ನೀರು ದೊರೆಯುತ್ತದೆ. ಇದಕ್ಕೆ 12,000 ಕೋಟಿ ರೂ. ಏನೂ ಬೇಕಾಗಿಲ್ಲ. ಬೇಕಾಗಿರುವುದು ರಾಜಕೀಯ ಇಚ್ಛಾಶಕ್ತಿ. ಅದು ನಿಮ್ಮ ಸರ್ಕಾರದಲ್ಲಿ ಇದೆಯೇ ಪರಮೇಶ್ವರ್ ಅವರೆ ?

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management