Log in
  • ಮುಖಪುಟ
  • ವಿಶ್ವವ್ಯಾಪಿ ಭಾರತೀಯ ಸಂಸ್ಕೃತಿ

ವಿಶ್ವವ್ಯಾಪಿ ಭಾರತೀಯ ಸಂಸ್ಕೃತಿ

ಜಿ.ಆರ್. ಸಂತೊಷ್

ಕಳೆದ ವಾರ ನನ್ನ ಗಮನಕ್ಕೆ ಬಂದ ಎರಡು ಸಂಗತಿಗಳು ನಮ್ಮ ದೇಶದ ಮಹಾನತೆಯ ಕುರಿತು ಹೆಮ್ಮೆ ಮೂಡಿಸುವ ಸಂಗತಿಗಳೆಂದು ನನಗನಿಸುತ್ತಿದೆ. ವಿಯೆಟ್ನಾಂನಲ್ಲಿನ ಸ್ವಾಮಿ ವಿವೇಕಾನಂದ ಕಲ್ಚರಲ್ ಸೆಂಟರ್‌ನ ನಿರ್ದೇಶಕರಾಗಿರುವ ಕನ್ನಡಿಗರೇ ಆದ ಜಿ.ಬಿ ಹರೀಶರು ವಿಶೇಷ ಸುದ್ಧಿ ತಿಳಿಸಲು ಪೋನ್‌ಮಾಡಿದ್ದರು. ಅಲ್ಲಿನ ಟಮ್ ಬಿನ್ ಎನ್ನುವ ಜಿಲ್ಲೆಯಲ್ಲಿ ಹರಿಯುವ ಚಿಯೆನ್ ನದಿಯಲ್ಲಿ ಮರಳು ತೆಗೆಯುತ್ತಿದ್ದಾಗ ಸಿಕ್ಕ ಪುರಾತನ ಸರಸ್ವತಿ ವಿಗ್ರಹದ ಕುರಿತು ಮಾತನಾಡಿದರು. ಇದು ಸುಮಾರು 1400 ವರ್ಷಗಳಷ್ಟು ಹಳೆಯದೆಂದು ಅಂದಾಜಿಸಲಾಗಿದೆ. ಲೆವಾನ್ ಥಾಂಗ್ ಎಂಬ ವ್ಯಕ್ತಿ ತನಗೆ ಸಿಕ್ಕ ಈ ವಿಗ್ರಹವನ್ನು ಬೌದ್ಧಬಿಕ್ಷುಗಳಿರುವ ಧಾರ್ಮಿಕ ಕೇಂದ್ರವೊಂದಕ್ಕೆ ನೀಡಿದ್ದರು. ಈಗ ಅದು ವಿನ್ಲಾಂಗ್ ಪ್ರಾಂತದ ವಸ್ತುಸಂಗ್ರಹಾಲಯದಲ್ಲಿ ಸುರಕ್ಷಿತವಾಗಿದೆ. ಸುಮಾರು ಒಂದೂವರೆ ಮೀಟರ್ (140 ಸೆಂ.ಮೀ) ಉದ್ದವಿರುವ ಈ ಸರಸ್ವತಿ ಶಿಲ್ಪವು 6ನೇ ಶತಮಾನದ್ದಿರಬಹುದು.

ಆಗ್ನೇಯ ಏಷ್ಯಾದ ಬಹಳಷ್ಟು ಕಡೆ ಭಾರತದ ಸಂಸ್ಕೃತಿಯ ಕುರುಹುಗಳು ದೊರೆಯುತ್ತಿದ್ದು ಹಿಂದೂಧರ್ಮ ಈ ಹಿಂದೆ ವಿಶ್ವವ್ಯಾಪಿಯಾಗಿರುವುದರ ಸಂಕೇತವೇ ಆಗಿದೆ. ವಿಯೆಟ್ನಾಂನ ಬಹುಪ್ರದೇಶವೂ ಸೇರಿದಂತೆ ಆ ಕಡೆಗಳಲ್ಲಿ ದಕ್ಷಿಣಭಾರತದ ಶೈವ ಅರಸರಿಂದ ಸ್ಥಾಪಿಸಲ್ಪಟ್ಟಿದ್ದ ಚಂಪಾರಾಜ್ಯ ಇತಿಹಾಸದ ಹಲವು ಕಾಲಘಟ್ಟಗಳಲ್ಲಿ ಹರಡಿದ್ದ ಸಂಗತಿಗಳು ದಾಖಲಾಗಿವೆ. ಇಂತಹ ವಿಗ್ರಹಗಳ ದೊರೆಯುವಿಕೆ ಪ್ರಾಚೀನ ಭಾರತದ ಸಾಗರೋತ್ತರ ಸಂಬಂಧಗಳ ಕುರಿತು ಬೆಳಕು ಚೆಲ್ಲಲು ನೆರವಾಗುತ್ತವೆ.

ಇದೇ ರೀತಿಯ ಮತ್ತೊಂದು ಸುದ್ದಿ ಕಳೆದ ವಾರದ ದಿನಪತ್ರಿಕೆಗಳಲ್ಲಿ ವರದಿಯಾಗಿದೆ. ಉಗ್ರವಾದಿಗಳ ಕರಿನೆರಳಿನಲ್ಲಿ ನರಳಿರುವ ಇರಾಕ್‌ನ ಹೋರೇನ್ ಶೆಖಾನ್ ಪ್ರದೇಶದಲ್ಲಿ ಪತ್ತೆಯಾಗಿರುವ ಪ್ರಾಚೀನ ಚಿತ್ರವು ಶ್ರೀರಾಮನದ್ದೆಂದು ತಿಳಿದು ಬಂದಿದೆ. ಕಿರೀಟವನ್ನು ಧರಿಸಿ ಧನುರ್ಧಾರಿಯಾಗಿರುವ ಶ್ರೀರಾಮನ ಚಿತ್ರದ ಜೊತೆಗೆ ಅವನ ಬಳಿಯೇ ಕುಳಿತ ವಾನರ ಮುಖದ ಹನುಮಂತನ ಮೂರ್ತಿಯೂ ಇರುವುದು ಇದನ್ನು ಮತ್ತಷ್ಟು ಸ್ಪಷ್ಟವಾಗಿಸಿದೆ. ಹಿಂದಿನ ಮೆಸಪಟೋಮಿಯಾ ಸಂಸ್ಕೃತಿ, ಪರ್ಯಾಯ ಸಂಸ್ಕೃತಿಗಳ ನೆಲೆಯಾಗಿದ್ದ ಇರಾನ್, ಇರಾಕ್ ಪ್ರದೇಶಗಳು ಪ್ರಾಚೀನಕಾಲದಿಂದಲೂ ಭಾರತೀಯ ಸಂಸ್ಕೃತಿಯ ಬಲವಾದ ಪ್ರಭಾವವನ್ನು ಹೊಂದಿದ್ದವು. ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆದರೆ ನಮಗೆ ಈ ಕುರಿತ ಬಲವಾದ ಮಾಹಿತಿಗಳು ಲಭ್ಯವಾಗುತ್ತದೆ ಎಂದು ಲಕ್ನೋದಲ್ಲಿರುವ ಅಯೋಧ್ಯಾ ಶೋಧ್‌ಸಂಸ್ಥೆಯ ನಿರ್ದೇಶಕ ಯೋಗೇಂದ್ರ ಪ್ರತಾಪ್‌ಸಿಂಗ್ ಹೇಳುತ್ತಾರೆ.

ಈಗಲೂ ಅಗ್ನಿಯನ್ನು ಆರಾಧಿಸುವ, ಷಣ್ಮುಖನನ್ನು, ನವಿಲನ್ನು ಪೂಜಿಸುವ ಮತ್ತು ಹಿಂದುತ್ವದ ಆಚರಣೆಗಳನ್ನು ಹೋಲುವ ಸಂಪ್ರದಾಯಗಳನ್ನು ಅನೇಕ ಜನಸಮೂಹಗಳು ಅಲ್ಲಿ ಉಳಿಸಿಕೊಂಡು ಬಂದಿವೆ. ಐಎಸ್‌ಐಎಸ್ ಭಯೋತ್ಪಾಕರಿಂದ ತೀವ್ರವಾಗಿ ತೊಂದರೆಗೆ ಒಳಗಾದ ಯಾಜಿದಿ ಜನಾಂಗವೂ ಭಾತದ ಸನಾತನ ಧರ್ಮದ ಸಂಪ್ರದಾಯಗಳನ್ನು ಪಾಲಿಸುವವರೇ ಆಗಿದ್ದಾರೆ.

ಭಾರತೀಯ ಸಂಸ್ಕೃತಿ ವಿಶ್ವವ್ಯಾಪಕತ್ವದ ಕುರಿತು ಏಷ್ಯಾಖಂಡದ ಹೊರತಾಗಿಯೂ ಅನೇಕ ಕಡೆ ಕುರುಹುಗಳು ಕಾಲಕಾಲಕ್ಕೆ ದೊರೆಯುತ್ತಲೇ ಇವೆ. ಆದರೆ ಅವೆಲ್ಲವನ್ನೂ ಒಂದು ಸಮಗ್ರ ಅಧ್ಯಯನಕ್ಕೆ ಒಳಪಡಿಸುವ ಕಾರ್ಯ ನಡೆಯದಿರುವುದು ಖೇದಕರ ಸಂಗತಿ. ಅನೇಕ ಭಾರತೀಯ, ಪಾಶ್ಚಾತ್ಯ ವಿದ್ವಾಂಸರುಗಳು ತಮ್ಮ ವೈಯುಕ್ತಿಕ ನೆಲೆಯಲ್ಲಿ ಈ ಕುರಿತು ಸಂಶೋಧನೆಗಳನ್ನು ನಡೆಸಿರುವುದು ಬಿಟ್ಟರೆ ಬಹುವೆಚ್ಚವನ್ನು ಬಯಸುವ ಈ ರೀತಿಯ ಅಧ್ಯಯನಗಳನ್ನು ನಮ್ಮ ಸರ್ಕಾರಗಳು ಪ್ರೋತ್ಸಾಹಿಸಿದ ಸಂಗತಿಗಳು ಬಹಳ ವಿರಳವೇ ಆಗಿದೆ.

ಕ್ರಿಸ್ತಪೂರ್ವ ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಮಾನವ ಚರಿತ್ರೆಯೆಂಬುದು ಇತ್ತೆಂಬುದನ್ನೇ ಪಾಶ್ಚಾತ್ಯ ಚಿಂತನೆಯನ್ನು ಮೈಗೂಡಿಸಿಕೊಂಡಿರುವ ಇತಿಹಾಸಕಾರರು ಒಪ್ಪುವುದಿಲ್ಲ. ಏಕೆಂದರೆ ಬೈಬಲ್ ಪ್ರಕಾರ ವಿಶ್ವ ಸೃಷ್ಟಿಯಾದದ್ದೇ ಸುಮಾರು ಆರು ಸಾವಿರ ವರ್ಷಗಳ ಹಿಂದೆ ಮಾತ್ರ. ಭಾರತಕ್ಕೆ ಮಿಷನರಿಗಳಾಗಿ, ಇತಿಹಾಸಕಾರರಾಗಿ, ಆಡಳಿತಗಾರರಾಗಿ ಹೀಗೆ ವಿವಿಧ ಪಾತ್ರಗಳನ್ನು ನಿರ್ವಹಿಸಲು ಬಂದವರೇ ನಮ್ಮ ಇತಿಹಾಸವನ್ನು ತಮ್ಮ ಮೂಗಿನ ನೇರಕ್ಕೆ ರಚಿಸಿ ಕೊಟ್ಟದ್ದರಿಂದ ನಾವು ಭಾರತೀಯ ಸಂಸ್ಕೃತಿಯು ವಿಶ್ವದಲ್ಲಿ ಗಳಿಸಿದ್ದ ಮಹತ್ತರ ಸ್ಥಾನವನ್ನು ಕುರಿತು ಅಜ್ಞಾನಿಗಳಾಗಿ ಕುಳಿತಿದ್ದೇವೆ.

ಆಗಾಗ ರೀತಿ ದೊರಕುತ್ತಿರುವ ಗಟ್ಟಿ ಕುರುಹುಗಳ ಕುರಿತು ಇನ್ನಷ್ಟು ಸಂಶೋಧನೆ, ಮತ್ತಷ್ಟು ಪ್ರಚಾರ ಮಾಡುವುದರ ಮೂಲಕ ನಮ್ಮ ನಿಜಸ್ವರೂಪದ ಮತ್ತು ನಮ್ಮ ಸಂಸ್ಕೃತಿಯ ವಿಶಾಲತೆಯ ಅರಿವಿಗೆ ನಾವೇ ಮುಂದಡಿಯಿಡಬೇಕಾಗಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management