ಈಗದು ಗೊತ್ತುಗುರಿಯಿಲ್ಲದೆ, ಸದೃಢ ರಾಜಕೀಯ ನೇತೃತ್ವ ವಿಲ್ಲದೆ ಸೊರಗುತ್ತಿರುವ ಮಲೆನಾಡು. ಲಿಂಗನಮಕ್ಕಿ ಜಲಾಶಯದಿಂದ ಮನೆ ಕಳೆದುಕೊಂಡು ಇಂದಿಗೂ ವಸತಿ ಸಗದೆ ಚಾತಕ ಪಕ್ಷಿಗಳಂತಾಗಿರುವವರ ಮಲೆನಾಡು. ಯುವಕರೆಲ್ಲ ಪಟ್ಟಣಸೇರಿ ಗ್ರಾಮ, ಹಳ್ಳಿಗಳು ಕ್ರಮೇಣ ವೃದ್ಧಾಶ್ರಮಗಳಾಗುತ್ತಿರುವ ಮಲೆನಾಡು. ಕಲ್ಲು-ಮರಳು ಗಣಿಗಾರಿಕೆ, ಮೀಸಲು ಅರಣ್ಯಪ್ರದೇಶಗಳ ಒತ್ತುವರಿಯಿಂದ ನರಳುತ್ತಿರುವ ಮಲೆನಾಡು.
ಇಂತಹ ಮಲೆನಾಡಿನ ಜೀವಸೆಲೆಯಾಗಿರುವ ಶರಾವತಿಯನ್ನು ಬರಿದುಮಾಡುವ ಮಾಸ್ಟರ್ ಪ್ಲಾನ್ಅನ್ನು ರಾಜ್ಯ ಸರ್ಕಾರ ಸಾಕಾರಗೊಳಿಸಲು ಹೊರಟಿರುವುದು ಆಡಳಿತ ವರ್ಗದ ವೈಫಲ್ಯವೋ ಅಥವಾ ಅವರನ್ನಾರಿಸಿದವರ ಮೂಢತನವೋ ಎಂಬುದು ಸ್ವಯಂವಿಮರ್ಶೆಗೆ ಬಿಟ್ಟದ್ದು.
ಅಷ್ಟಕ್ಕೂ ಈ ಯೋಜನೆಯ ಉದ್ದೇಶವಾದರೂ ಏನು? ಬೆಂಗಳೂರಿಗೆ ನೀರು ಕೊಡುವುದು? ನೂರಾರು ಕೆರೆಗಳಿಂದ ಕಂಗೊಳಿಸುತ್ತಿದ್ದ ಬೆಂಗಳೂರನ್ನು ರಿಯಲ್ ಎಸ್ಟೇಟ್
ಮಾಫಿಯಾ ತಿಂದು ತೇಗುವವರೆಗೆ ತೆಪ್ಪಗಿದ್ದು, ಈಗ ಅಂತರ್ಜಲ ಮತ್ತು ಮಳೆನೀರುಗಳೆರಡೂ ನಗರದ ಮೇಲೆ
ಮುನಿಸಿಕೊಂಡಿರುವಾಗ, ಮಲೆನಾಡಿ ಹಸಿರು ಸೆರಗನ್ನೆಳೆಯಲು ದುಶ್ಯಾಸನರಂತೆ ನಿಂತಿರುವವರನ್ನು ಖಂಡಿಸಲು ಇಂದು ಇಡೀ ಶಿವಮೊಗ್ಗ ಒಂದಾಗಿದೆ. ರಾಜ್ಯದ ಯಾವುದಾದರೊಂದು ಭಾಗದಲ್ಲಿ ನಿಜಕ್ಕೂ ಸಿಹಿನೀರಿನ ಸಮಸ್ಯೆ ಇದ್ದದ್ದೇ ಹೌದಾಗಿದ್ದರೆ ಪ್ರೀತಿಯಿಂದ ಒಂದಷ್ಟು ನೀರು ಕೊಡಬಹುದಿತ್ತು. ಆದರೆ ಬೆಂಗಳೂರಿನ ಪ್ರಶ್ನೆ ಹಾಗಲ್ಲ. ಸ್ವಯಂಕೃತ ಕರ್ಮಗಳಿಂದಾಗಿ ಇಂದು ಬೆಂಗಳೂರು ಬರಡಾಗುತ್ತಿದೆ. ಬಹಳಷ್ಟು ಮನೆಗಳಲ್ಲಿ ಮಳೆ ನೀರು ಕೊಯ್ಲಾಗುತ್ತಿಲ್ಲ. ಮನೆಯ ತಾರಸಿಗೆ ಬೀಳುವ ಮಳೆನೀರನ್ನು ಭೂಮಿಯೊಳಗೆ ಕಳುಹಿಸಬೇಕಿರುವುದು ಕಡ್ಡಾಯವಾದರೂ ಬಿಬಿಎಂಪಿ ಅಧಿಕಾರಿಗಳ ಕಣ್ಣಮುಂದೆಯೇ ನಿಯಮಗಳ ಉಲ್ಲಂಘನೆಯಾಗುತ್ತದೆ. ಇದರ ಹಿಂದೆ ಲಂಚ ವ್ಯವಹಾರವೂ ಇರಬಹುದು.
ಬೆಂಗಳೂರಿನ ಸಮಸ್ಯೆಗಳೇನೇ ಇದ್ದರೂ ಅದಕ್ಕೆ ಕಾರಣ ಅಲ್ಲಿನ ಜನಪ್ರತಿನಿಧಿಗಳು ಎಂಬುದರಲ್ಲಿ ಯಾವುದೇ ಸಂದೇಹ ಯಾರಲ್ಲೂ ಇಲ್ಲ. ಹಾಗಾಗಿ ತಮ್ಮ ಪಾಪವನ್ನು ತೊಳೆಯಲು ಮಲೆನಾಡನ್ನು ಬರಡುಮಾಡಲು ಹೊರಟರೆ ಮಲೆನಾಡಿಗರು ಕೈಕಟ್ಟಿಕೊಳ್ಳುವಷ್ಟು ದುರ್ಬಲರೇನಲ್ಲ.